ಶತಮಾನದ ಶಾಲೆ ಈಗ ಹೈಟೆಕ್ ಸ್ಪರ್ಶ

| Published : Nov 25 2025, 03:15 AM IST

ಸಾರಾಂಶ

ಪಾಲಕರು ಎಲ್ಲರೂ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಮುಂಬರುವ ದಿನಗಳಲ್ಲಿ ಇನ್ನಷ್ಟು ಶಾಲೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಸಿ.ಎಸ್.ನಾಗಡೌಡ ತಿಳಿಸಿದ್ದಾರೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಶಿಥಿಲಗೊಂಡು ಈಗಲೋ, ಆಗಲೋ ಬೀಳುವ ಹಂತದಲ್ಲಿದ್ದ ಪಟ್ಟಣದ ಮುಖ್ಯ ಬಜಾರದಲ್ಲಿರುವ ಸರ್ಕಾರಿ ಕನ್ನಡ ಗಂಡುಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ (ಕೆಬಿಎಂಪಿಎಸ್) ಇದೀಗ ಹೈಟೆಕ್ ಸ್ಪರ್ಶ ಪಡೆದುಕೊಂಡು ಎಲ್ಲರ ಗಮನ ಸೆಳೆಯುತ್ತಿದೆ.

೧೮೪೬ರಲ್ಲಿ ಅಂದಿನ ಹಳೇ ಮುದ್ದೇಬಿಹಾಳ ಕಿಲ್ಲಾ ಗಲ್ಲಿಯ ನಾಡಗೌಡರ ಕಟ್ಟಡದಲ್ಲಿ ಶಾಲೆ ಪ್ರಾರಂಭವಾಗಿತ್ತು. ಊರು ಬೆಳೆದಂತೆ ೧೯೪೧ರಲ್ಲಿ ಈಗಿರುವ ಸ್ಥಳದಲ್ಲಿ ಈ ಸರ್ಕಾರಿ ಶಾಲೆಯನ್ನು ಬ್ರಿಟಿಷ್ ಮಾದರಿಯ ಕಟ್ಟಡದಂತೆ ನಿರ್ಮಿಸಲಾಯಿತು. ಅಂದಿನಿಂದ ಶಾಲೆಯಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಮಾಡಲಾಗುತ್ತಿತ್ತು. ಆದರೆ, ಅವ್ಯಾವೂ ಶಾಶ್ವತವಾಗಿರಲಿಲ್ಲ. ಹೀಗಾಗಿ ನಮ್ಮೂರಿನ ಶತಮಾನದ ಶಾಲೆಗೆ ಪುನರುಜ್ಜೀವನ ನೀಡಬೇಕು. ಲಕ್ಷಾಂತರ ಮಕ್ಕಳ ಬಾಳಿಗೆ ದಾರಿ ತೋರಿದ ಶಾಲೆ ಹೈಟೆಕ್‌ ಆಗಬೇಕು ಎಂದು ಶಿಕ್ಷಣ ಪ್ರೇಮಿಗಳು, ಶಾಲೆ ಹಳೇ ವಿದ್ಯಾರ್ಥಿಗಳು, ನಾಗರಿಕರು ಒತ್ತಾಯಿಸುತ್ತ ಬಂದಿದ್ದರು. ಇವರೆಲ್ಲರ ಮನವಿಗೆ ಸ್ಪಂದಿಸಿದ ಶಾಸಕ ಸಿ.ಎಸ್.ನಾಡಗೌಡ ಶತಮಾನದ ಶಾಲೆಗೆ ಹೈಟೆಕ್ ಸ್ಪರ್ಶ ಕೊಟ್ಟಿದ್ದಾರೆ.

₹೧.೭೩ ಕೋಟಿ ವೆಚ್ಚದಲ್ಲಿ ನಿರ್ಮಾಣ:

ಶಿಕ್ಷಣ ಪ್ರೇಮಿಯೂ ಆಗಿರುವ ಹಾಗೂ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಪ್ಪಾಜಿ ನಾಡಗೌಡರು ಶತಮಾನದ ಶಾಲೆಗೆ ಹೈಟೆಕ್ ಸ್ಪರ್ಶ ನೀಡಬೇಕೆಂದು ಪಣತೊಟ್ಟು ಸರ್ಕಾರದಿಂದ ₹೧.೭೩ ಕೋಟಿ ಅನುದಾನ ಮಂಜೂರು ಮಾಡಿಸಿ ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿದ ಶಾಲೆ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ೧೦ ಕೊಠಡಿಗಳಿದ್ದು, ಬಾಲಕ , ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳಿವೆ. ಎರಡು ಸ್ಮಾರ್ಟ್ ಬೋರ್ಡ್, ೧೧ ಗ್ರೀನ್‌ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಶಾಲೆಯ ಛಾವಣಿಗೆ ವಿನೂತನ ತಂತ್ರಜ್ಞಾನ ಬಳಸಿ ಹೊದಿಕೆ ಹಾಕಲಾಗಿದೆ. ಇದರಿಂದ ಮಳೆಗಾಲದಲ್ಲಿ ಸೂರುವುದಿಲ್ಲ. ಇನ್ನೂ ಶಾಲೆಗೆ ಭದ್ರತೆ ಒದಗಿಸಲು ಸುತ್ತಲೂ ಕಾಂಪೌಂಡ್, ಗೇಟ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಸರ್ಕಾರಿ ಶಾಲೆ ಮಕ್ಕಳು ಹೈಟೆಕ್ ಶಿಕ್ಷಣ ಪಡೆಯುವಂತೆ ಮಾಡಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳ ಬೆಳಕು:

