ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಮುದಾಯಗಳ ಅಭಿವೃದ್ಧಿ ಚಿಂತನೆ ನಡೆಸುವ ಸಿರಿಗೆರೆ, ಸಿದ್ಧಗಂಗಾ ಮತ್ತು ಸುತ್ತೂರು ಮಠಗಳಿಂದ ದೊರೆತಿರುವ ಅನ್ನ, ಅರಿವು ಮತ್ತು ಅಕ್ಷರದ ಸೇವೆಯಿಂದ ದೊಡ್ಡ ಪ್ರಮಾಣದ ಅನುಕೂಲ ಸಮುದಾಯಗಳಿಗೆ ಆಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು.ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಆರಂಭಗೊಂಡ ಶಿವಕುಮಾರ ಶ್ರೀಗಳ 34ನೆಯ ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ ಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪುರಸ್ಕಾರ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜನರಲ್ಲಿ ಮಾನವೀಯ ಮೌಲ್ಯಗಳು ಅಳವಡಲು ಮಠಗಳ ಕೊಡುಗೆ ಮಹತ್ವದ್ದಾಗಿದೆ. ಹಾಗಾಗಿ ಇತಿಹಾಸದಲ್ಲಿ ಮಠಗಳ ಪಾತ್ರ ಚಿರಸ್ಥಾಯಿಯಾಗಿದೆ ಎಂದರು.ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿರುವುದನ್ನು ಗಮನಿಸಿದ ಹಿರಿಯ ಶ್ರೀಗಳು ಗ್ರಾಮಾಂತರ ನಾಡಿನಲ್ಲಿ ಶಾಲೆಗಳನ್ನು ತೆರೆದು ನೀಡಿದ ಕೊಡುಗೆ ಮರೆಯುವಂತದ್ದಲ್ಲ. ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಕಳಕಳಿ ಮತ್ತು ದೂರದೃಷ್ಟಿಯಿಂದ ಸಮಾಜವನ್ನು ಶ್ರೀಗಳು ಎತ್ತರಕ್ಕೆ ಕೊಂಡೊಯದ್ದಿದ್ದಾರೆ ಎಂದರು.
ಈಗಿನ ಶಿವಮೂರ್ತಿ ಶ್ರೀಗಳು ಪರಿಸರ ಪ್ರೇಮಿ, ರೈತ ಪ್ರೇಮಿಯಾಗಿ ಅವರ ಏಳಿಗೆಯ ಕನಸು ಕಾಣುತ್ತಿದ್ದಾರೆ. ರೈತಾಪಿ ವರ್ಗಕ್ಕೆ ಅವರ ಕೊಡುಗೆ ವಿಶೇಷವಾದುದು ಎಂದರು.ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ಮಾತನಾಡಿ, ಮುಂದಿನ ಮಕ್ಕಳಿಗೆ ಪ್ರೇರಣೆಯಾಗಲಿ ಎಂಬ ಸದುದ್ದೇಶದಿಂದ ಸಂಸ್ಥೆಯಲ್ಲಿ ಓದಿ ಉನ್ನತ ಅಂಕಗಳಿಸಿದ ಮಕ್ಕಳನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಗುತ್ತಿದೆ. ಸಂಸ್ಥೆಯು ನಡೆಸುತ್ತಿರುವ ಶಾಲಾ ಕಾಲೇಜುಗಳಲ್ಲಿ ಈ ವರ್ಷ 54 ಸಾವಿರ ಮಕ್ಕಳು ಓದುತ್ತಿದ್ದಾರೆ, ಅವರಲ್ಲಿ 10 ಸಾವಿರ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಓದಿದ ಬಹಳಷ್ಟು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಚಂದ್ರಯಾನದ ಸಂದರ್ಭದಲ್ಲಿಯೂ ಕೆಲವರು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ವಿಶೇಷಾಧಿಕಾರಿ ವೀರಣ್ಣ ಎಸ್.ಜತ್ತಿ ಮಾತನಾಡಿ, ಶಿಕ್ಷಣ ಎಂದರೆ ಬೆಳಕು, ಬಾಳಿಗೆ ಬೆಳಕು ಬೇಕು. ಹಾಗಾಗಿ ಶಿಕ್ಷಣದ ಮೂಲಕ ಎಲ್ಲರ ಬಾಳಿಗೆ ಬೆಳಕನ್ನು ಸಂಸ್ಥೆಯು ನೀಡಡುತ್ತಿದೆ ಎಂದರು. ವಿದ್ಯಾರ್ಥಿಗಳು ನೈತಿಕ ಬಲ, ಬದ್ಧತೆ, ತಂದೆ ತಾಯಿಯರನ್ನು ಗೌರವಿಸುವಂತಹ ಗುಣಾದರ್ಶಗಳನ್ನು ಬೆಳೆಸಿಕೊಳ್ಳಬೇಕೆಂದರು.ಸಾನ್ನಿಧ್ಯ ವಹಿಸಿದ್ದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಶಿಕ್ಷಣ ಎಂಬುದು ಜ್ಞಾನಸಂಪಾದನೆ, ಆತ್ಮವಿಕಾಸದ ಸಾಧನ. ಅದನ್ನು ಮಕ್ಕಳು ಸಾಧಿಸಿ ಉನ್ನತ ಮಟ್ಟಕ್ಕೆ ಏರಬೇಕೆಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನಾಗೇಶ್ವರಿ, ಅನಿತಾ, ಪಾಂಡುರಂಗ ಆನೆಗೊಂದಿ ಮಾತನಾಡಿದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ನೂರಾರು ವಿದ್ಯಾರ್ಥಿಗಳನ್ನು ಚಿನ್ನ, ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. ಬಿ.ಎಲ್.ಆರ್. ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜಿ. ಸಂತೋಷ್ ಕುಮಾರ್ ಸ್ವಾಗತಿಸಿದರು.