ಸಾರಾಂಶ
ಹೊಸಪೇಟೆ: ಆದಾಯ ತೆರಿಗೆ ಸಲ್ಲಿಕೆಯನ್ನು ಸರ್ಕಾರ ಪಾರದರ್ಶಕ ಹಾಗೂ ಸರಳೀಕರಣಗೊಳಿಸಿದೆ. ದೇಶದ ಅಭಿವೃದ್ಧಿಯಲ್ಲಿ ತೆರಿಗೆದಾರರ ಪಾಲು ಕೂಡ ಮಹತ್ವದ್ದಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ವಿಜಯ್ ಸಾರಥಿ ಹೇಳಿದರು.ನಗರದ ಎಂ.ಜೆ. ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದಾಯ ತೆರಿಗೆ ದಿನಾಚರಣೆಯಲ್ಲಿ ಮಾತನಾಡಿದರು.
ಭಾರತ ದೇಶ ಈಗ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ದೇಶದ ಬಜೆಟ್ ಗಾತ್ರವೇ ₹48 ಲಕ್ಷ ಕೋಟಿ ದಾಟಿದೆ. ಇದರಲ್ಲಿ ನೇರ ತೆರಿಗೆ ಹಾಗೂ ಜಿಎಸ್‌ಟಿ ಪಾತ್ರ ಹಿರಿದಾಗಿದೆ. ಒಂದು ದೇಶ ಬೆಳೆಯಬೇಕಾದರೆ ತೆರಿಗೆ ಪಾವತಿದಾರರ ಪಾತ್ರವೂ ಅತಿಮುಖ್ಯ. ಹಾಗಾಗಿ ಸಕಾಲಕ್ಕೆ ತೆರಿಗೆ ಪಾವತಿ ಮಾಡುವ ಜಾಯಮಾನವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಈಗಾಗಲೇ ತೆರಿಗೆ ಸಲ್ಲಿಕೆ ಸರಳೀಕರಣಗೊಳಿಸಲಾಗಿದೆ. ತೆರಿಗೆ ಪಾವತಿ ಸ್ಲ್ಯಾಬ್ ಪಾರದರ್ಶಕವಾಗಿ ಮಾಡಲಾಗಿದೆ. ಈಗ ಆನ್‌ಲೈನ್‌ನಲ್ಲೇ ತೆರಿಗೆ ಪಾವತಿ ಮಾಡಲು ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ನೋಟಿಸ್‌ಗೂ ಆನ್‌ಲೈನ್‌ನಲ್ಲೇ ಉತ್ತರಿಸಬಹುದಾಗಿದೆ. ಡಿಜಿಟಲ್ ಯುಗದಲ್ಲಿ ನಾವು ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದೇವೆ. ಹಾಗಾಗಿ, ಭಾರತ ದೇಶ ಆರ್ಥಿಕ ಪ್ರಗತಿಯಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದರು.
ದೇಶದ ಬೆಳವಣಿಗೆಯಲ್ಲಿ ದೇಶದ ಎಲ್ಲ ನಾಗರಿಕರು ಕಾರಣೀಭೂತರಾಗುತ್ತಿದ್ದಾರೆ. ಎಲ್ಲರೂ ಹೊಣೆ ಅರಿತು ಸಕಾಲಕ್ಕೆ ಆದಾಯ ತೆರಿಗೆ ಪಾವತಿ ಮಾಡಿದರೆ ಖಂಡಿತ ದೇಶ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ತೆರಿಗೆದಾರರಿಗೆ ಮೊದಲಿದ್ದ ತೊಡಕುಗಳು ಈಗ ಇಲ್ಲ. ಎಲ್ಲವನ್ನೂ ಸರಳೀಕರಣ ಮಾಡಲಾಗಿದೆ ಉದ್ದಿಮೆದಾರರು, ವರ್ತಕರು, ವೇತನದಾರರು ಸಕಾಲಕ್ಕೆ ಆದಾಯ ತೆರಿಗೆ ಪಾವತಿ ಮಾಡಬೇಕು. ಈ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದರು.ಆದಾಯ ತೆರಿಗೆ ಇಲಾಖೆಯ ಜಿಎಸ್‌ಟಿ ಅಧಿಕಾರಿ ತಿರು ಮುರುಗನಾಥನ್ ಮಾತನಾಡಿ, ಆದಾಯ ತೆರಿಗೆಯೊಂದಿಗೆ ಜಿಎಸ್‌ಟಿಯನ್ನು ಸಕಾಲಕ್ಕೆ ಪಾವತಿ ಮಾಡಬೇಕು. ನಾವು ಆದಷ್ಟು ನಿಯಮವನ್ನು ಪಾಲನೆ ಮಾಡಿದರೆ, ಖಂಡಿತ ಅಭಿವೃದ್ಧಿ ಹೊಂದುತ್ತೇವೆ ಎಂದರು.
ವಿಜಯನಗರ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ಗುತ್ತಿಗೆದಾರ ತಿರುಪತಿ ನಾಯ್ಡು ಮಾತನಾಡಿ, ತೆರಿಗೆ ಪಾವತಿದಾರರ ಹಿತವನ್ನು ಸರ್ಕಾರ ಕಾಪಾಡಬೇಕು. ತೆರಿಗೆ ಪಾವತಿದಾರರು ವಿಳಂಬ ಮಾಡಿದರೆ, ಹೆಚ್ಚಿನ ಮೊತ್ತ ದಂಡ ವಿಧಿಸಲಾಗುತ್ತಿದೆ. ಈ ಹಿಂದೆ ಜಿಎಸ್‌ಟಿ ಪಾವತಿ ವಿಳಂಬ ಮಾಡಿದರೆ, ದಂಡ ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಈಗ ದಂಡ ವಿಧಿಸಲಾಗುತ್ತಿದೆ ಎಂದರು.ಹಿರಿಯ ಸಿಎ ಗುಪ್ತಾ ಮಾತನಾಡಿ, ತೆರಿಗೆದಾರರು ಬರೀ ಆನ್‌ಲೈನ್‌ನಲ್ಲೇ ವ್ಯವಹರಿಸುವ ಕೆಲಸ ಆಗುತ್ತಿದೆ. ಅವರ ಮನೆಗಳಿಗೂ ನೋಟಿಸ್ ನೀಡುವ ಕೆಲಸ ಆಗಬೇಕು ಎಂದರು.
ಜಿಲ್ಲೆಯ ಉದ್ದಿಮೆದಾರರು, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಸೇರಿದಂತೆ ತೆರಿಗೆಪಾವತಿದಾರರು ಇದ್ದರು. ಅಂಜಲಿ ಭರತ ನಾಟ್ಯ ತಂಡವರು ನೃತ್ಯ ಪ್ರದರ್ಶಿಸಿದರು. ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಕೆ. ಲೋಕೇಶ್ ನಿರ್ವಹಿಸಿದರು.