ಸಾರಾಂಶ
ತೀವ್ರತರವಾದ ಐಇಸಿ ಪ್ರಚಾರಾಂದೋಲನದ ಘೋಷ ವಾಕ್ಯ
ಗದಗ: ಎಚ್.ಐ.ವಿ ಎಡ್ಸ್ ತಡೆಗಟ್ಟುವಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಎಲ್ಲ ಯುವಕರು, ಕಾಲೇಜ ವಿದ್ಯಾರ್ಥಿಗಳು ತ್ವರಿತಗತಿಯಲ್ಲಿ ಎಚ್.ಐ.ವಿ ಬಗ್ಗೆ ಪ್ರಚಾರ ಮಾಡಿ, ಪ್ಲ್ಯಾಶ್ ಮೊಬ್, ಬೀದಿ ನಾಟಕ ಹಾಗೂ ಸಂಗೀತ ಕಲಾ ಪ್ರದರ್ಶನಗಳ ಮೂಲಕ ಅರಿವನ್ನು ಸಮುದಾಯದಲ್ಲಿ ಮೂಡಿಸಬೇಕಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಹೇಳಿದರು.
ನಗರದಲ್ಲಿ ಜಿಲ್ಲಾಡಳಿತ ಜಿಪಂ, ರಾಜ್ಯ ಏಡ್ಸ್ ಪ್ರೀವೇನ್‌ಷನ್ ಸೋಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಆದರ್ಶ ಶಿಕ್ಷಣ ಸಮಿತಿಯ ಎನ್.ಎಸ್.ಎಸ್ ಹಾಗೂ ರೆಡ್ ರಿಬ್ಬನ್ ಕ್ಲಬ್‌ಗಳ ಸಂಯುಕ್ತಾಶ್ರಯದಲ್ಲಿ ಎಚ್.ಐ.ವಿ, ಏಡ್ಸ್ ತಡೆಗಟ್ಟಲು ತೀವ್ರತರವಾದ ಐ.ಇ.ಸಿ ಪ್ರಚಾರಾಂದೋಲನ-2024ರ ಅಂಗವಾಗಿ ರೆಡ್ ರಿಬ್ಬನ್ ಕಾಲೇಜು ವಿದ್ಯಾರ್ಥಿಗಳಿಂದ ಪ್ಲ್ಯಾಶ್ ಮೊಬ್ ಮೂಲಕ ಎಚ್.ಐ.ವಿ ಏಡ್ಸ್ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತೀವ್ರತರವಾದ ಐಇಸಿ ಪ್ರಚಾರಾಂದೋಲನದ ಘೋಷ ವಾಕ್ಯದಂತೆ ಸುಸ್ಥಿರ ಡಿಜಿಟಲ್ ಅಭಿವೃದ್ಧಿಗಾಗಿಯು ಜನತೆಯ ಮುಂದಾಳತ್ವ ಘೋಷಣೆಯಂತೆ ಯುವಕರು ಸಂಯಮದಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸದೃಢ ಆರೋಗ್ಯ ಹೊಂದಿ ಸಮೃದ್ಧ ಭಾರತವನ್ನು ನಿರ್ಮಾಣಕ್ಕೆ ಕೈಗೂಡಿಸಬೇಕೆಂದರು.
ಪ್ರಾ.ಡಾ. ಕೆ.ಗಿರಿರಾಜ ಕುಮಾರ ಮಾತನಾಡಿ, ವಿದ್ಯಾರ್ಥಿಗಳು ಯವ್ವನದಲ್ಲಿ ತಮ್ಮ ಜೀವನ ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.ಈ ವೇಳೆ ಉಪ ಪ್ರಾ.ಡಾ.ವಿ.ಟಿ. ನಾಯ್ಕರ, ಪ್ರೊ. ಸಲ್ಮಾ, ಪ್ರೊ. ಪ್ರಿಯಾಂಕಾ. ಪ್ರೊ. ವೀಣಾ ಪತ್ರಿ, ಜನಕರೆಡ್ಡಿ, ರವಿ ಪತ್ತಾರ, ಬಸವರಾಜ ಲಾಳಗಟ್ಟಿ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರು, ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಪ್ರೊ. ಬಾಹುಬಲಿ ಜೈನರ್ ಸ್ವಾಗತಿಸಿದರು.