ಸಾರಾಂಶ
ಕನ್ನಡಪ್ರಭ ವಾರ್ತೆ ಕುದೂರು
ರಂಗಮಂದಿರದ ಛಾವಣಿ ಉದ್ಘಾಟನೆಯಾಗಿದ್ದ 6 ತಿಂಗಳಲ್ಲಿ ಕುಸಿದು ಬಿದ್ದ ಘಟನೆ ಕುದೂರು ಗ್ರಾಮದ ನೀಲಮ್ಮ ಸತ್ಯನಾರಾಯಣಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.ಕಾಲೇಜು ಶಿಕ್ಷಣ ಇಲಾಖೆ ಒಂದು ಕೋಟಿ ರು. ವೆಚ್ಚದಲ್ಲಿ ವಿಚಾರ ಸಂಕಿರಣ, ಮತ್ತಿತರ ಕಾರ್ಯಕ್ರಮಗಳ ಆಯೋಜನೆಗಾಗಿ ನಿರ್ಮಿಸಿದ್ದ ಸುಮಾರು 300 ವಿದ್ಯಾರ್ಥಿಗಳು ಕೂರಬಹುದಾಗಿದ್ದ ವಿಶಾಲವಾದ ಸಭಾಂಗಣದಲ್ಲಿ ಛಾವಣಿ ಕುಸಿದು ಬಿದ್ದಿದೆ. ಉದ್ಘಾಟನಾ ಸಮಾರಂಭದಲ್ಲೇ ಈ ಕಟ್ಟಡದ ಕಳಪೆ ಕಾಮಗಾರಿಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಆಗತಾನೆ ಶಾಸಕರಾಗಿ ಗೆದ್ದು ಬಂದಿದ್ದ ಎಚ್.ಸಿ.ಬಾಲಕೃಷ್ಣ ಅವರು ಗುತ್ತಿಗೆದಾರನಿಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದ್ದರು. ಸಣ್ಣ ಪುಟ್ಟ ರಿಪೇರಿಗಳನ್ನು ಮಾಡಿ ಕಾಲೇಜು ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು. ಕಟ್ಟಡದ ಟೆರೇಸಿಗೆ ಮೆಟ್ಟಿಲು ಕೂಡಾ ಇರಲಿಲ್ಲ. ಆಗ ಸಾರ್ವಜನಿಕರು ಗಲಾಟೆ ಮಾಡಿದ್ದಕ್ಕೆ ಕಬ್ಬಿಣದ ಮೆಟ್ಟಿಲು ಅಳವಡಿಸಲಾಯಿತು. ಸೋರುವ ಕೊಠಡಿಗಳು, ಬಿರುಕು ಬಿಟ್ಟ ಗೋಡೆಗಳು, ಹಾಕಲಾಗದಷ್ಟು ಸೆಟೆದುಕೊಂಡಿರುವ ತರಗತಿಗಳ ಬಾಗಿಲು. ಇಷ್ಟು ಅವ್ಯವಸ್ಥೆಯನ್ನು ನೂತನ ಕಾಲೇಜು ಕಟ್ಟಡ ಒಳಗೊಂಡಿದೆ.
ಯಾರೋ ಬೀಳಿಸಿದ್ದಾರೆಂಬ ಅನುಮಾನ: ಸಭಾಂಗಣದ ಪಿಒಪಿ ಛಾವಣಿ ಕುಸಿದು ಬಿದ್ದಿರುವುದಕ್ಕೆ ಇಂಜಿನಿಯರ್ ಸುದೀಪ್ ಅವರನ್ನು ವಿಚಾರಿಸಿದರೆ ಇದನ್ನು ಯಾರೋ ಬೇಕೆಂತಲೇ ಬೀಳಿಸಿದ್ದಾರೆ. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ. ಆದರೆ, ಇದರ ಕೀಗಳು ಪ್ರಾಚಾರ್‍ಯರ ಬಳಿಯೇ ಇರುತ್ತದೆ. ಬೇರೆ ಯಾರೂ ಅದನ್ನು ಬೀಳಿಸಲು ಸಾಧ್ಯವಿಲ್ಲ. ಪ್ರಾಚಾರ್ಯರು ಕೂಡಾ ಆ ಕೆಲಸವನ್ನು ಮಾಡಿರುವುದಿಲ್ಲ. ಬದಲಾಗಿ ಕಳಪೆ ಕಾಮಗಾರಿಯನ್ನು ಮುಚ್ಚಿಟ್ಟುಕೊಳ್ಳಲು ಗುತ್ತಿಗೆದಾರರು ಮತ್ತು ಕಟ್ಟಡದ ಎಂಜಿನಿಯರ್‌ಗಳು ಹೊಸ ಕಥೆ ಕಟ್ಟುತ್ತಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕುಸಿಯುವ ಹಂತದಲ್ಲಿರುವ ಕಟ್ಟಡ: ಯಾರಿಗೋ ಸಮಸ್ಯೆ ಆದರೆ ಮತ್ಯಾರಿಗೋ ಆಪರೇಷನ್ ಮಾಡಿದಂತೆ, ಸೋರುತ್ತಿರುವ ಪಿಯು ಕಾಲೇಜಿನ ಕಟ್ಟಡದ ಚುರುಕಿ ತೆಗೆದು ಹೊಸದಾಗಿ ಹಾಕಬೇಕಿತ್ತು. ಆದರೆ ಇಂಜಿನಿಯರ್‌ಗೆ ಗೊಂದಲವಾಗಿ, ಯಾವುದೇ ಸಮಸ್ಯೆ ಇಲ್ಲದೆ ಚನ್ನಾಗಿದ್ದ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದ ಚುರುಕಿ ತೆಗೆದು ಸೋರುವಂತೆ ಮಾಡಿದ್ದಾರೆ.