೧೧೧ ವರ್ಷದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಶಾಲೆಗೆ ಹಾಗೂ ಶಿಕ್ಷಕರಿಗೆ ಸಲ್ಲುತ್ತದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್, ವೈದ್ಯಕೀಯ, ಇಂಜಿನಿಯರ್ ಸೇರಿದಂತೆ ನಾಡಿನ ಹೆಸರಾಂತ ಸಾಹಿತಿಗಳಾಗಿ ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಮುಖ್ಯಶಿಕ್ಷಕ ಎನ್.ಎ.ತೊಂಡಿಹಾಳ ಹಾಗೂ ಎಲ್ಲ ಸಹ ಶಿಕ್ಷಕರ ಸಹಕಾರ ಹಾಗೂ ಕಾಳಜಿಯಿಂದಾಗಿ ಇಂದು ಕಟ್ಟಡವೂ ಸುಸಜ್ಜಿತಗೊಂಡು ಆಕರ್ಷಣೆಯಾಗಿದೆ. ಮಾತ್ರವಲ್ಲದೇ ಕಲಿಕಾ ಬೋಧನೆ ಚುರುಕು ಗೊಂಡಂತಾಗಿದೆ ಎಂದರೆ ತಪ್ಪಾಗಲಾರದು.

ನಾಡಗೌಡರ ಕಾರ್ಯಕ್ಕೆ ಮೆಚ್ಚುಗೆ

ಸದಾ ಮತಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಬಗ್ಗೆ ಕಾಳಜಿವಹಿಸುವ ಅಪ್ಪಾಜಿ ನಾಡಗೌಡರು ಸರ್ಕಾರಿ ಶಾಲೆಗೆ ಬರೋಬ್ಬರಿ ₹೧.೭೩ ಕೋಟಿ ಅನುದಾನ ತಂದು ಶಾಲೆ ಜೀರ್ಣೋದ್ಧಾರ ಮಾಡಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗೂ ಪೈಪೋಟಿ ನೀಡುವಂತೆ ನಿರ್ಮಾಣವಾಗಿದ್ದು ಮುದ್ದೇಬಿಹಾಳ ತಾಲೂಕಿನ ಹೆಮ್ಮೆ ಎನ್ನುತ್ತಿದ್ದಾರೆ ನಾಗರಿಕರು.

ಶತಮಾನದ ಶಾಲೆಗೆ ಕಾಯಕಲ್ಪ ನೀಡುವ ಸಂಕಲ್ಪ ನಮ್ಮದಾಗಿತ್ತು. ಹೀಗಾಗಿ ಕೆ ಎಸ್ ಡಿ ಎಲ್ ನಿಗಮದಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಮೀಸಲಿರಿಸಿದ ಹಣದಲ್ಲಿ ಅನುದಾನ ತಂದು ಜೀರ್ಣೋದ್ಧಾರ ಮಾಡಲಾಗಿದೆ. ಪಾಲಕರು ಎಲ್ಲರೂ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಮುಂಬರುವ ದಿನಗಳಲ್ಲಿ ಇನ್ನಷ್ಟು ಶಾಲೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಸಿ.ಎಸ್.ನಾಗಡೌಡ ತಿಳಿಸಿದ್ದಾರೆ.ಸರ್ಕಾರಿ ಶಾಲೆಗಳು ನಮ್ಮೇಲ್ಲರ ಆಸ್ತಿ. ಪಟ್ಟಣದ ಮುಖ್ಯ ಬಜಾರದಲ್ಲಿರುವ ಸರ್ಕಾರಿ ಕನ್ನಡ ಗಂಡುಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಶಿಥಿಲವಾಗಿ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಈಶಾಲೆಯನ್ನು ಜಿರ್ಣೋದ್ಧಾರಗೊಳಿಸಬೇಕು ಎಂಬುದು ಹಳೆ ವಿದ್ಯಾರ್ಥಿ ಗಳ ಹಾಗೂ ಸಾರ್ವಜನಿಕ ಒತ್ತಾಯದ ಕೂಗು ಕೇಳಿ ಬಂದಿತ್ತು ಆದರೇ ಶಾಸಕ ಅಪ್ಪಾಜಿ ನಾಡಗೌಡರ ಶಿಕ್ಷಣ ಸಾಮಾಜಿಕ ಕಾಳಜಿಯಿಂದ ೧೧೧ ವರ್ಷ ಪೂರೈಸಿದ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ದು ಸಂತಸ ತಂದಿದ್ದು, ಶಾಸಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಎನ್.ಎ ತೊಂಡಿಹಾಳ ಹೇಳಿದ್ದಾರೆ.

ಶಾಲೆಗೆ ವಿನೂತನ ತಂತ್ರಜ್ಞಾನದಡಿ ಛಾವಣಿ ಹಾಕಿರುವುದು ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರೊಟ್ಟಿಗೆ ಸ್ಮಾರ್ಟ್ ಕ್ಲಾಸ್, ಗುಣಮಟ್ಟದ ಕಟ್ಟಡ, ಶೌಚಗೃಹ, ಕಾಂಪೌಡ್ ಒಳಗೊಂಡಿರುವುದು ಖುಷಿ ಸಂಗತಿ. ನಮ್ಮ ಸರ್ಕಾರಿ ಶಾಲೆ ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ಇರುವುದು ಅಭಿಮಾನದ ಸಂಗತಿ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್ ಸಾವಳಗಿ ಹೇಳಿದರು.