ಮಕ್ಕಳ ವೈಜ್ಞಾನಿಕ ಕೌತುಕ ತಣಿಸಲು ಸಿದ್ಧವಾಗಿದೆ ವಿಜ್ಞಾನ ಕೇಂದ್ರ

| Published : Feb 25 2024, 01:48 AM IST

ಸಾರಾಂಶ

ನೈಸರ್ಗಿಕವಾಗಿ ಸಂಭವಿಸುವ ವಿಪತ್ತುಗಳ ಬಗ್ಗೆ ಮಾಹಿತಿಗಳನ್ನು ಹಾಗೂ ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಐದು ಪ್ರಾಯೋಗಿಕ ಮಾದರಿಗಳನ್ನು ಅಳವಡಿಸಿದ್ದು, ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ

ಹಾವೇರಿ: ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ವಿಜ್ಞಾನ ಆಸಕ್ತರ ಬಹುದಿನಗಳ ಬೇಡಿಕೆಯಾಗಿದ್ದ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಾರ್ವಜನಿಕರ ವೀಕ್ಷಣೆಗೆ ಸಜ್ಜುಗೊಂಡಿದೆ. ಆಕರ್ಷಕ ರೀತಿಯಲ್ಲಿ ವಿನ್ಯಾಸಗೊಂಡಿರುವ ವಿಜ್ಞಾನ ಕೇಂದ್ರ ಹಲವು ವೈಶಿಷ್ಟ್ಯತೆಗಳೊಂದಿಗೆ ಬೆರಗುಗೊಳಿಸುತ್ತದೆ.

ಇಲ್ಲಿಯ ದೇವಗಿರಿ ಜಿಲ್ಲಾಡಳಿತ ಭವನದ ಎದುರಿನ ಗುಡ್ಡದ ಮೇಲೆ ಅಂದಾಜು ₹7 ಕೋಟಿ ವೆಚ್ಚದಲ್ಲಿ ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಲವು ವಿಷ್ಟತೆಗಳನ್ನು ಒಳಗೊಂಡಿದೆ. ನಿರ್ಮಿತಿ ಕೇಂದ್ರ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣ ಕೈಗೊಂಡಿದ್ದು, ಒಳ ಆವರಣದ ವೈಜ್ಞಾನಿಕ ಮಾದರಿಗಳನ್ನು ಬೆಂಗಳೂರಿನ ಧೀನಬಂಧು ಸಂಸ್ಥೆ, ಪುಣೆಯ ಟಯೋಮಾ ಬಿಫಾಲ್ ಯು ಸಂಸ್ಥೆ ಹಾಗೂ ತಾರಾಲಯ ವಿಭಾಗವನ್ನು ನೊಯ್ಡಾದ ಫುಲ್‌ಡಾನ್ ಫ್ರೋ ಸಂಸ್ಥೆ ನಿರ್ವಹಿಸುತ್ತಿದೆ.

ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ಆಸಕ್ತರಿಗೆ ವೈಜ್ಞಾನಿಕ ಜಗತ್ತಿನ ಆಸಕ್ತಿದಾಯಕ ನೂರಾರು ಭೌತವಿಜ್ಞಾನ, ಖಗೋಳ, ತಾರಾಲಯ, ಬಾಹ್ಯಾಕಾಶ, ಮೋಜಿನ ಗ್ಯಾಲರಿಗಳು ಅಚ್ಚರಿಯ ಸಂಗತಿಗಳ ಪ್ರದರ್ಶನ, ಮಾದರಿ ಕುತೂಹಲ ಮೂಡಿಸುತ್ತಿವೆ. ಒಂದೊಂದು ಮಾದರಿಯು ಒಂದೊಂದು ಕೌತುಕ ಕಥೆಗಳನ್ನು ಬಿಂಬಿಸುತ್ತಿವೆ. ಸುನಾಮಿ-ಪ್ರವಾಹ- ಭೂ ಕುಸಿತ- ಭೂ ಕಂಪನದಿಂದ ಆಕಾಶ ಕಾಯಗಳು ಒಳಗೊಂಡ ನೂರಾರು ಮಾದರಿಗಳು, ವೈಜ್ಞಾನಿಕ ಪ್ರಶ್ನೋತ್ತರಕ್ಕೆ ಗಣಕೀಕೃತ ಕೌಂಟರ್, ಭೂಮಿ ಮೇಲೆ ನಿಂತಾಗ ನಮ್ಮ ತೂಕದ ಸಾಂದ್ರತೆ ಜತೆಗೆ ಬೇರೆ ಬೇರೆ ಕಾಯಗಳಲ್ಲಿ ನಾವು ನಿಂತಾಗ ಎಷ್ಟು ಗ್ರಾಜ್ಯುವಿಟಿ ಎಂಬ ಮಾಹಿತಿಯ ಜತೆಗೆ ವಾಸ್ತಕ್ಕಿಂತ ಭಿನ್ನವಾಗಿ ಬೇರೆಯೇ ಜಗತ್ತಿಗೆ ನಮ್ಮನ್ನು ಕರೆದೊಯ್ಯುತ್ತವೆ. ಹೊರ ಆವರಣದಲ್ಲಿ ವಿವಿಧ ವಿಜ್ಞಾನ ಮಾದರಿಗಳು, ವಿಜ್ಞಾನಿಗಳ ಪ್ರತಿಕೃತಿಗಳು, ಸಭಾಂಗಣ ನಿರ್ಮಾಣ ಮಾಡಲಾಗಿದೆ.

ಮೋಜಿನ ವಿಜ್ಞಾನ ಗ್ಯಾಲರಿ: ಈ ಗ್ಯಾಲರಿ ಒಟ್ಟು ೪೦ ಒಳಾಂಗಣ ವಿಜ್ಞಾನ ಮಾದರಿಗಳನ್ನು ಹೊಂದಿದ್ದು, ಎಲ್ಲ ಮಾದರಿಗಳು ವಿಜ್ಞಾನ ಹಾಗೂ ಗಣಿತ ವಿಷಯದ ಪರಿಕಲ್ಪನೆ ಆಧಾರದ ಮೇಲೆ ಕಾರ್ಯ ನಿರ್ವಸುತ್ತದೆ. ಸಂವಾದಾತ್ಮಕ ಪ್ರದರ್ಶನಗಳನ್ನು ಒದಗಿಸುವ ಮೂಲಕ ಅಸಂಖ್ಯಾತ ಜನರ ಕುತೂಹಲ ಪ್ರಚೋದಿಸಲು ಮತ್ತು ಅವರ ಸೃಜನಶೀಲತೆ ಹೊರಹಾಕಲು ಸಹಾಯ ಮಾಡುತ್ತದೆ.

ವಿಪತ್ತು ನಿರ್ವಹಣೆ ಗ್ಯಾಲರಿ: ನೈಸರ್ಗಿಕವಾಗಿ ಸಂಭವಿಸುವ ವಿಪತ್ತುಗಳ ಬಗ್ಗೆ ಮಾಹಿತಿಗಳನ್ನು ಹಾಗೂ ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಐದು ಪ್ರಾಯೋಗಿಕ ಮಾದರಿಗಳನ್ನು ಅಳವಡಿಸಿದ್ದು, ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ.

ಬಾಹ್ಯಾಕಾಶದ ಗ್ಯಾಲರಿ:ಬಾಹ್ಯಾಕಾಶದ ಚರಿತ್ರೆ ಹಾಗೂ ಅನ್ವೇಷಣೆಗಳನ್ನು ಒಳಗೊಂಡ ನಾಲ್ಕು ಮಾದರಿಗಳನ್ನು ಏರ್ಪಡಿಸಲಾಗಿದೆ ಹಾಗೂ ರಾಕೆಟ್ ತಂತ್ರಜ್ಞಾನದ ಮಾದರಿಗಳು ಮಕ್ಕಳನ್ನು ವಿಜ್ಞಾನದ ಪ್ರಪಂಚಕ್ಕೆ ಕರೆದೊಯ್ಯಲು ಸಹಕಾರಿಯಾಗಿದೆ.

