ಎಚ್‌ಐವಿ ತಡೆಯಲ್ಲಿ ಯುವಜನತೆ ಪಾತ್ರ ಪ್ರಮುಖ: ಡಾ.ಸೋಮಶೇಖರ್‌

| Published : Aug 13 2024, 12:47 AM IST

ಸಾರಾಂಶ

ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆಯಲ್ಲಿ ಸೋಮವಾರ ‘ಅಂತಾರಾಷ್ಟೀಯ ಯುವ ದಿನಾಚರಣೆ-2024’ ಕಾರ್ಯಕ್ರಮ ನಡೆಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಎಚ್.ಐ.ವಿ, ಏಡ್ಸ್ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ ಅತೀ ಮುಖ್ಯ. ಆದ್ದರಿಂದ ತಮ್ಮನ್ನು ತಾವು ಎಚ್.ಐ.ವಿ. ಬರದಂತೆ ತಡೆಯಬೇಕು. ಮತ್ತು ಎಚ್.ಐ.ವಿ ಕುರಿತು ಅರಿವು ಮೂಡಿಸಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್ ಹೇಳಿದ್ದಾರೆ.

ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆಯಲ್ಲಿ ಸೋಮವಾರ ‘ಅಂತಾರಾಷ್ಟೀಯ ಯುವ ದಿನಾಚರಣೆ-2024’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಚ್.ಐ.ವಿ/ಏಡ್ಸ್ ಹಾಗೂ ಲೈಂಗಿಕ ಸಂಪರ್ಕದ ಸೋಂಕಿನ ಕುರಿತು ಜಾಗೃತಿ ಮತ್ತು ತಡೆಗಟ್ಟುವ ಸಂಬಂಧ ರಾಷ್ಟ್ರದಾದ್ಯಂತ ಕಾರ್ಯಕ್ರಮನ್ನು ಹಮ್ಮಿಕೊಂಡಿದೆ. ಈ ಆಂದೋಲನವನ್ನು ಸೋಮವಾರ ಅಂತರಾಷ್ಟೀಯ ಯುವ ದಿನಾಚರಣೆಯ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

ಕರ್ನಾಟಕ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಆಸ್ಪತ್ರೆಯ ಐಸಿಟಿಸಿ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷ ಎಚ್.ಐ.ವಿ/ಏಡ್ಸ್ ಆಪ್ತ ಸಮಾಲೋಚನೆ ಮಹತ್ವ ಹಾಗೂ ಸೇವಾ ಸೌಲಭ್ಯಗಳಾದ ಐಸಿಟಿಸಿ, ಎ.ಆರ್.ಟಿ ಕೇಂದ್ರಗಳ ಕುರಿತು ಮಾಹಿತಿ ನೀಡಿದರು.

ಯುವಜನತೆ ಮತ್ತು ಎಚ್‌ಐವಿ - ಆಂದೋಲನದ ಕುರಿತು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಆನಂದ್ ಮಾಹಿತಿ ನೀಡಿದರು.

ಶುಶ್ರೂಷಕ ಅಧಿಕಾರಿ ವೀಣಾ, ಆಡಳಿತಾಧಿಕಾರಿ ರೋಹಿಣಿ, ಬಿ.ಎಸ್.ಸಿ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮಂಜುಳಾ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ಅಂತಾರಾಷ್ಟೀಯ ಯುವ ದಿನಾಚರಣೆ-2024 ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಅಂತರ್ಜಾಲ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ಪ್ರಥಮ ಬಹುಮಾನ : ದರ್ಶನ್ ಅಯ್ಯಪ್ಪ , ಕಾವೇರಿ ಪಾಲಿಟೆಕ್ನಿಕ್ ಗೋಣಿಕೊಪ್ಪ, ದ್ವಿತೀಯ ಬಹುಮಾನ : ದಿಲನ್ ಕಾವೇರಿ ಪಾಲಿಟೆಕ್ನಿಕ್ ಗೋಣಿಕೊಪ್ಪ, ತೃತೀಯ ಬಹುಮಾನ : ದಿಗಂತ್, ಸರ್ಕಾರಿ ಪಾಲಿಟೆಕ್ನಿಕ್ ಕುಶಾಲನಗರ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಿ.ಎಸ್.ಸಿ. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ ಪ್ರಾರ್ಥಿಸಿದರು. ವಿದ್ಯಾರ್ಥಿ ಚಿದಾನಂದ್ ಸ್ವಾಗತಿಸಿದರು. ವಿದ್ಯಾರ್ಥಿನಿ ನಿಧಿ ನಿರೂಪಿಸಿದರು. ಬಿ.ಎಸ್.ನರ್ಸಿಂಗ್ ಕಾಲೇಜು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿ ಹರ್ಷಿತ್ ವಂದಿಸಿದರು.