ಎಲ್ಲಾ ಮತಧರ್ಮಗಳ ಮೂಲ ಸನಾತನವೇ ಆಗಿದೆ

| Published : May 13 2025, 01:19 AM IST

ಸಾರಾಂಶ

ತೆಂಕಲಗೂಡು ಬೃಹನ್ಮಠದಲ್ಲಿ ಆಯೋಜಿಸಲಾಗಿದ್ದ ಪಂಚಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಭರತದೇಶ ಹಲವು ಧರ್ಮಗಳ ಉಗಮಗಳ ಪುಣ್ಯಸ್ಥಳವಾಗಿದೆ. ಇಲ್ಲಿ ಉಗಮಗೊಂಡ ಧರ್ಮಗಳು ಸೇರಿದಂತೆ ಅನ್ಯ ನಾಡಿನಿಂದ ವಲಸೆ ಬಂದು ಇಲ್ಲಿ ಪ್ರವರ್ಧಮಾನವಾಗಿರುವ ಧರ್ಮದ ಜನರ ಮೂಲ ಸಹ ಸನಾತನವೇ ಆಗಿದೆ. ವೀರಶೈವ ಧರ್ಮ ಸಹ ಸನತಾನ ಧರ್ಮದ ಒಂದು ಕವಲು. ಪಾಕಿಸ್ತಾನದಲ್ಲಿ ದಾಳಿ ಮಾಡುತ್ತಿರುವ ಜನರು ಸಹ ಸನಾತನಿಗಳೆ ಆದರೆ, ಬಾಲ್ಯದಲ್ಲಿ ನೀಡುವ ತಪ್ಪು ಸಂಸ್ಕಾರದಿಂದಾಗಿ ಹಿಂಸವಾದಿಗಳಾಗಿ ಮಾರ್ಪಟ್ಟಿದ್ದಾರೆ ಎಂದು ಡಾ.ಶ್ರೀ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ದೇಶದಲ್ಲಿ ನೆಲೆಸಿರುವ ಎಲ್ಲಾ ಮತಧರ್ಮಗಳ ಮೂಲ ಸನಾತನವೇ ಆಗಿದೆ ಎಂದು ಕಾಶಿ ಜಗದ್ಗುರು ಡಾ.ಶ್ರೀ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸೋಮವಾರ ತಾಲೂಕಿನ ತೆಂಕಲಗೂಡು ಬೃಹನ್ಮಠದಲ್ಲಿ ಆಯೋಜಿಸಲಾಗಿದ್ದ ಪಂಚಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಭರತದೇಶ ಹಲವು ಧರ್ಮಗಳ ಉಗಮಗಳ ಪುಣ್ಯಸ್ಥಳವಾಗಿದೆ. ಇಲ್ಲಿ ಉಗಮಗೊಂಡ ಧರ್ಮಗಳು ಸೇರಿದಂತೆ ಅನ್ಯ ನಾಡಿನಿಂದ ವಲಸೆ ಬಂದು ಇಲ್ಲಿ ಪ್ರವರ್ಧಮಾನವಾಗಿರುವ ಧರ್ಮದ ಜನರ ಮೂಲ ಸಹ ಸನಾತನವೇ ಆಗಿದೆ. ವೀರಶೈವ ಧರ್ಮ ಸಹ ಸನತಾನ ಧರ್ಮದ ಒಂದು ಕವಲು. ಪಾಕಿಸ್ತಾನದಲ್ಲಿ ದಾಳಿ ಮಾಡುತ್ತಿರುವ ಜನರು ಸಹ ಸನಾತನಿಗಳೆ ಆದರೆ, ಬಾಲ್ಯದಲ್ಲಿ ನೀಡುವ ತಪ್ಪು ಸಂಸ್ಕಾರದಿಂದಾಗಿ ಹಿಂಸವಾದಿಗಳಾಗಿ ಮಾರ್ಪಟ್ಟಿದ್ದಾರೆ. ನಮ್ಮ ದೇಶವನ್ನು ನೂರಾರು ವರ್ಷಗಳ ಆಳ್ವಿಕೆ ಮಾಡಿದ ಜನರು ನಮ್ಮ ಸಂಸ್ಕೃತಿ ಹಾಗೂ ವಿದ್ಯಾಭ್ಯಾಸದ ಕ್ರಮವನ್ನು ಸಂಪೂರ್ಣ ತಿರುಚಿ, ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಲ್ಲಿ ಬಿತ್ತುತಿದ್ದ ಗುರುಕುಲ ಶಿಕ್ಷಣ ಪದ್ಧತಿಯ ನಾಶಮಾಡಿದ್ದ ಫಲವಾಗಿ ಇಂದಿನ ಜನರಿಗೆ ನಮ್ಮ ಪೂರ್ವಪರವೇ ತಿಳಿಯದಾಗಿದೆ. ನಮ್ಮ ಸಂಸ್ಕೃತಿ, ಹಬ್ಬ, ಹರಿದಿನಗಳ ಬಗ್ಗೆ ತಿಳಿಸದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸವುದು ಒಳ್ಳೆಯದಲ್ಲ. ಇಂದು ಧರ್ಮ ರಕ್ಷಣೆ ಕಾರ್ಯ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಠಗಳು ಕೆಲಸ ಮಾಡುತ್ತಿವೆ. ಮಠಗಳ ಈ ಕಾರ್ಯಕ್ಕೆ ಭಕ್ತರು ಸಹಕಾರ ನೀಡುವ ಮೂಲಕ ಸಮಾಜವನ್ನು ಸುಭದ್ರಗೊಳಿಸಲು ಕೈಜೋಡಿಸಬೇಕು. ಸಂಸ್ಕಾರ ಹಾಗೂ ಸಂಸ್ಕೃತಿ ಮಕ್ಕಳಿಗೆ ಅಗತ್ಯ. ಸಂಸ್ಕಾರವಂತ ಮಕ್ಕಳನ್ನು ಪಡೆದರೆ ವೃದ್ಧಾಪ್ಯ ಚನ್ನಾಗಿರಲಿದೆ. ಆದ್ದರಿಂದ, ಸಂಸ್ಕಾರವನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಕೊಂಡೊಯ್ಯವ ಜವಾಬ್ದಾರಿ ಹೊತ್ತಿರುವ ಸ್ತ್ರೀಯರು ಎಚ್ಚರಿಕೆಯಿಂದ ತಮ್ಮ ನಡೆನುಡಿಯನ್ನು ಬಳಸ ಬೇಕು ಎಂದರು.

