ಸಂಭ್ರಮದಿಂದ ನಡೆದ ರಾಯರ ಮಧ್ಯಾರಾಧನೆ

| Published : Aug 12 2025, 12:30 AM IST

ಸಾರಾಂಶ

ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರನ್ನು ತಮ್ಮತ್ತ ಸೆಳೆದವು.

ಹುಬ್ಬಳ್ಳಿ:

ರಾಘವೇಂದ್ರ ಶ್ರೀಗಳ ಮಧ್ಯಾರಾಧನೆ ನಗರದ ವಿವಿಧ ರಾಯರ ಮಠಗಳಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.

ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಮ್ ಎಂಬ ಮಂತ್ರ ರಾಘವೇಂದ್ರ ಸ್ವಾಮಿಗಳ ಮಠಗಳಲ್ಲಿ ಅನುರಣಿಸಿತು.

ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರನ್ನು ತಮ್ಮತ್ತ ಸೆಳೆದವು.

ಬೆಳಗಿನಿಂದಲೇ ಭಕ್ತರಿಂದ ಅಷ್ಟೋತ್ತರ, ಸುಪ್ರಭಾತ ಸೇವೆ, ಹಾಗೂ, ಪಾರಾಯಣ, ಕೆಲವೆಡೆ ಬಹುಮಾನ ಹೋಮ ಮೊದಲಾದ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡರು.

ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಹಸ್ರಾರೋಭಕ್ತರು ಆಗಮಿಸಿ ರಾಯರ ಅಲಂಕೃತ ಬೃಂದಾವನ ದರ್ಶನ ಪಡೆದರು. ಇನ್ನು ಕೆಲವು ಭಕ್ತರು ಪ್ರಹ್ಲಾದ ರಾಜರ ಕನಕ ಅಭಿಷೇಕ ಸೇವೆಯನ್ನು ಸಲ್ಲಿಸಿದರು.

ಕುಬೇರಪುರಂ ರಾಯರಮಠ, ತೊರವಿಗಲ್ಲಿ ರಾಯರ ಮಠ, ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದ ರಾಯರ ಮಠಗಳಲ್ಲಿ ಭಕ್ತರು ತಮ್ಮ ಶಕ್ತಾನುಸಾರ ವಿವಿಧ ಸೇವೆಗಳನ್ನು ಸಲ್ಲಿಸಿದರು. ಭಜನಾ ಮಂಡಳಿಗಳಿಂದ ರಾಯರ ಕುರಿತ ದಾಸರ ಕೀರ್ತನೆಗಳನ್ನು ಹಾಡಿ ಸೇವೆ ಸಲ್ಲಿಸಿದರು.

ನಗರದಲ್ಲಿನ ಪ್ರತಿಯೊಂದು ರಾಯರ ಮಠಗಳಲ್ಲಿ ಬೃಂದಾವನಕ್ಕೆ ಮಾಡಿದ ಹೂವಿನ ಸೊಗಸಾದ ಅಲಂಕಾರಗಳನ್ನು ನೋಡಲು ಭಕ್ತರ ದಂಡು ಧಾವಿಸಿತ್ತು. ಸಂಜೆ ರಾಘವೇಂದ್ರ ಸ್ವಾಮಿಗಳ ಮಠಗಳು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದವು.

ರಾಯರಿಗೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ, ತೊಟ್ಟಿಲುಸೇವೆ, ಭಜನೆ, ಪಲ್ಲಕ್ಕಿ ಉತ್ಸವ, ಡೋಲೋತ್ಸವ ಮುಂತಾದ ಕಾರ್ಯಕ್ರಮಗಳು ಸಾಗಿ ಬಂದು ಮಧ್ಯರಾಧನೆಗೆ ಕಳೆ ಕೊಟ್ಟಿತ್ತು.

ಭವಾನಿನಗರದ ಮಠದಲ್ಲಿ ವಿಚಾರಣಾ ಕರ್ತರಾದ ಎ.ಸಿ. ಗೋಪಾಲ್, ವ್ಯವಸ್ಥಾಪಕ ವೇಣುಗೋಪಾಲ್, ಅರ್ಚಕರಾದ ಗುರುರಾಜ ಆಚಾರ್ಯ ಸಾಮಗ, ನಾರಾಯಣ, ಬಿಂದು ಮಾಧವ ಪುರೋಹಿತ, ಮನೋಹರ ಪಾರ್ವತಿ,ಘಟ್ಟು ಆಚಾರ್ಯರು ಮೊದಲಾದವರು ನೇತೃತ್ವ ವಹಿಸಿದರು.