ಸಾರಾಂಶ
ಅರಸೀಕೆರೆ: ಮಠ, ಮಂದಿರಗಳು ಕೇವಲ ಧಾರ್ಮಿಕ ಕೇಂದ್ರಗಳು ಮಾತ್ರವಲ್ಲ. ನಾಗರೀಕತೆ ಎಂಬ ನಾಗಾಲೋಟದಲ್ಲಿ ಸಾಗುತ್ತಿರುವ ಮನುಷ್ಯನಿಗೆ ದಯೆ, ಧರ್ಮ, ಮಾನವೀಯತೆ ದಾರಿ ತೋರುವ ಜಾಗೃತ ಕೇಂದ್ರಗಳೆಂದು ಆದಿಚುಂಚನಗಿರಿ ಆದಿಹಳ್ಳಿ ಶಾಖಾಮಠದ ಶಿವಪುತ್ರನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಗಂಡಸಿ ಗ್ರಾಮದಲ್ಲಿ ಭಕ್ತವೃಂದ ಹಾಗೂ ಗ್ರಾಮಸ್ಥರ ಸಹಕಾರದಿಂದ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮನ ದೇವಾಲಯದ ಕಳಸ ಸ್ಥಾಪನೆ ಹಾಗೂ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತವೃಂದಕ್ಕೆ ಆಶೀರ್ವಚನ ನೀಡಿದರು.ಸಂಪತ್ತು ಇದ್ದಾಗ ದಾನ- ಧರ್ಮ, ಅಧಿಕಾರವಿದ್ದಾಗ ಜನರ ಸೇವೆ ಮಾಡುವ ಮನುಷ್ಯನ ಬದುಕು ನಿಜಕ್ಕೂ ಸಾರ್ಥಕವೆನಿಸಲಿದೆ. ಈ ನಿಟ್ಟಿನಲ್ಲಿ ಗಂಡಸಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಗ್ರಾಮ ದೇವತೆಗಳ ಹಳೆ ದೇವಾಲಯವನ್ನು ನವೀಕರಿಸಿ ದೇವಿಯರ ಕೃಪೆಗೆ ಪಾತ್ರರಾಗಿರುವುದು ನಿಜಕ್ಕೂ ಶ್ಲಾಘನೀಯ ವಿಷಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ದೇವಾಲಯದ ಲೋಕಾರ್ಪಣೆ ಅಂಗವಾಗಿ ಕಳೆದ ಮೂರು ದಿನಗಳಿಂದ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಗ್ರಾಮ ದೇವತೆಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಾಲಯದ ಸಂಪ್ರದಾಯದಂತೆ ನಡೆದವು.ಅರ್ಚಕರಾದ ಕೃಷ್ಣಪ್ರಸಾದ್ ಶರ್ಮಾ ಮತ್ತು ಸುಬ್ಬರಾವ್ ತಂಡ ಗಣಪತಿ ಹೋಮ ಸೇರಿ ಚಂಡಿಕಾ ಹೋಮ ನೆರವೇರಿಸಿದರು. ಪೂರ್ಣಾಹುತಿ ಸಂದರ್ಭದಲ್ಲಿ ಶಿವಪುತ್ರನಾಥ ಸ್ವಾಮೀಜಿ, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದ್ಯಾವೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್, ಗ್ರಾಮದ ಮುಖಂಡರಾದ ನಂಜುಂಡಪ್ಪ ಸೇರಿ ಇತರರು ಉಪಸ್ಥಿತರಿದ್ದರು. ಮಹಾ ಮಂಗಳಾರತಿ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ದೇವಸ್ಥಾನದ ಅಭಿವೃದ್ಧಿ ಸಮಿತಿ ವತಿಯಿಂದ ಸಾಮೂಹಿಕ ಅನ್ನಸಂತಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.