ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರ ಮಹತ್ವ ಪಡೆದಿದೆ-ಸ್ವಾಮೀಜಿ

| Published : Apr 14 2024, 01:58 AM IST

ಸಾರಾಂಶ

ಸನಾತನ ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರ ಅತಿ ಹೆಚ್ಚು ಮಹತ್ವವನ್ನು ಪಡೆದಿದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗುತ್ತಲ: ಸನಾತನ ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರ ಅತಿ ಹೆಚ್ಚು ಮಹತ್ವವನ್ನು ಪಡೆದಿದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ 1008 ಮಹಿಳೆಯರಿಂದ 1008 ಕುಬೇರಯಂತ್ರ ಸಹಿತ ಲಕ್ಷ್ಮೀ ಪೂಜಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.ಮಹಿಳೆಯು ಮಗಳಾಗಿ, ತಾಯಿಯಾಗಿ, ಹೆಂಡತಿಯಾಗಿ, ಸಂಸಾರವನ್ನು ಸಾಗಿಸುವ ತಾಯಿಯ ಮಹತ್ವ ಅಪಾರವಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ಸಾಕು ಏನಾದರೂ ಸಾಧಿಸಬಲ್ಲರು, ಧರ್ಮಾಚರಣೆಯಿಂದ ಬದುಕು ಹಸನವಾಗುವುದು. ಅದರಲ್ಲೂ ಸಂಪತ್ತಿನ ಒಡತಿಯಾಗಿರುವ ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ನಮ್ಮಲ್ಲಿರುವ ಸಂಪತ್ತು ಅಷ್ಟೇ ಅಲ್ಲದೇ ಆರೋಗ್ಯ ಆಯಸ್ಸು ವೃದ್ಧಿಯಾಗುವದು ಎಂದರು. ಶ್ರೀಮಠದಲ್ಲಿ 1008 ಮಹಿಳೆಯರಿಂದ ಲಕ್ಷ್ಮೀ ಪೂಜಾ ಮಾಡಿಸಬೇಕೆಂಬುದು ಬಹುದಿನಗಳ ಸಂಕಲ್ಪವಾಗಿತ್ತು, ಅದು ನಿಮ್ಮೆಲ್ಲರ ಸಹಕಾರದಿಂದ ನೇರವೇರಿದ್ದು ನಮಗೆ ಸಂತಸವನ್ನುಂಟುಮಾಡಿದೆ. ನಮ್ಮ ಶ್ರೀಮಠವು ಸದಾಕಾಲ ಧರ್ಮ ಸಂಸ್ಕಾರವನ್ನು ಪಸರಿಸುವ ಕಾರ್ಯ ಮಾಡುತ್ತಾ ಬಂದಿದ್ದು, ಭಕ್ತರ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಮಹಾಲಕ್ಷ್ಮೀಯ ಪೂಜೆಯನ್ನು ಆಯೋಜಿಸಲಾಗಿದೆ ಎಂದರು. ಇದಕ್ಕೂ ಪೂರ್ವದಲ್ಲಿ ಲಕ್ಷ್ಮೀ ಕಳಸ ಪೂಜಾ ಮಹಾ ಮಂಗಳಾರುತಿ ಕಾರ್ಯಕ್ರಮ ನೇರವೇರಿಸಿದರು.ಪೂಜಾಕೈಂಕರ್ಯದಲ್ಲಿ ಪಾಲ್ಗೂಳ್ಳಲು ಹಾವೇರಿ, ಗದಗ, ಧಾರವಾಡ, ವಿಜಯನಗರ, ದಾವಣಗೆರೆ, ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ನಂತರ ಲಲಿತಮ್ಮ ತಾವರೆ ಕುಟುಂಬದವರಿಂದ ಅನ್ನಸಂರ್ತಪಣೆ ಜರುಗಿತು. ಪೂಜಾ ವಿಧಿ ವಿಧಾನಗಳನ್ನು ರಂಭಾಪುರಿ ಪೀಠದಗುರುಕುಲದ ಪ್ರಾಧ್ಯಾಪಕ ಸಿದ್ದಲಿಂಗಶಾಸ್ತ್ರಿ ಹಾಗೂ ಶ್ರೀಮಠದ ಧಾರ್ಮಿಕ ಪಾಠಶಾಲೆಯ ವಟುಗಳು ನೇರವೇರಿಸಿದರು.ಕಾರ್ಯಕ್ರಮದಲ್ಲಿ ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ಗುರುಮಹಾಂತಯ್ಯ ಆರಾಧ್ಯಮಠ, ಜಾತ್ರಾಮಹೋತ್ಸವ ಸೇವಾಸಮಿತಿ ಅಧ್ಯಕ್ಷ ಸುನೀಲ ತಾವರೆ, ಉಪಾಧ್ಯಕ್ಷ ನಾಗರಾಜ ಹುಲಗೂರ ಸದಸ್ಯರಾದ ನಿಂಗಪ್ಪ ಹಳ್ಳಕಾರ, ಮಾಲತೇಶ ಅಂಗಡಿ, ಮಾಲತೇಶ ಮಾಳದಕರ, ವೀರಣ್ಣ ವಿಭೂತಿ, ಶಿವಬಸಪ್ಪ ಹುಂಬಿ, ನಾಗಪ್ಪದಾನಗೌಡ್ರ, ಅಶೋಕರೆಡ್ಡಿ ಮೈದೂರ ಸೇರಿದಂತೆ ಗ್ರಾಮಸ್ಥರು ಇದ್ದರು. ಗಾಯಕ ಹನುಮಂತಪ್ಪ ಮೇಟಿ, ಸಂಗಡಿಗರಿಂದ ಪ್ರಾರ್ಥನೆ ನೇರವೇರಿಸಿದರು, ಗುರುಶಾಂತಸ್ವಾಮಿ ಹಿರೇಮಠ ನಿರೂಪಿಸಿದರು.

ಇಂದು ಕಳಸಾರೋಹಣ: ಬಾಳೇಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಭಾನುವಾರ ಬೆಳಗ್ಗೆ 10ಕ್ಕೆ ನೆಗಳೂರ ಸಂಸ್ಥಾನ ಹಿರೇಮಠದಲ್ಲಿನ ಶ್ರೀ ಗುರುಶಾಂತ ಶಿವಯೋಗಿಗಳ ಗದ್ದುಗೆಯ ಗೋಪುರದ ಕಳಸಾರೋಹಣ ನೆರವೇರಿಸುವರು ಹಾಗೂ 12.30ಕ್ಕೆ ಜರುಗುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸುವರು.