ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ವಿದ್ಯಾರ್ಥಿಗಳಿಗೆ ಶಿಸ್ತು, ಸಂಸ್ಕಾರದ ಜತೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಹಾಗೂ ಅವರಲ್ಲಿ ದೇಶಪ್ರೇಮ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದಾಗಿದೆ ಎಂದು ಶಾಸಕ ಎಚ್.ವಿ. ವೆಂಕಟೇಶ್ ಹೇಳಿದರು. ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಪದವಿ ಪೂರ್ವ ಕಾಲೇಜು ಸಮೀಪದ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗಿಂತ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಹೆಚ್ಚು ಶಿಸ್ತು ಕಂಡುಬರುತ್ತಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಸ್ತು ರೂಪಿಸುವಲ್ಲಿ ದೈಹಿಕ ಶಿಕ್ಷಕರು ಆಸಕ್ತಿ ವಹಿಸುತ್ತಿಲ್ಲ. ಈ ಬಗ್ಗೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಗಮನ ಹರಿಸಬೇಕು ಎಂದರು.
ತಾಲೂಕಿನಲ್ಲಿ ರೈತರ 15 ಸಾವಿರ ಎಕರೆ ಜಮೀನುಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಸಾಧ್ಯವಾಗಿದೆ ಎಂದ ಅವರು, ತಾಲೂಕಿನ 50 ಕೆರೆಗಳಿಗೆ ನದಿ ಮೂಲದ ನೀರು ತುಂಬಿಸುವ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವ ಹಾಗೂ ಅಧಿಕಾರಿಗಳ ಜತೆ ಶೀಘ್ರ ಚರ್ಚೆ ನಡೆಸಲಿರುವುದಾಗಿ ಹೇಳಿದರು.ತಹಸೀಲ್ದಾರ್ ವರದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಇಒ ಜಾನಕಿ ರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಣಮ್ಮ, ಪುರಸಭಾ ಸದಸ್ಯರಾದ ಪಿ.ಎಚ್.ರಾಜೇಶ್, ತೆಂಗಿನಕಾಯಿ ರವಿ, ರೈತ ಸಂಘದ ಅಧ್ಯಕ್ಷ ನಾಗಭೂಷಣರೆಡ್ಡಿ, ನರಸಿಂಹರೆಡ್ಡಿ, ಸಮಾಜ ಸೇವಕ ವೆಂಕಟಮ್ಮನಹಳ್ಳಿಯ ಬತ್ತಿನೇನಿ ನಾಗೇಂದ್ರ ರಾವ್, ನಾಗಭೂಷಣ್ ರೆಡ್ಡಿ, ಮೊಹಮ್ಮದ್ ಇಮ್ರಾನ್, ಗುಟ್ಟಹಳ್ಳಿ ಅಂಜಪ್ಪ, ಆಲಿ, ನಗರ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್‌ಸ್ಪೆಕ್ಟರ್ ಗಿರೀಶ್, ಹಿರಿಯ ಪತ್ರಕರ್ತ ಎಸ್.ಎನ್. ಪ್ರಸನ್ನಮೂರ್ತಿ, ಸಂಘಸಂಸ್ಥೆಗಳ ಪ್ರತಿನಿಧಿ ಆರ್.ಟಿ.ಖಾನ್ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.