ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮಾನವ ಕಳ್ಳ ಸಾಗಾಣಿಕೆ ಸಂಪೂರ್ಣ ನಿರ್ಮೂಲನೆ ಮಾಡಿ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ (ಕೆಪಿಎ) ನಿರ್ದೇಶಕ ಎಸ್.ಎಲ್. ಚೆನ್ನಬಸವಣ್ಣ ತಿಳಿಸಿದರು.ನಗರದ ಕೆಪಿಎನಲ್ಲಿ ವಿಹಾನ್ ಸಂಸ್ಥೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಾನವ ಕಳ್ಳಸಾಗಾಣೆ ವಿರೋಧಿ ಹಾಗೂ ನಿರ್ಮೂಲನೆಯಲ್ಲಿ ಪೋಲೀಸರ ಪಾತ್ರ ಕುರಿತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆ ವಿಷಯವು ಗಂಭೀರವಾದ ಸಂಕೀರ್ಣ ಜಾಗತಿಕ ಸಮಸ್ಯೆಯಾಗಿದ್ದು, ಬದಲಾದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಇದು ತನ್ನ ವ್ಯಾಪ್ತಿಯನ್ನು ವ್ಯಾಪಕವಾಗಿ ವಿಸ್ತರಿಸಿದೆ. ಈ ಮಾಫಿಯಾಕ್ಕೆ ಸಮಾಜದ ದುರ್ಬಲ ವರ್ಗಗಳು ಸುಲಭ ತುತ್ತಾಗುತ್ತಿದ್ದು, ಆರ್ಥಿಕ ಬಡತನ ಅಥವಾ ಮಾಫಿಯಾಗಳು ಬೀಸುವ ಬಲೆಗೆ ಬೀಳುತ್ತಿದ್ದಾರೆ ಎಂದರು.ಇದನ್ನು ತಡೆಯಲು ಹಲವು ಕಾನೂನುಗಳಿದ್ದು, ಈ ಪಿಡುಗಿನ ನಿರ್ಮೂಲನೆಗಾಗಿ ಪೊಲೀಸ್ ವ್ಯವಸ್ಥೆ, ಸರ್ಕಾರದ ಸಂಸ್ಥೆಗಳು ಹಾಗೂ ಇತರೆ ಸಂಘ- ಸಂಸ್ಥೆಗಳು ಪರಿಣಾಮಕಾರಿಯಾಗಿ ಶ್ರಮಿಸುತ್ತಿದ್ದರೂ ಹೊಸ ಮಾರ್ಗಗಳು ಹಾಗೂ ತಂತ್ರಜ್ಞಾನದ ಮೂಲಕ ಮಾನವ ಕಳ್ಳ ಸಾಗಾಣಿಕೆ ಚಟುವಟಿಕೆಯಲ್ಲಿ ಪಾತಕಿಗಳು ತೊಡಗುತ್ತಿದ್ದು ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ ಎಂದರು.
ಇಂತಹ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸರ್ಕಾರಿ ಸಂಘ ಸಂಸ್ಥೆಗಳು ಹಾಗೂ ಸರ್ಕಾರೇತರ ವಿವಿಧ ಸಂಘ ಸಂಸ್ಥೆಗಳೊಡನೆ ಸಮನ್ವಯತೆ ಸಾಧಿಸಿ, ಮಾನವ ಕಳ್ಳಸಾಗಾಣಿಕೆಯಂತಹ ಸಮಾಜ ವಿರೋಧಿ ಹಾಗೂ ಮಾನವ ವಿರೋಧಿ ಚಟುವಟಿಕೆಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ಬಲಿಯಾದ ಸಂತ್ರಸ್ತರಿಗೆ ರಕ್ಷಣೆ ನೀಡಿ, ಅವರಿಗೆ ಮಾನಸಿಕ ಸ್ಥೈರ್ಯ ತುಂಬುವುದೂ ಅಲ್ಲದೇ, ಸಂತ್ರಸ್ತರಿಗಾಗಿ ಲಭ್ಯವಿರುವ ಪುನರ್ವಸತಿ ಸೌಲಭ್ಯಗಳು ಹಾಗೂ ಕಾನೂನು ನೆರವನ್ನು ಒದಗಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಬೇಕು ಎಂದರು.
ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಪೊಲೀಸ್ ಘಟಕಗಳಿಂದ ಇಬ್ಬರು ಡಿವೈಎಸ್ಪಿ, 4 ಇನ್ಸ್ ಪೆಕ್ಟರ್, 24 ಎಸ್ಐ ದರ್ಜೆಯ ಅಧಿಕಾರಿಗಳು ಸೇರಿದಂತೆ ಒಟ್ಟು 31 ಸೇವಾನಿರತ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.ಕಾರ್ಯಾಗಾರದ ಸಂಯೋಜಕ ಎಸ್. ವೆಂಕಟೇಶ್, ವಿಹಾನ್ ಸಂಸ್ಥೆಯ ರೋವಿನಾ ಬಾಸ್ಟಿನ್, ಅಂಬರೀಷ್ ಜೈರಾಜ್ ಹಾಗೂ ಕೆಪಿಎ ಅಧಿಕಾರಿಗಳು ಇದ್ದರು.