ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ವಿವಿಧ ಜ್ಞಾನಶಾಖೆಗಳ ಮೂಲ ಬೇರುಗಳು ಸಂಸ್ಕೃತದಲ್ಲೇ ಅಡಗಿವೆ. ಹಾಗಾಗಿ ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿತು ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಅರ್ಥೈಸಿಕೊಳ್ಳಬೇಕಾದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಖ್ಯಾತ ಸಂಸ್ಕೃತ ವಿದುಷಿ ಟಿ.ಎನ್.ಸರಸ್ವತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ವಿವಿಧ ಜ್ಞಾನಶಾಖೆಗಳ ಮೂಲ ಬೇರುಗಳು ಸಂಸ್ಕೃತದಲ್ಲೇ ಅಡಗಿವೆ. ಹಾಗಾಗಿ ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿತು ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಅರ್ಥೈಸಿಕೊಳ್ಳಬೇಕಾದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಖ್ಯಾತ ಸಂಸ್ಕೃತ ವಿದುಷಿ ಟಿ.ಎನ್.ಸರಸ್ವತಿ ಅಭಿಪ್ರಾಯಪಟ್ಟರು. ಪಟ್ಟಣದ ಶಾರದಾ ಮಹಿಳಾ ಸಮಾಜದ ವತಿಯಿಂದ ಏರ್ಪಡಿಸಿದ್ದ ಸಂಸ್ಕೃತ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸ್ಕೃತ ಕಷ್ಟದ ಭಾಷೆ ಎಂಬ ಆರೋಪವಿದೆ. ಆದರೆ ಅದು ಸುಳ್ಳು. ಸಂಸ್ಕೃತ ಅತ್ಯಂತ ಸರಳ ಹಾಗೂ ಸಮೃದ್ಧ ಭಾಷೆಯಾಗಿದೆ. ಮಡಿವಂತಿಕೆಯಿಲ್ಲದೆ ಯಾವ ಜಾತಿ, ಧರ್ಮದವರು ಬೇಕಾದರೂ ಕಲಿಯಬಹುದಾಗಿದೆ. ಸಂಸ್ಕೃತವನ್ನು ಪಂಡಿತರ ಭಾಷೆ, ಸಾಮಾನ್ಯರಿಗೆ ಎಟುಕದ್ದು ಎಂದೆಲ್ಲಾ ಆರೋಪಿಸಿ ಸಾಮಾನ್ಯರಿಂದ ದೂರವಿರಿಸುವ ಪ್ರಯತ್ನ ಮಾಡಲಾಗಿದೆ. ಇದೂ ಸಹ ಸುಳ್ಳೇ. ಪಂಡಿತರ ಭಾಷೆಯೇ. ಆದರೆ ಅದನ್ನೊಂದು ಸವಾಲಾಗಿ ಸ್ವೀಕರಿಸಿ ದಕ್ಕಿಸಿಕೊಳ್ಳುವ ಛಲ, ಸಂಕಲ್ಪವನ್ನೇಕೆ ತೊಡಬಾರದು? ಎಂದು ಅವರು ಪ್ರಶ್ನಿಸಿದರು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಂಸ್ಕೃತ ಶಬ್ಧಗಳು ಮಿಳಿತವಾಗಿವೆ. ಹಾಗಾಗಿ ಭಾಷೆಯಲ್ಲಿನ ಹಲವು ಅಪಭ್ರಂಶಗಳನ್ನು ಗುರುತಿಸಲು, ಸ್ವಚ್ಛ ಹಾಗೂ ದೋಷಮುಕ್ತ ಭಾಷೆಯನ್ನು ಬಳಸಲು ಸಂಸ್ಕೃತ ಜ್ಞಾನ ಅನುವು ಮಾಡಿಕೊಡುತ್ತದೆ. ವಿದ್ಯಾರ್ಥಿಗಳಷ್ಟೇ ಅಲ್ಲದೆ ಯಾರು ಬೇಕಾದರೂ ಆನ್ಲೈನ್ ಮುಖಾಂತರವೂ ಸಂಸ್ಕೃತ ಕಲಿಯಬಹುದಾಗಿದೆ ಎಂದು ಹೇಳಿದ ಅವರು ಕನ್ನಡದಲ್ಲಿ ಬಳಸುವ ಹಲವು ಸಂಸ್ಕೃತ ಶಬ್ಧಗಳ ಮೂಲರೂಪವನ್ನು ಪರಿಚಯ ಮಾಡಿ ಕೊಟ್ಟರು.

