ದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿಯ ಕೊಡುಗೆ ಅಪಾರವಾಗಿದೆ. ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವ ಜತೆಗೆ, ಅವರ ಕುಟುಂಬದವರನ್ನೂ ಗೌರವಿಸಬೇಕು.
ಧಾರವಾಡ:
ದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿಯ ಕೊಡುಗೆ ಅಪಾರವಾಗಿದೆ. ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವ ಜತೆಗೆ, ಅವರ ಕುಟುಂಬದವರನ್ನೂ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್. ಆರ್., ಹೇಳಿದರು.ಬುಧವಾರ ಇಲ್ಲಿನ ಸ್ಮಾರಕ ಆವರಣ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ವತಿಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಕರ್ತವ್ಯ ನಿರ್ವಹಿಸುವಾಗ 368 ಪೊಲೀಸ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಬ್ಬ, ಉತ್ಸವ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ನಿರಂತರವಾಗಿ ಶ್ರಮಿಸುತ್ತಾರೆ. ರೈತರ ಹೋರಾಟದ ಸಂದರ್ಭದಲ್ಲಿ ಬೆಳಗಾವಿಯಿಂದ ಸುಮಾರು 100 ಕಿಮೀ ದೂರದ ವರೆಗೆ ರೈತರೊಂದಿಗೆ ತೆರಳಿ ಭದ್ರತೆ ಒದಗಿಸಿರುವುದು ಪೊಲೀಸರ ಕರ್ತವ್ಯ ನಿಷ್ಠೆಗೆ ಉದಾಹರಣೆಯಾಗಿದೆ ಎಂದರು.ಪೊಲೀಸರ ಸೇವೆಯ ಹಿಂದೆ ಅವರ ಕುಟುಂಬದ ತ್ಯಾಗವೂ ಇದೆ. ಆದ್ದರಿಂದ ಹುತಾತ್ಮರ ಸೇವೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ, ಅವರ ಕುಟುಂಬಗಳಿಗೆ ಬೆಂಬಲ ನೀಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಜಿಲ್ಲಾಡಳಿತವು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಲಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ. ದೇಶದ ರಕ್ಷಣೆ, ಆಂತರಿಕ ಭದ್ರತೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಅ. 21ರಂದು ಪೊಲೀಸ್ ಹುತಾತ್ಮ ದಿನ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ್ ಆಗಿ ಡಿಎಆರ್ನ ಆರ್ಪಿಐ ವಿಠಲ್ ಆರೇರ್ ಕಾರ್ಯನಿರ್ವಹಿಸಿದರು. ಮೊದಲನೇ ತುಕುಡಿಗೆ ಆರ್ಎಸ್ಐ ಮಂಜುನಾಥ ಕುರಗೋಡ ಹಾಗೂ ಎರಡನೇ ತುಕುಡಿಗೆ ಆರ್ಎಸ್ಐ ವಾಸು ರಕ್ಷೇದ ನೇತೃತ್ವ ವಹಿಸಿದ್ದರು. ಬ್ಯಾಂಡ್ ಮಾಸ್ಟರ್ ವೈ.ಎಫ್. ಭಜಂತ್ರಿ ಹಾಗೂ ಡಿಎಆರ್ನ ಎ.ಆರ್ಎಸ್ಐ ಮತ್ತು ತಂಡದವರು ಸುಶ್ರಾವ್ಯವಾಗಿ ವಾದ್ಯ ನುಡಿಸಿದರು.ವೇದಿಕೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ಉಪ ವಿಭಾಗದ ಡಿಎಸ್ಪಿ ಶಿವಾನಂದ ಕಟಗಿ, ಡಿಎಸ್ಪಿಗಳಾದ ವಿನೋದ ಮುಕ್ತೆದಾರ, ಡಿ.ಎಸ್. ಧನಗರ ಉಪಸ್ಥಿತರಿದ್ದರು.
ಕಾರ್ಯಕ್ರಮ ಎ.ಎಫ್. ಜಿಲ್ಲೇನವರ ನಿರೂಪಿಸಿದರು. ವಿ.ಎಂ. ದೊಡ್ಡಮನಿ ವಂದಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಹುತಾತ್ಮರಾದ ಕುಟುಂಬದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.