ಸಮಾಜದ ಸ್ವಾಸ್ಥ ರಕ್ಷಣೆಗೆ ಯುವಕ ಪಾತ್ರ ಮಹತ್ವದ್ದು: ಉಜ್ಜಯನಿ ಶ್ರೀ

| Published : Sep 01 2025, 01:04 AM IST

ಸಾರಾಂಶ

ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಯುವಕರು ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಹತ್ತು ಹಲವು ಸಂಘಟನೆಗಳ ಮೂಲಕ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮಯ ವಿಷಯ ಎಂದು ಉಜ್ಜಯನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಯುವ ಭಾರತೀಯ ವೇದಿಕೆ ಹಮ್ಮಿಕೊಂಡಿರುವ 4ನೇ ವರ್ಷದ ಗಣೇಶೋತ್ಸವದ ಕಾರ್ಯಕ್ರಮ ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.

ಯುವ ಜನತೆ ಎಂದರೆ ಕೇವಲ ಪಾಶ್ಚಾತ್ಯ ಸಂಸ್ಕೃತಿ ಮೈಗೂಡಿಸಿಕೊಂಡು ನಮ್ಮತನ, ನಮ್ಮ ಸಂಸ್ಕೃತಿ ವಿರುದ್ಧ ನಡೆದುಕೊಳ್ಳುವವರು ಎಂಬ ಭಾವನೆ ಬಹುತೇಕರಲ್ಲಿದೆ. ಆದರೆ ಯುವ ಭಾರತೀಯ ವೇದಿಕೆ ಸದಸ್ಯರು ಸಂಸ್ಕೃತಿ, ಸಂಸ್ಕಾರ, ರಾಷ್ಟ್ರೀಯತೆಗೆ ಮೆರಗು ತಂದು ಕೊಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಗಣೇಶೋತ್ಸವ ಕೇವಲ ಧಾರ್ಮಿಕ ಕಾರ್ಯಕ್ರಮವಾಗದೇ ಸೌಹಾರ್ದತೆ, ಸಾಮರಸ್ಯ ಒಗ್ಗೂಡಿಸುವ ಕಾರ್ಯಕ್ರಮವಾಗಿ ಸ್ವಾತಂತ್ರ್ಯಪೂರ್ವದಿಂದಲೂ ರೂಪಿತಗೊಂಡಿದೆ ಎಂದು ಹೇಳಿದರು.

ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಯುವ ಭಾರತೀಯ ವೇದಿಕೆ ಪದಾಧಿಕಾರಿಗಳು ಇದ್ದರು.

ಡಿಜೆ ತಿಲಾಂಜಲಿ: ರಾಮಾಯಣ, ಮಹಾಭಾರತ ನೃತ್ಯ ರೂಪಕ;

ಈಚಿಗೆ ಗಣೇಶೋತ್ಸವದಲ್ಲಿ ಡಿಜೆ ಹಾಕಿಕೊಂಡು ಅದರ ತಾಳಕ್ಕೆ ಕುಣಿದು ಕುಪ್ಪಳಿಸುವುದಕ್ಕೆ ತಿಲಾಂಜಲಿ ಇಟ್ಟು, ಹೂವಿನಹಡಗಲಿತಾಲೂಕಿನ ಉತ್ತಂಗಿ ಗ್ರಾಮದ ಹೊಳೆಯಾಚೆ ಮಲ್ಲಪ್ಪರ ನೇತೃತ್ವದಲ್ಲಿ ಕಲಾವಿದರು ನಾನಾ ವೇಶಗಳನ್ನು ಹಾಕಿ ರಾಮಾಯಣ, ಮಹಾಭಾರತ ನೃತ್ಯ ರೂಪಕಗಳನ್ನು ಮಾಡುತ್ತಾ ಗಣೇಶ ವಿಸರ್ಜನೆ ಮಾಡಿದರು.ತಾಲೂಕಿನ ನಂದಿಹಳ್ಳಿ ಗ್ರಾಮದ ಯುವಕರು ಗಣೇಶ ವಿಸರ್ಜನೆ ವೇಳೆ ಯಾವುದೇ ಡಿಜೆ ಸೌಂಡ್‌ ಇಲ್ಲದೇ, ಸ್ಥಳೀಯ ಕಲಾವಿದರನ್ನು ಬಳಕೆ ಮಾಡಿಕೊಂಡು ದಾರಿಯುದ್ಧಕ್ಕೂ ರಾಮಾಯಣ, ಮಹಾಭಾರತ ಕಥಾ ಪ್ರಸಂಗಗಳನ್ನು ಮಾಡುತ್ತಾ ಜನರಿಗೆ ಮನರಂಜನೆ ನೀಡಿದರು.