ದೇಶವು ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಮುನ್ನಡೆಯುತ್ತಿದ್ದರೂ ಸಹ ಬಾಲ್ಯ ವಿವಾಹ, ಮಾದಕ ವಸ್ತುಗಳ ದುರುಪಯೋಗದಂತಹ ಸಾಮಾಜಿಕ ಸಮಸ್ಯೆಗಳು ಇನ್ನೂ ಸಮಾಜದ ಬೆಳವಣಿಗೆಗೆ ಅಡ್ಡಿಯಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯೋನ್ಮುಖರಾಗಬೇಕೆಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಾಮಾಜಿಕ ಸಮಾಜ ವಿರೋಧಿ ಚಟುವಟಿಕೆಗಳು ವಿರುದ್ಧ ಕಾನೂನು ಮಾತ್ರ ಸಾಕಾಗುವುದಿಲ್ಲ, ಸಾರ್ವಜನಿಕರ ಜಾಗೃತಿ ಮತ್ತು ಸಹಭಾಗಿತ್ವವೇ ಶಾಶ್ವತ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ. ವಡಿಗೇರಿ ಅಭಿಪ್ರಾಯಪಟ್ಟರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಹಾಗೂ ಮಾದಕ ವ್ಯಸನ ತಡೆಗಟ್ಟುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಾನೂನು ಅರಿವು ಮತ್ತು ನೆರವು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶವು ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಮುನ್ನಡೆಯುತ್ತಿದ್ದರೂ ಸಹ ಬಾಲ್ಯ ವಿವಾಹ, ಮಾದಕ ವಸ್ತುಗಳ ದುರುಪಯೋಗದಂತಹ ಸಾಮಾಜಿಕ ಸಮಸ್ಯೆಗಳು ಇನ್ನೂ ಸಮಾಜದ ಬೆಳವಣಿಗೆಗೆ ಅಡ್ಡಿಯಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯೋನ್ಮುಖರಾಗಬೇಕೆಂದು ಸಲಹೆ ನೀಡಿದರು.

ಪೋಷಕರು ಬಾಲ್ಯವಿವಾಹ ಕಾನೂನುಬಾಹಿರ ಎಂಬುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು ಎಂದು ತಿಳಿಸಿದ ಅವರು, ಮಕ್ಕಳಲ್ಲಿ ಸಹಜವಾಗಿರುವ ಪ್ರೀತಿ ಆಕರ್ಷಣೆಯನ್ನು ಸರಿಯಾದ ಮಾರ್ಗದರ್ಶನದ ಮೂಲಕ ನಿಯಂತ್ರಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು. ತಪ್ಪು ಸಹವಾಸದಿಂದ ಮಕ್ಕಳು ದಾರಿತಪ್ಪದಂತೆ ಆರಂಭಿಕ ಹಂತದಲ್ಲೇ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ವಕೀಲ ಯಶವಂತ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿಯೊಂದಿಗೆ ಮುಂದೆ ಸಾಗಬೇಕು. ಸಣ್ಣ ವಯಸ್ಸಿನಲ್ಲೇ ದುಶ್ಚಟಗಳಿಗೆ ಬಲಿಯಾದರೆ ಜೀವನವೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಸಿದರು. ಮಾದಕ ದ್ರವ್ಯಗಳ ಸೇವನೆ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದ ಅವರು, ಗಾಂಜಾ, ಡ್ರಗ್ಸ್ ಮೊದಲಾದ ಮಾದಕ ವಸ್ತುಗಳು ಹದಿಹರಿಯದ ಮಕ್ಕಳ ಕೈ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಈ ಬಗ್ಗೆ ಸಾರ್ವಜನಿಕರು ಹಾಗೂ ಸ್ವಯಂಸೇವಾ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ ಅಥವಾ ಕಾನೂನು ಸೇವಾ ಸಮಿತಿಗೆ ಮಾಹಿತಿ ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹಿರಿಯ ವಕೀಲ ವಿಜಯ ಕುಮಾರ್ ಮಾತನಾಡಿ, ಮಹಿಳೆಯರ ಹಕ್ಕು ಮತ್ತು ರಕ್ಷಣೆಗೆ ಸಂಬಂಧಿಸಿದ ವಿವಿಧ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಆದರೆ ಕೆಲವು ಸಂದರ್ಭಗಳಲ್ಲಿ ಈ ಕಾಯ್ದೆಗಳ ದುರುಪಯೋಗವಾಗುತ್ತಿರುವುದು ದುಃಖಕರ ಸಂಗತಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಸಂತೋಷ್ ಕುಮಾರ್ ಅವರು ವಹಿಸಿದ್ದರು. ಗ್ರೇಡ್–2 ತಹಸೀಲ್ದಾರ್ ಪಾಲಾಕ್ಷ, ಕ್ಷೇತ್ರ ಸಮನ್ವಯಾಧಿಕಾರಿ ಶಂಕರ್, ಶಿಶು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಯೋಗೀಶ್, ನಗರ ವೃತ್ತ ನಿರೀಕ್ಷಕರಾದ ಕೃಷ್ಣ ಕುಮಾರ್, ವಿವೇಕಾನಂದ ಹಾಗೂ ಅನಂತ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಗಳು, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಯಕ್ರಮ ಸಂಯೋಜಕ ಶಿವಾನಂದ ನಾಯ್ಕ್ ಹಾಗೂ ನ್ಯಾಯಾಂಗ ಇಲಾಖೆಯ ಪ್ರಿಯಾಂಕ ಉಪಸ್ಥಿತರಿದ್ದರು.