ಗದಗ: ಪೊಲೀಸ್ ಇಲಾಖೆ ಸಮಾಜದ ಶಾಂತಿ, ಸುವ್ಯವಸ್ಥೆ ಮತ್ತು ಭದ್ರತೆಯನ್ನು ಕಾಪಾಡುವ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿವೃತ್ತ ಎಎಸ್ಐ ಎಚ್.ಡಿ. ಗಡಾದ ತಿಳಿಸಿದರು.
ಸಮೀಪದ ಮಲ್ಲಸಮುದ್ರದ ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ ಗುರುವಾರ ಜಿಲ್ಲಾ ಸಶಸ್ತ್ರ ಮೀಸಲು ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲದೆ, ಜನರಲ್ಲಿ ಭದ್ರತಾ ಭಾವನೆ ಮೂಡಿಸುವುದು ಪೊಲೀಸರ ಪ್ರಮುಖ ಕರ್ತವ್ಯವಾಗಿದೆ. ಇದನ್ನು ಇಲಾಖೆ ಶಿಸ್ತುಬದ್ಧವಾಗಿ ನಿರ್ವಹಿಸುತ್ತಿದೆ ಎಂದರು.ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸುತ್ತಾ, 1965ರಿಂದ ಧ್ವಜ ದಿನಾಚರಣೆ ಮಾಡುತ್ತಾ ಬಂದಿದೆ. ಪೊಲೀಸ್ ಇಲಾಖೆ ಕಾಯ್ದೆ ಜಾರಿಗೆ ಬಂದ ಹಿನ್ನೆಲೆ ಧ್ವಜ ದಿನಾಚರಣೆ ನಡೆದು ಬಂದಿದೆ. ಸೇನೆಗೆ ಇದ್ದಂತೆ ಪೊಲೀಸ್ ಇಲಾಖೆಯಲ್ಲಿ ಸಹ ಧ್ವಜ ದಿನಾಚರಣೆ ನಡೆಯುತ್ತಿದೆ ಎಂದರು.ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಗೌರವಿಸುವ ರೂಢಿ ನಡೆದುಬಂದಿದೆ. ಪೊಲೀಸ್ ಧ್ವಜ ಮಾರಾಟ ಮಾಡಿ ಬಂದ ಹಣದಲ್ಲಿ ಶೇ. 50ರಷ್ಟು ಕೇಂದ್ರ ಮಿಸಲು ಪಡೆಗೆ ಹಾಗೂ ಶೇ. 50ರಷ್ಟು ಹಣವನ್ನು ರಾಜ್ಯದ ನಿವೃತ್ತ ಪೊಲೀಸ್ ನಿಧಿಗೆ ಬಳಕೆ ಮಾಡಲಾಗುತ್ತಿದೆ. ಇದರಿಂದ ಅನೇಕರಿಗೆ ಸಹಾಯ ಮಾಡಲಾಗುತ್ತಿದೆ. ಪೊಲೀಸ್ ಧ್ವಜವು ಶೌರ್ಯ, ತ್ಯಾಗ ಮತ್ತು ಕರ್ತವ್ಯ ನಿಷ್ಠೆಯ ಸಂಕೇತವಾಗಿದ್ದು, ಈ ದಿನದ ಆಚರಣೆ ಮೂಲಕ ಪೊಲೀಸ್ ಸಿಬ್ಬಂದಿಯಲ್ಲಿ ಸೇವಾಭಾವನೆ, ಶಿಸ್ತಿನ ಮೌಲ್ಯಗಳು ಮತ್ತು ದೇಶಭಕ್ತಿಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ ಎಂದರು.ಸಮಾಜದ ಸ್ವಾಸ್ಥ್ಯ ಕಾಪಾಡುವುಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಪರಾಧಗಳನ್ನು ತಡೆಗಟ್ಟುವುದು, ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು, ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸ್ಪಂದಿಸುವುದು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವಾರು ಸೇವೆಗಳ ಮೂಲಕ ಪೊಲೀಸರು ಸಮಾಜದ ನೈತಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಸ್ಥಿರವಾಗಿಡಲು ಶ್ರಮಿಸುತ್ತಿದ್ದಾರೆ. ಕೋವಿಡ್ ಸೇರಿದಂತೆ ಅನಾಹುತ ಸಂದರ್ಭಗಳಲ್ಲಿಯೂ ಪೊಲೀಸ್ ಸಿಬ್ಬಂದಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿ ಜನರ ರಕ್ಷಣೆಗೆ ತಮ್ಮ ಜೀವವನ್ನೇ ಪಣಕ್ಕಿಟ್ಟ ಉದಾಹರಣೆಗಳು ಸಾಕಷ್ಟಿವೆ ಎಂದರು.ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಂತೇಶ ಸಜ್ಜನರ, ನರಗುಂದ ಡಿವೈಎಸ್‌ಪಿ ಪ್ರಭುಗೌಡ ಕೆರೆದಳ್ಳಿ, ಮಹನೀಯರಾದ ಸಂಜನಾ ರೋಹನ್ ಜಗದೀಶ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್.ಎನ್. ಬಳ್ಳಾರಿ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಹಲವು ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.