ಸಾರಾಂಶ
ತಾಲೂಕು ಮಟ್ಟದ ಉತ್ತಮ ಶಿಕ್ಷಕ, ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಲಬುರ್ಗಾಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನಾಚರಣೆ ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕ, ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಕರಾದವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ರಾಷ್ಟ್ರಾಭಿಮಾನ ಬೆಳೆಸುವ ಪ್ರೇರಕ ಶಕ್ತಿಗಳಾಗಿ ಕಾರ್ಯೋನ್ಮುಖರಾಗಬೇಕು ಎಂದರು.ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯಗಳ ಜೊತೆಗೆ ರಾಷ್ಟ್ರೀಯ ಮೌಲ್ಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡುವ ಹೊಣೆ ಶಿಕ್ಷಕರ ಮೇಲಿದೆ. ಮಹಿಳಾ ಶಿಕ್ಷಕಿಯರು ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ. ಆದರೆ ಮಹಿಳಾ ಶಿಕ್ಷಕಿಯರು ಮಕ್ಕಳಿಗೆ ಕಲಿಕೆಗೆ ಹೆಚ್ಚು ಶ್ರಮವಹಿಸುತ್ತಿದ್ದಾರೆ. ನನ್ನ ಕ್ಷೇತ್ರದ ಮಕ್ಕಳ ಫಲಿತಾಂಶ ಉತ್ತಮವಾಗಿ ಬರುವಲ್ಲಿ ಎಲ್ಲ ಶಿಕ್ಷಕರ ಪ್ರಯತ್ನವೇ ಕಾರಣವಾಗಿದೆ. ನಾನು ಕನ್ನಡ ಶಾಲೆಗಳಿಗೆ ನೀಡುವಷ್ಟು ಸ್ಥಾನಮಾನ, ಇಂಗ್ಲಿಷ್ ಶಾಲೆ ಹಾಗೂ ಭಾಷೆಗೆ ಹೆಚ್ಚು ನೀಡುವುದಿಲ್ಲ. ಕನ್ನಡ ಭಾಷೆಗೆ ಇರುವಷ್ಟು ಸೂಕ್ತ ಸ್ಥಾನಮಾನ ಯಾವ ಭಾಷೆಗೊ ಇಲ್ಲ. ಹೀಗಾಗಿ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು, ಕಲಿತು ಉನ್ನತ ಹುದ್ದೆ ಪಡೆಯಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿದರು.ಬಿಇಒ ಅಶೋಕ ಗೌಡರ ಸಭೆ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳದ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಶಾಲೆಗಳಿಂದ ನಿವೃತ್ತಗೊಂಡ ಅನೇಕ ಶಿಕ್ಷಕ-ಶಿಕ್ಷಕಿಯರನ್ನು ಗೌರವಿಸಲಾಯಿತು.
ಅತಿಥಿಗಳಾಗಿ ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ಎ.ಜಿ. ಭಾವಿಮನಿ, ಯಂಕಣ್ಣ ಯರಾಶಿ, ಡಾ. ಶಿವನಗೌಡ ದಾನರೆಡ್ಡಿ, ನಾಗೇಶ, ವೈ.ಜಿ. ಪಾಟೀಲ್, ಮಹೇಶ ಸಬರದ, ಎಸ್.ವ್ಹಿ. ಧರಣಾ, ಬಸವರಾಜ ಮಾಸ್ತಿ, ಸಿದ್ಲಿಂಗಪ್ಪ ಶ್ಯಾಗೋಟಿ, ಎಫ್.ಎಂ. ಕಳ್ಳಿ, ವೀರಭದ್ರಪ್ಪ ಅಂಗಡಿ, ಟಿ.ಜಿ. ದಾನಿ, ಮೆಹಬೂಬ್ ಬಾದಶಾಹ, ಬಾಲದಂಡಪ್ಪ ತಳವಾರ, ಸುರೇಶ ಛಲವಾದಿ, ಬಸವರಾಜ ಅಂಗಡಿ ಮತ್ತಿತರರು ಇದ್ದರು.