ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಕಳೆದ 2-3 ದಿನಗಳಿಂದ ಸಂಜೆಯಾಗುತ್ತಿದ್ದಂತೆ ಪ್ರಾರಂಭಗೊಳ್ಳುವ ಬಿರುಗಾಳಿ ಸಹಿತ ಮಳೆಗೆ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಉರ್ದು ಶಾಲೆಯ ತಗಡಿನ ಛಾವಣಿ ಹಾರಿ ಹೋಗಿದ್ದು, ಅಕ್ಕ-ಪಕ್ಕದ ಮನೆಗಳ ಮೇಲೆ ಬಿದ್ದು ಅಪಾರ ಹಾನಿ ಸಂಭವಿಸಿದೆ.ಕಳೆದ ವಾರದಿಂದ ಮುಂಗಾರು ಮಳೆ ಚುರುಕುಗೊಂಡಿದ್ದು ತಾಲೂಕಿನ ಜುಗೂಳ, ಮಂಗಾವತಿ, ಶಹಾಪುರ, ಶಿರಗುಪ್ಪಿ ಹಾಗೂ ಹಲವು ಗ್ರಾಮಗಳಲ್ಲಿ ಸಂಜೆಯಾಗುತ್ತಿದ್ದಂತೆ ಬಿರುಗಾಳಿಯೊಂದಿಗೆ ಮಳೆಯ ಆಗಮನವಾಗುತ್ತಿದೆ. ಬಿರುಗಾಳಿಯಿಂದಾಗ ವಿದ್ಯುತ್ ಕಂಬಗಳು, ದೊಡ್ಡ-ದೊಡ್ಡ ಮರಗಳು ಉರುಳಿ ಬಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸುತ್ತಿದೆ.
ಗಾಳಿಯ ರಭಸಕ್ಕೆ ತಾಲೂಕಿನ ಜುಗೂಳ ಗ್ರಾಮದ ಸರ್ಕಾರಿ ಉರ್ದು ಶಾಲೆಯ ತಗಡಿನ ಛಾವಣಿ ಸುಮಾರು ದೂರ ಹಾರಿ ಹೋಗಿ ಅಕ್ಕ-ಪಕ್ಕದ ಮನೆಗಳ ಮೇಲೆ ಬಿದ್ದಿದೆ. ಇದರಿಂದ ಅಲ್ಲಿಯ ಮನೆಗಳಿಗೆ ಹಾನಿಯಾಗಿದೆ. ಅದರಂತೆ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ರೈತನ ಮನೆಯ ಮೇಲೆ ದೊಡ್ಡ ಮರವೊಂದು ಉರುಳಿ ಬಿದ್ದು, ಮನೆ ಛಾವಣಿ, ಗೋಡೆಗೆ ಅಪಾರ ಪ್ರಮಾಣದ ಹಾನಿಯುಂಟಾಗಿದ್ದು, ಬಡ ಕುಟುಂಬವು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ.ಮಂಗಳವಾರ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಮಂಗಾವತಿ ಗ್ರಾಮದ ರೈತ ಸಂಜಯ ನರಸಗೌಡ ಪಾಟೀಲರ ಮನೆ ನಂ.428/2 ರ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದು ಸುರಕ್ಷಿತವಾಗಿದ್ದಾರೆ. ಇದರಿಂದಾಗಿ ಮನೆ ಛಾವಣಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಬರಲಗಾದ ಪರಿಸ್ಥಿತಿಯಲ್ಲಿ ನೊಂದು, ಬೆಂಡಾಗಿರುವ ರೈತನಿಗೆ ಮನೆ ರಿಫೇರಿಗೆ ಹಣ ಹೊಂದಿಸುವುದು ಕಷ್ಟದ ಕೆಲಸವಾಗಿದ್ದು, ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಜಯ ಪಾಟೀಲ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಕಾಕಾ ಪಾಟೀಲ, ಸದಸ್ಯರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಂಗಾವತಿ ಗ್ರಾಮದ ಮುಖಂಡರಾದ ರಾಜುಗೌಡ ಪಾಟೀಲ ಮಾತನಾಡಿ, ಸಂಜಯ ಪಾಟೀಲ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿದರು. ಮುಖಂಡರಾದ ಅಣ್ಣಾಸಾಬ ಪಾಟೀಲ, ಅಸ್ಲಂ ಅಪರಾಜ, ಅಮೀನ ನಂದಗಾವೆ, ಉಮೇಗೌಡ ಪಾಟೀಲ, ಜಹಾಂಗೀರ ಕಳಾವಂತ, ನೀತಿನ ಪಾಟೀಲ, ಆಶೀಫ್ ಮಜಕೂರೆ, ಬಾಬಾಸಾಬ ತಾರದಾಳೆ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.