ಕನ್ನಡಪ್ರಭ ವಾರ್ತೆ ಹನೂರು

ನಾಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಪೊಲೀಸ್ ಹುತಾತ್ಮರ ತ್ಯಾಗ, ಬಲಿದಾನ ಎಂದೆಂದೂ ಅಮರ. ಅವರನ್ನು ಸದಾ ಸ್ಮರಿಸುವ ಉದ್ದೇಶದಿಂದಲೇ ಪ್ರತಿ ವರ್ಷ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಮ.ಮ.ಬೆಟ್ಟ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಜಯರಾಂ ತಿಳಿಸಿದರು.

ಮ.ಮ.ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಿನಾಥಂ ಮುಖ್ಯ ರಸ್ತೆಯ ಸಮೀಪ ನಿರ್ಮಿಸಲಾಗಿರುವ ಸ್ಮಾರಕ ಸ್ಥಳದಲ್ಲಿ ಬುಧುವಾರ ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

"ವೀರಪ್ಪನ್ ಕಾರ್ಯಾಚರಣೆ ವೇಳೆ ಆತನ ಗುಂಡಿನ ದಾಳಿಗೆ ನಮ್ಮ ಹಲವು ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗ, ಬಲಿದಾನದ ನೆನಪಿಗಾಗಿ ಗೋಪಿನಾಥಂ ಗ್ರಾಮದ ಸಮೀಪದ ಚಮ್ಮೆಡು ಕರಿಕಲ್ಲು ಗುಡ್ಡೆ (ಮೆಟ್‌ಕಲ್) ಹೊಗೆನಕಲ್ ರಸ್ತೆಯಲ್ಲಿ ಹುತಾತ್ಮ ಸ್ಮಾರಕ ನಿರ್ಮಿಸಲಾಗಿದೆ. ಅವರ ತ್ಯಾಗದ ಫಲವಾಗಿಯೇ ಇಂದು ನಾವೆಲ್ಲರೂ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿದೆ " ಎಂದು ಅವರು ಭಾವುಕರಾಗಿ ನುಡಿದರು.

ಹುತಾತ್ಮ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಭಾವಚಿತ್ರಗಳನ್ನು ಇರಿಸಿ, ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಹುತಾತ್ಮ ಸ್ಮಾರಕಕ್ಕೆ ಪೂಜೆ ಸಲ್ಲಿಸಿ, ಹೂಮಾಲೆ ಹಾಕಿ ನಮನ ಸಲ್ಲಿಸಲಾಯಿತು. ಎಲ್ಲರೂ ಎರಡು ನಿಮಿಷ ಮೌನಾಚರಣೆ ಮಾಡಿ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿದರು.


ಈ ಸಂದರ್ಭದಲ್ಲಿ ಮ.ಮ.ಬೆಟ್ಟ ಪೊಲೀಸ್ ಠಾಣೆಯ ಎಎಸ್ಐ ಗೋವಿಂದರಾಜು, ಪೇದೆಗಳಾದ ಸಿದ್ದರಾಜು, ಸಿದ್ದರಾಮಯ್ಯ, ಪ್ರಸಾದ್ ನಾಯ್ಕ ಸೇರಿ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.