ಶಾಲೆಯ ಜಾಗವೂ ವಕ್ಫ್‌ ಹೆಸರಿಗೆ ಖಂಡಿಸಿ ಪ್ರತಿಭಟನೆ

| Published : Nov 06 2024, 11:49 PM IST / Updated: Nov 06 2024, 11:50 PM IST

ಸಾರಾಂಶ

ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಗೋಣಿ ಸೋಮನಹಳ್ಳಿಯ ಸರ್ಕಾರಿ ಶಾಲೆ ಜಾಗದ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಬಂದಿರುವುದನ್ನು ಖಂಡಿಸಿ ಬುಧವಾರ ಪಟ್ಟಣದ ನೆಹರೂ ನಗರ ವೃತ್ತದಿಂದ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟಿಸಿ ತಹಸೀಲ್ದಾರ್‌ ಎಂ ಮಮತಾ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಈಗಾಗಲೇ ವಕ್ಫ್ ಭೂ ವಿವಾದ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದು, ಈ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದ ಎಲ್ಲಡೆ ವಿವಾದ ಎಬ್ಬಿಸುತ್ತಿರುವ ವಕ್ಫ್ ಭೂ ವಿವಾದ ತಮ್ಮ ವಿಧಾನಸಭಾ ಕ್ಷೇತ್ರಕ್ಕೂ ಕಾಲಿಟ್ಟಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ ವಿವಾದ ನಮ್ಮ ತಾಲೂಕಿಗೂ ಕಾಲಿಟ್ಟಿದ್ದು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ವಜಾಗೊಳೊಸಬೇಕು ಎಂದು ಶಾಸಕ ಎಚ್ ಕೆ ಸುರೇಶ್ ಕಿಡಿಕಾರಿದರು.

ತಾಲೂಕಿನ ಹಳೇಬೀಡು ಹೋಬಳಿಯ ಗೋಣಿ ಸೋಮನಹಳ್ಳಿಯ ಸರ್ಕಾರಿ ಶಾಲೆ ಜಾಗದ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಬಂದಿರುವುದನ್ನು ಖಂಡಿಸಿ ಬುಧವಾರ ಪಟ್ಟಣದ ನೆಹರೂ ನಗರ ವೃತ್ತದಿಂದ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟಿಸಿ ತಹಸೀಲ್ದಾರ್‌ ಎಂ ಮಮತಾ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಈಗಾಗಲೇ ವಕ್ಫ್ ಭೂ ವಿವಾದ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದು, ಈ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದ ಎಲ್ಲಡೆ ವಿವಾದ ಎಬ್ಬಿಸುತ್ತಿರುವ ವಕ್ಫ್ ಭೂ ವಿವಾದ ತಮ್ಮ ವಿಧಾನಸಭಾ ಕ್ಷೇತ್ರಕ್ಕೂ ಕಾಲಿಟ್ಟಿದೆ ಎಂದು ಹೇಳಿದರು.

ಹಳೇಬೀಡು ಹೋಬಳಿ ಘಟ್ಟದಳ್ಳಿ ಗ್ರಾಮದ ಸರ್ವೆ ನಂಬರ್‌ ೪೩೫ ರಲ್ಲಿ ೩೮ ಗುಂಟೆಯನ್ನು ದಾನಿಗಳು ಭೂದಾನ ನೀಡಿದ್ದಾರೆ. ಇದರ ಜೊತೆಯಲ್ಲಿ ದೇವಾಲಯ ರುದ್ರಭೂಮಿ ಸೇರಿದಂತೆ ಇನ್ನಿತರ ಗ್ರಾಮದ ಕಳ್ಳಿಬೋರೆ ಕಾವಲು ಸರ್ವೆ ನಂ ೭೫ ರಲ್ಲಿ ಹಿಂದೂ ರುದ್ರಭೂಮಿಗೆ ಮೀಸಲಿಟ್ಟಿದ್ದ ಜಾಗವನ್ನು ಇತ್ತೀಚಿಗೆ ೩ ವರ್ಷಗಳ ಅವಧಿಯಲ್ಲಿ ಸರ್ಕಾರ ವಕ್ಫ್ ಬೋರ್ಡ್‌ಗೆ ನೀಡಿದೆ. ಇದಕ್ಕೆ ಯಾರು ಹೊಣೆ, ಯಾರದು ತಪ್ಪು ಎಂದು ಪ್ರಶ್ನಿಸಿದರು. ರೈತರ ಭೂಮಿ ದಲಿತರ ಭೂಮಿ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದ ಭೂಮಿಯನ್ನು ಸಹ ಕಬಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತರು ತಮ್ಮ ಯಾವ ಭೂಮಿ ಯಾರ ಹೆಸರಿನಲ್ಲಿ ದಾಖಲಾಗಿದೆ ಎಂದು ಭಯಭೀತರಾಗಿದ್ದಾರೆ ಎಂದರು.

