ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಲವಾರು ಹಗರಣಗಳ ಮೂಲಕ ರಾಜ್ಯದ ಜನತೆಯ ಬದುಕನ್ನು ಅಧೋಗತಿಗೆ ದೂಡುವ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಆರೋಪಿಸಿದರು.ಕಾಂಗ್ರೆಸ್ ಸರ್ಕಾರ ನಡೆಸಿರುವ ಹಗರಣಗಳ ಬಗ್ಗೆ ಚಾಟಿ ಬೀಸಿ ಮಾತನಾಡಿದ ಅವರು, ವಾಲ್ಮೀಕಿ ಹಗರಣ, ಎಸ್.ಸಿಪಿ, ಎಂಡಿಎ ಸೇರಿದಂತೆ ಟಿ. ನರಸೀಪುರ ಪುರಸಭೆಯಲ್ಲಿ 40 ಕೋಟಿ ರು. ಗಳ ಹಗರಣ ಮಾಡುವ ಮೂಲಕ ದುರಾಡಳಿತ ನಡೆಸುತ್ತಿದ್ದು, ಸರ್ಕಾರದ ಈ ದುರಾಡಳಿತದಿಂದ ರಾಜ್ಯದ ಜನತೆಯ ಬದುಕು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಕಿಡಿಕಾರಿದರು.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಂಡ ಸರ್ಕಾರವಾಗಿದ್ದು, ಇತ್ತೀಚಿಗೆ ಯೂರಿಯಾ ಹಗರಣ ಸಹ ಸೇರ್ಪಡೆಯಾಗಿದೆ. ಮೊನ್ನೆ ನಂಜನಗೂಡಿನಲ್ಲಿ ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಯೂರಿಯಾ ಮೂಟೆಗಳನ್ನು ರೈತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ, ವಾಲ್ಮೀಕಿ ಹಗರಣದಡಿ ಬರೋಬ್ಬರಿ 187 ಕೋಟಿ ರು. ಗಳ ಅವ್ಯವಹಾರದಲ್ಲಿ ಸರ್ಕಾರ ಸಿಲುಕಿದ್ದು, ಹಗರಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರು ಜೈಲಿಗೂ ಹೋಗಿ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕಾರ್ಯದೆಡೆಗೆ ಗಮನಹರಿಸದೇ ಬರೀ ಹಗರಣಗಳನ್ನು ಮಾಡುವ ಮೂಲಕ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದು ಅವರು ಆರೋಪಸಿದಿರ.ಉ38 ತಿಂಗಳು ಬಾಕಿ ನೀಡುವಂತೆ ಸಾರಿಗೆ ಇಲಾಖೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಟಿ. ನರಸೀಪುರ ಪುರಸಭೆಯಲ್ಲಿ 40 ಕೋಟಿ ರು.ಗಳ ಅವ್ಯವಹಾರ ನಡೆದಿದೆ ಎಂದು ಅಲ್ಲಿನ ಮುಖ್ಯಾಧಿಕಾರಿಯೆ ಹೇಳಿದ್ದಾರೆ. ಹಾಗಾಗಿ ಪುರಸಭೆ ಹಗರಣದಲ್ಲಿ ಹಣ ಲೂಟಿ ಹೊಡೆದಿರುವ ಮಾಜಿ ಅಧ್ಯಕ್ಷರನ್ನು ಕೇವಲ ಪಕ್ಷದಿಂದ ಉಚ್ಛಾಟನೆ ಮಾಡಿ, ಬಂಧಿಸಿದರೆ ಸಾಲದು. ಸಾರ್ವಜನಿಕರಿಂದ ಹಣ ಪಡೆದು ಸರ್ಕಾರಕ್ಕೆ ಪಾವತಿ ಮಾಡದೇ ಇತ್ತ ಫಲಾನುಭವಿಗಳಿಗೂ ಕೊಡದೇ ವಂಚನೆ ಮಾಡಿರುವ ಆತನಿಂದ 40 ಕೋಟಿ ರು..ಗಳನ್ನು ವಸೂಲಿ ಮಾಡಿ ಫಲಾನುಭವಿಗಳಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.