ಕೃಷಿ ಕ್ಷೇತ್ರದಲ್ಲಿ ಶೇ. 70ರಿಂದ 80ರಷ್ಟು ಮಹಿಳೆಯರು ನಿರಂತರವಾಗಿ ತೊಡಗಿಸಿಕೊಂಡು ಪ್ರತಿಯೊಂದು ಹಂತದಲ್ಲೂ ಜವಾಬ್ದಾರಿಯುತವಾಗಿ ಕೆಲಸ
ಗದಗ: ಜನಸಾಮಾನ್ಯರ ಹಸಿವು ನೀಗಿಸುವಲ್ಲಿ ರೈತರ ಜತೆಗೆ ರೈತ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು ಎಂದು ಹುಲಕೋಟಿಯ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಶಿವಕುಮಾರ ಹೇಳಿದರು.
ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಹಿಳಾ ಕಿಸಾನ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ಸುಧಾ ಮಂಕಣಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಶೇ. 70ರಿಂದ 80ರಷ್ಟು ಮಹಿಳೆಯರು ನಿರಂತರವಾಗಿ ತೊಡಗಿಸಿಕೊಂಡು ಪ್ರತಿಯೊಂದು ಹಂತದಲ್ಲೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಮಹಿಳಾ ಕಿಸಾನ್ ದಿನಾಚರಣೆ ಹೆಚ್ಚು ಅರ್ಥಪೂರ್ಣವಾಗಿದೆ ಎಂದರು.
ಹುಲಕೋಟಿ ಗ್ರಾಪಂ ಮಾಜಿ ಅಧ್ಯಕ್ಷೆ ನಾಗರತ್ನಾ ಬಾಳಿಹಳ್ಳಿಮಠ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಮಂಜುಪ್ರಕಾಶ್ ಪಾಟೀಲ ಅವರು ಮಹಿಳಾ ಕಿಸಾನ್ ದಿನಾಚರಣೆಯ ಹಿನ್ನೆಲೆ ಮತ್ತು ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಮತ್ತು ವಿಜ್ಞಾನಿಗಳ ಮಾರ್ಗದರ್ಶನದಿಂದ ಯಶಸ್ವಿ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಶ್ಯಾಮಲಾ ಕರೂರ ಅವರು ತಮ್ಮ ಉದ್ಯಮ ಹಾಗೂ ಕೆವಿಕೆ ತಾಂತ್ರಿಕ ನೆರವಿನ ಅನುಭವಗಳನ್ನು ಹಂಚಿಕೊಂಡರು.ಇದೇ ಸಂದರ್ಭದಲ್ಲಿ ಸಾಧಕಿಯರಾದ ನಾಗರತ್ನಾ ಬಾಳಿಹಳ್ಳಿಮಠ ಹಾಗೂ ಶ್ಯಾಮಲಾ ಕರೂರ ಅವರನ್ನು ಗೌರವಿಸಲಾಯಿತು.
ನಿವೃತ್ತ ವಿಜ್ಞಾನಿ ಎಸ್.ಕೆ. ಮುದ್ಲಾಪುರ, ಕೊರಮಂಡಲ್ ಕಂಪನಿಯ ಬೇಸಾಯ ಶಾಸ್ತ್ರಜ್ಞ ವಿದ್ಯಾಸಾಗರ ಸೇರಿದಂತೆ 85ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು. ಎನ್.ಎಚ್. ಭಂಡಿ ಸ್ವಾಗತಿಸಿದರು, ಡಾ. ಮಂಜುಪ್ರಕಾಶ್ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವಿನಾಯಕ ನಿರಂಜನ್ ವಂದಿಸಿದರು.