೨೦೧೨ರಲ್ಲಿ ಇದ್ದಂತ ಶಾಲೆ ರುದ್ರಭೂಮಿ ದೇವಾಲಯ ಜಾಗ ೨೦೧೯-೨೦ರ ಸಾಲಿನಲ್ಲಿ ವರ್ಕ್ಫ ಸಮಿತಿ ಆಸ್ತಿ ಎಂದು ನಮೂದಾಗಿದೆ. ಇಷ್ಟೆಲ್ಲಾ ಆಸ್ತಿಗಳನ್ನು ಕಬಳಿಸಿದ್ದರೂ ಸಹ ಈ ಕೆಟ್ಟ ಸರ್ಕಾರ ಕೇವಲ ಒಂದು ಸಮಾಜಕ್ಕೆ ಮಾತ್ರವಲ್ಲದೆ ಎಲ್ಲಾ ಸಮಾಜಕ್ಕೂ ದ್ರೋಹ ಮಾಡುತ್ತಿದೆ. ಕೂಡಲೇ ಇದರ ಹಿಂದೆ ಇರುವ ವಸತಿ ಸಚಿವ ಜಮೀರ್‌ ಅಹಮದ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ವಕ್ಫ್ ಭೂಮಿಗೆ ಖಾತೆಯಾಗಿರುವ ಭೂಮಿಯನ್ನು ರದ್ದುಗೊಳಿಸಬೇಕು. ಬೇಲೂರು ದೇವಾಲಯದ ಆಸ್ತಿ ಇತರರು ಅಕ್ರಮವಾಗಿ ಖಾತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಅದರ ವಿರುದ್ಧ ಪ್ರತಿಭಟಿಸಿ ಆಸ್ತಿಯನ್ನು ಬಿಡಿಸಿಕೊಳ್ಳಲಾಗುವುದು ಎಂದರು.