ನುಗ್ಗೇಹಳ್ಳಿ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಗು ಜನಿಸುವ ಮುನ್ನ ಸಂಸ್ಕಾರ ನೀಡುವ ಧರ್ಮವೆಂದರೆ ವೀರಶೈವ ಧರ್ಮ. ಮಗು ಹುಟ್ಟುವ ಮುನ್ನವೇ ತಾಯಿಗೆ ಲಿಂಗಕಟ್ಟಲಾಗುತ್ತದೆ. ಹೀಗೆ ಕಟ್ಟುವ ಲಿಂಗಕ್ಕೆ ಲಿಂಗೋದ್ಭವ ಎನ್ನುತ್ತೇವೆ. ಹಸ್ತವನ್ನೆ ಪೀಠವನ್ನಾಗಿ ಇಟ್ಟು, ಅಂಗದ ಮೇಲೆ ಲಿಂಗವನ್ನು ಇಟ್ಟು ಪೂಜಿಸುವನೇ ಲಿಂಗಾಯಿತ. ಸದಾ ಲಿಂಗಧಾರಿಗಳಾಗಿದ್ದರೆ ಮಾತ್ರ ಧರ್ಮಶ್ರೇಷ್ಠರಾಗಲು ಸಾಧ್ಯ. ತಮ್ಮ ಧರ್ಮದ ಕುರುಹುಗಳನ್ನು ಅಂಜಿಕೆ ಇಲ್ಲದೆ ಧರಿಸಬೇಕು. ವಿಂಗಡಣೆಯಿಂದ ವಿನಾಶ ಒಗ್ಗಟ್ಟಿನಿಂದ ವಿಸ್ತರಣೆ ಎಂಬುದನ್ನು ಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಇಂದು ಹಿಂದೂ ಧರ್ಮ ಹಲವು ದಾಳಿಗಳನ್ನು ಎದುರಿಸಿ ನಿಲ್ಲಬೇಕಾದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಜನರು ಜಾಗೃತರಾಗುವುದು ತೀರ ಅಗತ್ಯ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಧರ್ಮ ಪಸರಿಸುವ ಕಾರ್ಯದಲ್ಲಿ ತೊಡಗಿರುವ ತೆಂಕಗಲಗೂಡು ಮಠದ ಬೆಂಗಾವಲಿಗೆ ಸದಾ ನಾವಿರಲಿದ್ದೇವೆ. ಇಂದು ನಾವು ನಮ್ಮ ಕುಟುಂಬ ಎಂಬ ಸ್ವಾರ್ಥ ಸಮಾಜದಲ್ಲಿ ಕೆಲವು ಜನರು ಮಾತ್ರ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿವೆ. ಇಂತಹ ಕಾರ್ಯದಲ್ಲಿ ತೆಂಕಲಗೂಡು ಮಠದ ಶ್ರೀಗಳು ಒಬ್ಬರು. ಇಂದು ನಾವು ಜಾಗೃತರಾಗದಿದ್ದರೆ ನಮಗೆ ಉಳಿಗಾಲವಿಲ್ಲ. ಜಾತಿ, ಪಂಗಡಗಳೆಂದು ವಿಂಗಡಣೆಯಾಗುತ್ತ ಹೋದರೆ ನಮಗೆ ಉಳಿಗಾಲವಿಲ್ಲ. ಆದ್ದರಿಂದ, ನಮ್ಮ ಸಂಸ್ಕೃತಿಯನ್ನು ಮತ್ತೆ ಉತ್ತುಂಗಕ್ಕೆ ಕೊಂಡೊಯ್ಯುವ ಕೆಲಸ ಮಾಡುವ ಮೂಲಕ ನಮ್ಮ ಧರ್ಮದ ಮೇಲೆ ಆಗುತ್ತಿರುವ ಆಕ್ರಮಣವನ್ನು ತಡೆಗಟ್ಟಬೇಕು ಎಂದರು.