ಅರಮನೆ, ಚಾಮುಂಡಿ ಬೆಟ್ಟವನ್ನು ಮುಲ್ಲಾಗಳು ಕಟ್ಟಿದ್ದರೆ.. !ಕನ್ನಂಬಾಡಿ ಕಟ್ಟೆಗೆ ಮೊದಲು ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂದು ಹೇಳಿಕೆ ನೀಡಿದ್ದ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಯನ್ನು ಖಂಡಿಸಿದ ಸುಬ್ಬಣ್ಣ ಇತ್ತೀಚಿಗೆ ಮೈಸೂರು ಅರಸರ ಮೇಲೆ ನಿರಂತರವಾಗಿ ಟೀಕೆ ಮಾಡಲಾಗುತ್ತಿದೆ. ಕನ್ನಂಬಾಡಿ ಕಟ್ಟಿದ್ದು, ಯಾರೆಂದು ಇಡೀ ದೇಶದ ಜನರಿಗೆ ಗೊತ್ತಿದೆ, ಮೈಸೂರು ಅರಸರು ತಮ್ಮ ಕುಟುಂಬದ ಒಡವೆ ಗಿರವಿ ಇಟ್ಟು ಕನ್ನಂಬಾಡಿ ಕಟ್ಟಿದ್ದಾರೆ. ಅದರ ಅರಿವಿಲ್ಲದ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಟಿಪ್ಪುವೇ ಕನ್ನಂಬಾಡಿಗೆ ಅಡಿಗಲ್ಲು ಹಾಕಿದ್ದಾರೆಂದು ಹೇಳುತ್ತಿದ್ದಾರೆ, ಹಾಗಿದ್ದರೆ ಅರಮನೆ, ಚಾಮುಂಡಿ ಬೆಟ್ಟವನ್ನು ಯಾರಾದರು ಮುಲ್ಲಾಗಳು ಕಟ್ಟಿದ್ದಾರೆಂದು ಹೇಳಿ ಬಿಡಿ ಮಹದೇವಪ್ಪನವರೇ, ಮೈಸೂರು ಅರಸರನ್ನು ಟೀಕೆ ಮಾಡುವ ನಿಮ್ಮ ಮನಸ್ಥಿತಿಗೆ ಏನು ಹೇಳಬೇಕೋ? ಮುಂದೊಂದು ದಿನ ಮೈಸೂರು ಅರಸ ಮನೆತನದ ಶಾಪ ನಿಮಗೆ ತಟ್ಟದೆ ಇರದು. ಮುಂದಾದರೂ ಸುಳ್ಳು ಹೇಳುವುದನ್ನು ಬಿಟ್ಟು, ಕ್ಷೇತ್ರದ ಹಾಗೂ ರಾಜ್ಯದ ಅಭಿವೃದ್ಧಿ ಕಡೆ ಗಮನ ನೀಡಿ ಎಂದರು.ಮಾಜಿ ಶಾಸಕ ಎಸ್. ಬಾಲರಾಜ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಇದಿಯೋ ಇಲ್ಲವೋ ಎಂಬ ಪ್ರಶ್ನೆ ಉದ್ಬವವಾಗುವ ಸನ್ನಿವೇಶ ಸನ್ನಿಹಿತವಾಗಿದೆ. ಬೇಡದ ಸಮಸ್ಯೆಗಳನ್ನು ಸೃಷ್ಟಿ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತವನ್ನು ಅಧೋಗತಿಗೆ ಕೊಂಡೊಯ್ಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅದರ ಫಲವನ್ನು ಅನುಭವಿಸಲಿದೆ ಎಂದರು.ಜಿಲ್ಲಾ ಗ್ರಾಮಾಂತರ ಮಾಜಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಬಿಜೆಪಿ ಮುಖಂಡ ಡಾ. ರೇವಣ್ಣ, ಕ್ಷೇತ್ರಾಧ್ಯಕ್ಷ ಶಿವಕುಮಾರ್, ದಯಾನಂದ ಪಟೇಲ್, ದಾಸಯ್ಯ, ಮಹೇಶ್, ಸಿದ್ದಪ್ಪ, ಪುರಸಭೆ ಸದಸ್ಯ ಎಸ್.ಕೆ. ಕಿರಣ್, ಬನ್ನೂರು ರಾಮಚಂದ್ರ, ಎನ್. ಲೋಕೇಶ್, ಎಸ್.ಬಿ.ಟಿ. ಸುರೇಶ್, ಎಸ್.ಎಂ.ಆರ್. ಪ್ರಕಾಶ್, ರಾಜಶೇಖರ್, ಪೂಜಿತ್ ಕುಮಾರ್, ಪ್ರಕಾಶ್ ಇದ್ದರು.