ಈ ಕುರಿತು ಪ್ರಾಚಾರ್ಯರು ಇಂಜಿನಿಯರ್‌ಗೆ ಕೇಳಿದರೆ ಏನೋ ತಪ್ಪಾಗಿದೆ ಸರಿಮಾಡಿ ಕೊಡುತ್ತೇವೆ ಎಂದು ಹೇಳಿ ಎರಡು ವರ್ಷಗಳಾಯಿತು. ಆದರೆ ಇದುವರೆಗೂ ಅದು ಸರಿಹೋಗಲಿಲ್ಲ ಇದರಿಂದಾಗಿ ಸುಸಜ್ಜಿತ ಕಟ್ಟಡದ ಐದು ಕೊಠಡಿಗಳು ಸೋರುತ್ತ, ಅದರ ಬಣ್ಣ ಮಾಸಿ ಕುಸಿಯುವ ಹಂತ ತಲುಪಿದ್ದರಿಂದ ಆ ಕೊಠಡಿಯಲ್ಲಿ ಪಾಠ ಪ್ರವಚನಗಳು ನಡೆಯದಂತಾಯಿತು. ಇದರಿಂದಾಗಿ ಕೊಠಡಿಗಳ ಕೊರತೆಯಾದ ಕಾರಣ ನೂತನ ಕಟ್ಟಡ ಕಟ್ಟಲಾಯಿತು. ಆದರೆ ಅದರ ಕಥೆಯೂ ಹೀಗೆಯೇ ಕಳಪೆಯಿಂದ ಕೂಡಿದೆ.ಕಿತ್ತು ಹಾಕಿರುವ ಚುರುಕಿ ಸರಿಮಾಡಿಸಿಕೊಡಿ ಎಂದು ಪ್ರಾಚಾರ್ಯರು ಕೇಳಿದರೆ ಮಾಡಿಸಿಕೊಡುತ್ತೇನೆ ಎಂದು ಹೇಳಿ ಕಳೆದ ಆರು ತಿಂಗಳ ಹಿಂದೆ ಒಂದಿಷ್ಟು ಜಲ್ಲಿ, ಮತ್ತು ಎಂ ಸ್ಯಾಂಡ್ ಮೇಲೆ ಸಾಗಿಸಿ ಮಳೆಯ ನೆಪ ಹೇಳಿ ಮರೆಯಾದರು. ಮಳೆ ಹೆಚ್ಚಾದ ಕಾರಣ ಕಟ್ಟಡದಲ್ಲಿ ಸೋರುವುದು ಹೆಚ್ಚಾಯಿತು. ಇದೇ ರೀತಿ ಮುಂದುವರೆದರೆ ಇನ್ನಾರು ತಿಂಗಳಲ್ಲಿ ಇಡೀ ಕಟ್ಟಡವೇ ಕುಸಿದು ಬೀಳುವುದರಲ್ಲಿ ಅನುಮಾನವಿಲ್ಲ
ನೂರಾರು ಪುಸ್ತಕಗಳು ನೀರು ಪಾಲು : ಈ ಹಿಂದೆ ಗ್ರಂಥಾಲಯಕ್ಕೆಂದು ಕಟ್ಟಿದ ಕೊಠಡಿಯೊಳಗೆ ನೀರು ನುಗ್ಗಿ ಮತ್ತು ಸೋರುವ ಛಾವಣಿಯಿಂದ ನೂರಾರು ಪುಸ್ತಕಗಳು ಮಳೆನೀರಿನಿಂದ ನೆನೆದು ಹಾಳಾದವು. ಕೊನೆಗೆ ಅವುಗಳ ಪ್ರಯೋಜನ ಕಾಣದಾದಾಗ ಹಳೆ ಪುಸ್ತಕ ಕೊಳ್ಳುವವರಿಗೆ ಮಾರಾಟ ಮಾಡಲಾಯಿತು.ಕಳಪೆ ಕಾಮಗಾರಿಗೆ ಯಾವ ಶಿಕ್ಷೆಯೂ ಆಗಿಲ್ಲ: ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆಯಿಂದ ಕೋಟ್ಯಂತರ ರು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಹಣ ಮಂಜೂರಾಗಿದ್ದರು ಗುತ್ತಿಗೆದಾದರು ಇಂಜಿನಿಯರ್‌ಗಳು ಕಳಪೆ ಕಾಮಗಾರಿ ಮಾಡಿದ್ದರೂ ಇದುವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ಈಗ ಸಭಾಂಗಣದ ಚಾವಣಿ ಕುಸಿದು ಬಿದ್ದಿರುವವರ ಕಥೆಯೂ ಅಷ್ಟೆ. ಮತ್ತದೇ ಕಳಪೆ ಕಾಮಗಾರಿಯೇ ಆಗುವುದು ಎಂಬ ಅನುಮಾನ ಗ್ರಾಮಸ್ಥರದ್ದು.
ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಒಬ್ಬ ಇಂಜಿನಿಯರ್ ರವರನ್ನು ಗೊತ್ತು ಮಾಡಿ ಮಂಜೂರು ಮಾಡಿದ ಹಣಕ್ಕೆ ತಕ್ಕಂತೆ ವಸ್ತುಗಳನ್ನು ಬಳಸಿ ಕಟ್ಟಡ ನಿರ್ಮಾಣ ಆಗುತ್ತಿದೆಯಾ ಎಂಬುದನ್ನು ಗಮನಿಸಿ ವರದಿ ನೀಡಿದ ನಂತರ ಹಣ ಮಂಜೂರು ಮಾಡಲಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.ನಾನೊಮ್ಮೆ ಭೇಟಿ ನೀಡಿದಾಗ ಕಳಪೆ ಕಾಮಗಾರಿ ಕುರಿತು ಪ್ರಾಚಾರ್‍ಯರಿಗೆ ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆ. ಈ ಹಿಂದೆ ನಡೆದಿರುವ ಕಳಪೆ ಕಾಮಗಾರಿ ಕಾರಣ ಇಲಾಖೆ ಮತ್ತು ಸರ್ಕಾರದ ಕಡೆಯಿಂದ ತನಿಖೆಯಾಗಬೇಕು. ಇಲ್ಲದಿದ್ದರೆ ಕುಸಿದು ಬೀಳುವಂತಹ ಕಟ್ಟಡಗಳಿಂದ ಸರ್ಕಾರಕ್ಕೆ ಕಪ್ಪು ಮಸಿ ಬಳಿಯುತ್ತಲೇ ಇರುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಈ ಕುರಿತು ತನಿಖೆಗೆ ಆದೇಶಿಸುತ್ತೇನೆ.
- ಎಚ್.ಸಿ.ಬಾಲಕೃಷ್ಣ, ಶಾಸಕರು, ನಾನು ಈ ಕಾಲೇಜಿಗೆ ಬರುವ ವೇಳೆಗಾಗಲೇ ಕಟ್ಟಡ ಪೂರ್ಣಗೊಂಡಿತ್ತು. ಮತ್ತು ಸೋರುವ ಕಟ್ಟಡವನ್ನು ಸರಿಮಾಡಿಕೊಡಬೇಕೆಂದು ಸಾಕಷ್ಟು ಬಾರಿ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗೆ ಮನವಿ ಮಾಡಿದ್ದೆ. ಆದರೆ ಅವರು ಒಂದಿಷ್ಟು ಜಲ್ಲಿ ಮತ್ತು ಎಂ.ಸ್ಯಾಂಡ್ ಹೊಡೆದು ಮಳೆಯ ಕಾರಣ ಹೇಳಿ ಕಡಿಮೆಯಾದ ನಂತರ ಕಾಮಗಾರಿ ಆರಂಭಿಸುತ್ತೇನೆ ಎಂದಿದ್ದಾರೆ.- ಡಾ.ಗುರುಮೂರ್ತಿ, ಪ್ರಾಚಾರ್ಯರು, ಸರ್ಕಾರಿ ಪದವಿ ಕಾಲೇಜು, ಕುದೂರು