ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕ ಮತ್ತು ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್ ಇವರ ಸಹಯೋಗದಲ್ಲಿ “ರಾಮನ್-ನೆಹರು ಸಪ್ತಾಹ”ದ ಅಂಗವಾಗಿ ವೈಜ್ಞಾನಿಕ ಭಾರತಕ್ಕಾಗಿ ವೈಜ್ಞಾನಿಕ ಮನೋವೃತ್ತಿ – ಏಕೆ? ಹೇಗೆ?” ಎಂಬ ವಿಷಯದಡಿ ಉಪನ್ಯಾಸ, ಸಂವಾದ, ಪ್ರಾತ್ಯಕ್ಷಿಕೆ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಬಿಜಿವಿಎಸ್ ತಾಲೂಕು ಅಧ್ಯಕ್ಷ ಎಚ್.ಆರ್. ಚಂದ್ರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತವು ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ರಾಷ್ಟ್ರವಾಗಲು ಪ್ರತಿ ನಾಗರಿಕನಲ್ಲೂ ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ. ವಿಜ್ಞಾನವು ಕೇವಲ ಪುಸ್ತಕಗಳಲ್ಲಿರುವ ವಿಷಯವಲ್ಲ, ಅದು ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯವಾಗುವ ಜ್ಞಾನ. ನಾವೆಲ್ಲರೂ ವಿಚಾರಿಸುವ, ಸಂಶೋಧಿಸುವ ಮತ್ತು ನೂತನ ಪರಿಹಾರಗಳನ್ನು ಹುಡುಕುವ ಮನೋಭಾವ ಹೊಂದಿದಾಗ ಮಾತ್ರ ನಿಜವಾದ ವೈಜ್ಞಾನಿಕ ಭಾರತ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಿಸಿದರು.ಇಂದಿನ ಯುವಜನರು ತಂತ್ರಜ್ಞಾನವನ್ನು ಕೇವಲ ಉಪಯೋಗಿಸುವುದಲ್ಲದೆ, ಅದರ ಮೂಲವನ್ನು ಅರ್ಥಮಾಡಿಕೊಳ್ಳುವ ಮತ್ತು ಹೊಸ ಪ್ರಯೋಗಗಳನ್ನು ಮಾಡುವ ದಿಕ್ಕಿನಲ್ಲಿ ಮುಂದೆ ಬರಬೇಕು. ವೈಜ್ಞಾನಿಕ ಮನೋವೃತ್ತಿ ಅಂದರೆ ಕೇವಲ ಯಂತ್ರ, ಸಾಧನಗಳ ಅರಿವಲ್ಲ. ಅದು ಪ್ರಶ್ನಿಸುವ ಧೈರ್ಯ, ತಪ್ಪುಗಳಿಂದ ಕಲಿಯುವ ಮನೋಭಾವ ಮತ್ತು ಹೊಸದನ್ನು ರಚಿಸುವ ಚಾತುರ್ಯ. ಸಂವಿಧಾನವು ಸಹ ನಮ್ಮೆಲ್ಲರಿಗೂ ವೈಜ್ಞಾನಿಕ ಮನೋವೃತ್ತಿ ಮತ್ತು ಮಾನವ ಹಿತಾಸಕ್ತಿಯನ್ನು ಬೆಳೆಸುವ ಕರ್ತವ್ಯವನ್ನೇ ನೀಡಿದೆ ಎಂದರು.ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ವೈಜ್ಞಾನಿಕ ಮನೋವೃತ್ತಿಯು ಸಮಾಜದ ಪ್ರಗತಿಯ ಮೂಲ. ಇಂದಿನ ಪೀಳಿಗೆಯವರು ಯಾವುದೇ ವಿಷಯವನ್ನು ಅಂಧನಂಬಿಕೆಯ ದೃಷ್ಟಿಯಿಂದ ನೋಡುವುದಕ್ಕಿಂತ ಕಾರಣ-ಕಾರ್ಯ ಸಂಬಂಧವನ್ನು ಅರಿತುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಮ್ಮ ಸಂವಿಧಾನದಲ್ಲಿಯೇ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಉಲ್ಲೇಖಿಸಲಾಗಿದೆ. ವಿಜ್ಞಾನವು ಕೇವಲ ಪ್ರಯೋಗಾಲಯದೊಳಗೆ ಸೀಮಿತವಾಗಿಲ್ಲ, ಅದು ನಮ್ಮ ನಿತ್ಯ ಜೀವನದಲ್ಲಿಯೇ ಅನ್ವಯಿಸಬಹುದಾದ ಪಾಠ ಎಂದು ಹೇಳಿದರು.ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಎಚ್.ಜಿ. ಶಿವಮರಿಯಪ್ಪ ವೈಜ್ಞಾನಿಕ ಮನೋವೃತ್ತಿಯ ಅಗತ್ಯತೆ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಸದಸ್ಯ ಜಮಾಲುದ್ದೀನ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್ , ವಾರ್ಡನ್ ಎಚ್.ಎಲ್. ನಾಗೇಶ್, ಸಾ.ಶಿ.ಇ, ಶಿವಪ್ಪ, ರಜನಿ ನಾಯರ್, ಬಿಜಿವಿಎಸ್ ಸದಸ್ಯರು, ರುದ್ರೇಶ್ ಮತ್ತು ಕುಮಾರಸ್ವಾಮಿ, ಶಿಕ್ಷಕರು ಸೇರಿದಂತೆ ಇತರರು ಇದ್ದರು.ಫೋಟೋ:
12ಎಚ್ಎಸ್ಎನ್3 : ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ರಾಮನ್-ನೆಹರೂ ಸಪ್ತಾಹದ ಅಂಗವಾಗಿ ನಡೆದ “ವೈಜ್ಞಾನಿಕ ಭಾರತಕ್ಕಾಗಿ ವೈಜ್ಞಾನಿಕ ಮನೋವೃತ್ತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))