ಸಾಯಿ ಲೇಔಟ್‌ ಇನ್ನೂ ಜಲಾವೃತ

| Published : Oct 25 2024, 01:49 AM IST / Updated: Oct 25 2024, 01:50 AM IST

ಸಾರಾಂಶ

ಬೆಂಗಳೂರಿನಲ್ಲಿ ಮಳೆಯಿಂದ ಜಲಾವೃತಗೊಂಡಿದ್ದ ಮಹದೇವಪುರದ ಸಾಯಿಲೇಔಟ್‌ ಹೊರತು ಪಡಿಸಿ ಉಳಿದೆಲ್ಲ ಬಡಾವಣೆಗಳು ಗುರುವಾರ ಸಂಜೆಯ ವೇಳೆಗೆ ಸಹಜ ಸ್ಥಿತಿಗೆ ಮರಳಿದಂತೆ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಜಲಾವೃತಗೊಂಡಿದ್ದ ಮಹದೇವಪುರದ ಸಾಯಿಲೇಔಟ್‌ ಹೊರತು ಪಡಿಸಿ ಉಳಿದೆಲ್ಲ ಬಡಾವಣೆಗಳು ಗುರುವಾರ ಸಂಜೆಯ ವೇಳೆಗೆ ಸಹಜ ಸ್ಥಿತಿಗೆ ಮರಳಿದಂತೆ ಕಂಡು ಬಂದಿದೆ.

ಮಹದೇವಪುರದ ಸಾಯಿಲೇಔಟ್‌ನಲ್ಲಿ ಗುರುವಾರ ಸಹ ತುಂಬಿಕೊಂಡಿದ್ದ ನೀರನ್ನು ಹೊರ ಹಾಕಲು ಬಿಬಿಎಂಪಿಯ ಅಧಿಕಾರಿಗಳು ಮತ್ತೊಂದು ಕಡೆ ವ್ಯವಸ್ಥೆ ಮಾಡಿದ್ದು, ಶುಕ್ರವಾರ ಸಂಜೆ ವೇಳೆ ಪ್ರವಾಹ ಸಂಪೂರ್ಣವಾಗಿ ತಗ್ಗಲಿದೆ. ಗುರುವಾರ ಬೆಳಗ್ಗೆ ಮಾತ್ರ ಸಾಯಿ ಲೇಔಟ್‌ನ ಸುಮಾರು 50 ಮಂದಿ ಮಾತ್ರ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಬುಧವಾರ ಸಂಜೆ ನಗರದಲ್ಲಿ ಸುರಿದ ಮಳೆಯಿಂದ ಮತ್ತೆ ಸಾಯಿಲೇಔಟ್‌ನಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಇದರಿಂದ ಗುರುವಾರ ಜನರು ರಸ್ತೆಯಲ್ಲಿ ಓಡಾಡಲು ಪರಿತಪಿಸಿದರು. ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು.ಸಾಯಿಬಾಬಾ ದೇವಸ್ಥಾನಕ್ಕೂ ಜಲಕಂಟಕ

ಸಾಯಿಬಾಬಾ ಲೇಔಟ್‌ನಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಮಳೆ ನೀರು ಗುರುವಾರವೂ ತುಂಬಿಕೊಂಡಿತ್ತು. ಸಾಯಿಬಾಬಾಗೆ ಅಭಿಷೇಕ ಮಾಡಲು ಶುದ್ಧವಾದ ನೀರು ಇರಲಿಲ್ಲ. ಬೇರೆ ಕಡೆಯಿಂದ ನೀರು ತೆಗೆದುಕೊಂಡು ಬಂದು ಅಭಿಷೇಕ ಮಾಡಬೇಕಾದ ಸ್ಥಿತಿ ಉಂಟಾಗಿತ್ತು. ಗುರುವಾರವಾಗಿದ್ದರಿಂದ ನೂರಾರು ಸಂಖ್ಯೆಯ ಭಕ್ತರು ನಿಂತ ನೀರಿನಲ್ಲಿ ಆಗಮಿಸಿ ದರ್ಶನ ಪಡೆದರು.

ಅಪಾರ್ಟ್‌ಮೆಂಟ್‌ಗೆ ಬಂದು ಹೋದ ಜನ: ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿ ನಿಂತಿದ್ದ ನೀರು ಸಂಪೂರ್ಣವಾಗಿ ತೆರವು ಮಾಡಲಾಗಿದ್ದು, ಗುರುವಾರ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಆಗಮಿಸಿ ವೀಕ್ಷಿಸಿದರು. ಒಂದು ವಾರ ಕಾಲ ಅಪಾರ್ಟ್‌ಮೆಂಟ್‌ ನಲ್ಲಿ ವಾಸಕ್ಕೆ ಅವಕಾಶ ಇಲ್ಲದ ಕಾರಣ ನಿವಾಸಿಗಳು ವಾಪಾಸ್‌ ಹೋದರು.

ಸಿಎಂಗಾಗಿ ಕಾದು ನಿಂತ ಸಾಯಿ ಲೇಔಟ್‌ ಮಂದಿ: ಬಾಬುಸಾಪಾಳ್ಯದ ಕಟ್ಟಡ ದುರಂತ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾಯಿಲೇಔಟ್‌ಗೂ ಆಗಮಿಸಿ ಜನರ ಸಂಕಷ್ಟ ಆಲಿಸಲಿದ್ದಾರೆ ಎಂಬ ಭಾವನೆಯಿಂದ ಸಾಕಷ್ಟು ಮಂದಿ ಕಾದು ನಿಂತುಕೊಂಡಿದ್ದರು. ಆದರೆ, ಚನ್ನಪಟ್ಟಣ್ಣ ಉಪ ಚುನಾವಣೆ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿದ ಹಿನ್ನೆಲೆಯಲ್ಲಿ ನಿರಾಶೆಗೊಂಡರು.