ತಾರಾಲಯ: ಕಣ್ಮನ ಸೆಳೆಯುವ ತಾರಾಲಯವು ಈ ವಿಜ್ಞಾನ ಕೇಂದ್ರದ ಅತ್ಯಾಕರ್ಷಣೆಯುಳ್ಳ ಗ್ಯಾಲರಿಯಾಗಿದೆ. ಇಲ್ಲಿ ಆಕಾಶದ ಬಗ್ಗೆ ಶೈಕ್ಷಣಿಕ ಮತ್ತು ಮನರಂಜನೆಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗುತ್ತದೆ. ಅಳತೆಯುಳ್ಳ ಗುಮ್ಮಟ ನಿರ್ಮಿಸಿದ್ದು, ಪರದೆಯ ಮೇಲೆ 3ಡಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಹೊರಾಂಗಣ ವಿಜ್ಞಾನದ ಗ್ಯಾಲರಿ: ಹಲವಾರು ವಿಜ್ಞಾನ ಹಾಗೂ ಗಣಿತ ಮಾದರಿಗಳಿದ್ದು, ಮಕ್ಕಳು ಪ್ರಾಯೋಗಿಕವಾಗಿ ಆಟದ ಮೂಲಕ ವಿಷಯ ಅರ್ಥೈಸಲು ಸಹಕಾರಿಯಾಗಿದೆ.

ವೈಜ್ಞಾನಿಕ ಲೋಕದ ಅಚ್ಚರಿಗಳನ್ನು ಮಕ್ಕಳಾದಿಯಾಗಿ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಲು ಜಿಲ್ಲಾಡಳಿತ ಭವನದ ಎದುರಿನ ದೇವಗಿರಿ ಗುಡ್ಡದಲ್ಲಿ ನಿರ್ಮಾಣ ಮಾಡಲಾದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಕ್ಕಳ ಹಾಗೂ ಪಾಲಕರ ವಿಜ್ಞಾನದ ತಿಳಿವಳಿಕೆಗೆ ಅತ್ಯಂತ ಅರ್ಥಪೂರ್ಣ ಕೊಡುಗೆ ಎನ್ನಬಹುದು.

ತಾರಾಲಯ ವೀಕ್ಷಣೆಗೆ ಚಾಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. 18ರಂದು ಲೋಕಾರ್ಪಣೆ ಮಾಡಿದ್ದ ವಿಜ್ಞಾನ ಕೇಂದ್ರಕ್ಕೆ ಹಾವೇರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಹಾಗೂ ಜಿಲ್ಲಾಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಭೇಟಿ ನೀಡಿ, ವಿಜ್ಞಾನ ಕೇಂದ್ರದ ಪ್ರಾಯೋಗಿಕ ಮಾದರಿಗಳನ್ನು ವೀಕ್ಷಣೆ ಮಾಡಿ ವಿಜ್ಞಾನ ಕೇಂದ್ರ ವೀಕ್ಷಣೆ ಹಾಗೂ ತಾರಾಲಯ ವಿಭಾಗ ವೀಕ್ಷಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಗಿರೀಶ್ ಪದಕಿ, ಎಸ್.ಎಸ್.ಅಡಿಗ, ಬಸನಗೌಡ ಪಾಟೀಲ್, ಮಂಜಪ್ಪ ಆರ್,ಸಿದ್ದರಾಮ ಅಜಗೊಂಡ್ರ ,ಲತಾ ಮಣಿ ಇತರರು ಇದ್ದರು.