ಮಾಜಿ ಶಾಸಕ ಲಿಂಗೇಶ್ ಮಾತನಾಡಿ, ಹಿಂದೂಗಳು ಜಾತಿ ಆಧಾರದಲ್ಲಿ ಒಡೆದು ಹೋದರೆ ನಮ್ಮ ವಿನಾಶವನ್ನು ತಪ್ಪಿಸುವುದು ಅಸಾಧ್ಯ. ಪಹಲ್ಗಾಮ್‌ನಲ್ಲಿ ನಡೆದ ದಾಳಿ ಧರ್ಮ ಆಧರಿಸಿದ್ದೇ ಹೊರತು ಜಾತಿ ಆಧರಿಸಿಲ್ಲ. ಈ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಯಸಳೂರು ಗ್ರಾಮದ ಮುಖ್ಯಬೀದಿಯಲ್ಲಿ ಕಾಶಿ ಜಗದ್ಗುರುಗಳನ್ನು ನೂರಾರು ಮಹಿಳೆಯರ ಕುಂಭದೊಂದಿಗೆ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

ವೇದಿಕೆಯಲ್ಲಿ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಕಲ್ಲಮಠದ ಶ್ರೀ ಮಹಾಂತಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಕೋಡಿಮಠದ ಶ್ರೀ ಚೇತನ ಮರಿದೇವ ಸ್ವಾಮೀಜಿ, ಕರಿಸಿದ್ದೇಶ್ವರಸ್ವಾಮಿ ಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ, ಹೆಗಡಹಳ್ಳಿ ಮಠದ ಶ್ರೀ ಷಡ್ಬಾವರಹಿತೇಶ್ವರ ಸ್ವಾಮೀಜಿ ಹಾಗೂ ವೀರಶೈವ ಸಮಾಜದ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.