ರಾಷ್ಟ್ರೀಯ ತೆಂಗು ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇಣುಕುಮಾರ್‌ ಮಾತನಾಡಿ, ಈಗಾಗಲೇ ರಾಜ್ಯದ ಬಿಜಾಪುರ ಜಿಲ್ಲೆಯ ೧೫೦೦ ಎಕರೆ ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ವಸತಿ ಸಚಿವರಾದ ಜಮೀರ್‌ ಅಹಮ್ಮದ್ ಖಾನ್ ಅವರ ಕರಾಳ ಕೈ ಚಳಕದಿಂದ ಇಡೀ ರಾಜ್ಯದಲ್ಲಿ ಸರ್ಕಾರಿ ಜಾಗವನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ಇದರ ಜೊತೆಯಲ್ಲಿ ವಕ್ಫ್ ಹೆಸರಿನಲ್ಲಿ ಭೂಮಿ ಕಬಳಿಸುವ ಹುನ್ನಾರಕ್ಕೆ ಕಾಂಗ್ರೆಸ್ ಸರ್ಕಾರ ಹಾಗೂ ಜಮೀರ್ ಅಹಮ್ಮದ್ ನೇರ ಕಾರಣ. ರಾಜ್ಯಾದ್ಯಂತ ಈ ವಕ್ಫ್ ಆಸ್ತಿಗಳನ್ನು ಮಾಡುವ ಉದ್ದೇಶದಿಂದ ಬಡ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದು ಕೇವಲ ಕೆಲ ಉದಾಹರಣೆಗಳಷ್ಟೆ. ಇಷ್ಟೆಲ್ಲಾ ರಾಜ್ಯದಲ್ಲಿ ಸಾಮರಸ್ಯ ಹದಗೆಡುತ್ತಿರುವುದಕ್ಕೆ ಈ ಸರ್ಕಾರದ ಕೆಲ ಘಟನೆಗಳೆ ಸಾಕ್ಷಿಯಾಗಿದೆ. ಕೂಡಲೇ ಸರ್ಕಾರ ಇದನ್ನು ಕೊನೆಗಾಣಿಸದಿದ್ದರೆ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಕೌರಿ ಸಂಜು ಮಾತನಾಡಿ, ರಾಜ್ಯಾದ್ಯಂತ ನಡೆಯುತ್ತಿರುವ ವಕ್ಫ್ ಮಂಡಳಿಯ ಆಸ್ತಿ ವಿವಾದ ಇಂದು ನಮ್ಮ ತಾಲೂಕಿಗೂ ವ್ಯಾಪಿಸಿದ್ದು ಸರ್ಕಾರ ಶಾಲೆಗೆ ನೀಡಿದ ದಾನದ ಭೂಮಿ ಕಬಳಿಸುವ ಹುನ್ನಾರ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಸಂಪೂರ್ಣ ತನಿಖೆ ಆಗಬೇಕು ಎಂದರು. ಪ್ರತಿಭಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಜಮೀರ್ ಅಹಮದ್ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಶೋಭಾ ಗಣೇಶ್, ಮೋಹನ್, ಭರತ್, ಶ್ರೀನಿವಾಸ್, ಜಿ ಕೆ ಕುಮಾರ್, ಸಿ ಎಚ್ ಪ್ರಕಾಶ್ ಇದ್ದರು.

* ಹೇಳಿಕೆ: 1

ವಕ್ಫ್ ಹೆಸರಿನಲ್ಲಿ ಭೂಮಿ ಕಬಳಿಸುವ ಹುನ್ನಾರಕ್ಕೆ ಕಾಂಗ್ರೆಸ್ ಸರ್ಕಾರ ಹಾಗೂ ಜಮೀರ್ ಅಹಮ್ಮದ್ ನೇರ ಕಾರಣ. ರಾಜ್ಯಾದ್ಯಂತ ಈ ವಕ್ಫ್ ಆಸ್ತಿಗಳನ್ನು ಮಾಡುವ ಉದ್ದೇಶದಿಂದ ಬಡ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಇದನ್ನು ಕೊನೆಗಾಣಿಸದಿದ್ದರೆ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಲಾಗುವುದು.

- ಎಚ್‌ ಕೆ ಸುರೇಶ್‌, ಶಾಸಕ

* ಹೇಳಿಕೆ: 2

ವಕ್ಫ್ ಆಸ್ತಿ ಎಂದು ದಾಖಲಾಗಿರುವ ಎಲ್ಲಾ ಆಸ್ತಿಯನ್ನು ರದ್ದುಗೊಳಿಸಿ ಶಾಲಾ ಹಾಗೂ ರುದ್ರಭೂಮಿ ಜಾಗ ಎಂದು ನಮೂದಾಗಬೇಕು. ಇಲ್ಲದಿದ್ದರೆ ಈ ವಕ್ಫ್ ಆಸ್ತಿ ರದ್ದುಗೊಳ್ಳುವ ತನಕ ಪ್ರತಿಭಟನೆ ಮಾಡಲಾಗುವುದು.

- ಕೌರಿ ಸಂಜು, ಬಿಜೆಪಿ ಮಂಡಲದ ಅಧ್ಯಕ್ಷ