ಶಾರದಾ ಮಹಿಳಾ ಸಮಾಜದ ಅಧ್ಯಕ್ಷೆ ವಿದ್ಯಾಕೃಷ್ಣ ಮಾತನಾಡಿ ಕನ್ನಡ ನಮ್ಮ ಮಾತೃಭಾಷೆ. ನಮ್ಮ ಮೊದಲ ಆಧ್ಯತೆ ಕನ್ನಡ ಭಾಷೆಗೇ ಆಗಿದೆ. ಆದರೆ ಲೋಕಾನುಭವ ಹಾಗೂ ಜ್ಞಾನ ವಿಸ್ತರಣೆ ದೃಷ್ಟಿಯಿಂದ ಸಂಸ್ಕೃತ ಮತ್ತು ಇತರೆ ಭಾಷೆಗಳನ್ನು ಕಲಿತರೆ ನಮ್ಮ ಭಾಷಾ ಪ್ರೌಢಿಮೆ ಹೆಚ್ಚುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿದುಷಿ ಟಿ.ಎನ್.ಸರಸ್ವತೀ ಅವರನ್ನು ಗೌರವಿಸಲಾಯಿತು. ಸಮಾಜದ ನಿಕಟಪೂರ್ವ ಅಧ್ಯಕ್ಷೆ ವಿಜಯಾ ವಿಶ್ವೇಶ್ವರಯ್ಯ, ಕಾರ್ಯದರ್ಶಿ ಮಂಜುಳಾ ಪ್ರಕಾಶ್ ಇತರರು ಭಾಗವಹಿಸಿದ್ದರು. ವನಿತಾ ಪ್ರಭು ಸ್ವಾಗತಿಸಿದರು. ಮಂಗಳಗೌರಿ ವಂದಿಸಿದರು, ನಾಗು ರಮೇಶ್ ನಿರೂಪಿಸಿದರು. ಸಂಸ್ಕೃತ ಸಪ್ತಾಹದ ಅಂಗವಾಗಿ ಪಟ್ಟಣದ ಎಸ್ಎಸಿ ಮಯೂರ ಕಾನ್ವೆಂಟ್, ಪ್ರಿಯಾ ಆಂಗ್ಲ ಶಾಲೆ, ಇಂಡಿಯನ್ ಪಬ್ಲಿಕ್ ಸ್ಕೂಲ್, ಗ್ಲೋಬಲ್ ಎಂಬೆಸ್ಸಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಡೆದ ಸರಣಿ ಕಾರ್ಯಕ್ರಮಗಳಲ್ಲಿ ಸೀತಾಲಕ್ಷ್ಮಿ ಕೃಷ್ಣಮೂರ್ತಿ, ಟಿ.ಆರ್.ಶ್ರೀಧರ್, ಟಿ.ಕೆ.ಶ್ರೀಧರ್ ಮತ್ತು ತುರುವೇಕೆರೆ ಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಂಸ್ಕೃತದ ಹಿರಿಮೆ, ಸುಭಾಷಿತ, ಅಮರಕೋಶಗಳ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು. ಡಾ. ರುದ್ರಯ್ಯ ಹಿರೇಮಠ್, ಗಂಗಾಧರ ದೇವರಮನೆ, ಯಶವಂತ್, ಪುಷ್ಪಲತಾ ಚಂದ್ರೇಗೌಡ ಮೊದಲಾದವರು ಭಾಗವಹಿಸಿದ್ದರು.