ಪಾರಂಪರಿಕ ಆಚರಣೆಗಳ ವೈಜ್ಞಾನಿಕತೆ ಸಮಾಜಕ್ಕೆ ತಿಳಿಸಬೇಕಿದೆ.
ಧಾನ್ಯಲಕ್ಷ್ಮೀ ಪೂಜೆ, ಪೂರ್ವಸಿದ್ಧತಾ ಸಭೆ । ೨೯ರಂದು ವ್ಯಾಸಪೂಜೆಯ ಮೂಲಕ ಚಾತುರ್ಮಾಸ್ಯಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಗೋಕರ್ಣನಮ್ಮ ಪ್ರಾಚೀನ ಆಚರಣೆಗಳ ಹಿನ್ನೆಲೆ ತಿಳಿಯದೇ ಇರುವುದರಿಂದ ನಮ್ಮ ಆಚಾರಗಳು ಕಂದಾಚಾರ ಇರಬಹುದು ಎಂದು ಭಾವಿಸಿ ಅನೇಕರು ಅವುಗಳನ್ನು ಕೈಬಿಟ್ಟಿದ್ದಾರೆ. ನಮ್ಮ ಪಾರಂಪರಿಕ ಆಚರಣೆಗಳ ವೈಜ್ಞಾನಿಕತೆ ಹಾಗೂ ಹಿನ್ನೆಲೆಯನ್ನು ಸಮಾಜಕ್ಕೆ ತಿಳಿಸಬೇಕಾದ ಅಗತ್ಯತೆ ಇದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅಶೋಕೆಯ ಪರಿಸರದಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಬಂದವನನ್ನು ಭಗವಂತ ಎಂದು ಕಾಣಬೇಕು. ಮಠಕ್ಕೆ ಬಂದವನು ಶ್ರೀಮಂತನೋ ಅಥವಾ ಬಡವನೋ ಎಂದು ಬೇಧ-ಭಾವ ಮಾಡಬಾರದು. ಮಠಕ್ಕೆ ಬಂದವರೆಲ್ಲರೂ ಸಂತೃಪ್ತರಾಗಿ ಹಿಂತಿರುಗುವಂತೆ ಮಾಡಬೇಕಾದ ಕರ್ತವ್ಯ ಕಾರ್ಯಕರ್ತರದ್ದು ಎಂದರು. ಇಂದು ಆಹಾರ ಹಾಗೂ ಊಟದ ವ್ಯವಸ್ಥೆಯಲ್ಲಿ ಅನೇಕ ಲೋಪಗಳಿವೆ. ನಾವು ಏನನ್ನು ತಿನ್ನುತ್ತೇವೆ ಹಾಗೂ ಹೇಗೆ ತಿನ್ನುತ್ತೇವೆ ಎಂಬುದು ನಮ್ಮ ಮೇಲೆ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಈ ಹಿನ್ನೆಲೆ ನಮ್ಮ ಪ್ರಾಚೀನ ಆಚರಣೆಗಳನ್ನು ಪುನಃ ಆರಂಭಿಸಲೇ ಬೇಕಾದ ಅಗತ್ಯವಿದೆ. ಹಾಗಾಗಿ ಈ ಚಾತುರ್ಮಾಸ್ಯವನ್ನು ವಿಚಾರ ಪ್ರಧಾನ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದ್ದು; ಚಾತುರ್ಮಾಸ್ಯದಲ್ಲಿ ತತ್ತ್ವ ಸಂವಾದಗಳು ಇರಲಿವೆ ಎಂದರು. ಉತ್ತರ ಕನ್ನಡ - ಶಿವಮೊಗ್ಗ - ಮಂಗಳೂರು - ಬೆಂಗಳೂರು ಸೇರಿದಂತೆ ಎಲ್ಲಾ ಭಾಗಗಳಿಂದಲೂ ಚಾತುರ್ಮಾಸ್ಯಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಂಜುನಾಥ ಸುವರ್ಣಗದ್ದೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ ಸೇರಿದಂತೆ ಎಲ್ಲಾ ಭಾಗಗಳ ಪ್ರಮುಖರು ಉಪಸ್ಥಿತರಿದ್ದರು.ಅನ್ನಬ್ರಹ್ಮ ಚಾತುರ್ಮಾಸ್ಯ:
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ಈ ವರ್ಷದ ಚಾತುರ್ಮಾಸ್ಯ ನಡೆಯಲಿದ್ದು, ಜು.೨೯ರಿಂದ ಸೆ. ೨೬ವರೆಗೆ ಆಹಾರದ ಕುರಿತಾದ ಜಾಗೃತಿಯ ಅನ್ನಬ್ರಹ್ಮ ಚಾತುರ್ಮಾಸ್ಯ ನಡೆಯಲಿದೆ. ೨೯ರಂದು ವ್ಯಾಸಪೂಜೆಯನ್ನು ಮಾಡುವ ಮೂಲಕ ಶ್ರೀಗಳು ತಮ್ಮ ೩೩ನೇ ವರ್ಷದ ಚಾತುರ್ಮಾಸ್ಯದ ಸಂಕಲ್ಪ ಸ್ವೀಕರಿಸಲಿದ್ದಾರೆ.ಧಾನ್ಯ ಲಕ್ಷ್ಮೀ ಪೂಜೆ:
ಅನ್ನಬ್ರಹ್ಮ ಚಾತುರ್ಮಾಸ್ಯಕ್ಕಾಗಿ ನಾಡಿನಾದ್ಯಂತ ಶಿಷ್ಯ ಭಕ್ತರಿಂದ ವಿವಿಧ ಸುವಸ್ತುಗಳು ಸಮರ್ಪಿತವಾಗಿದ್ದು, ಶ್ರೀಮಠದ ೧೧ ಮಂಡಲಗಳು, ಅಂಗಸಂಸ್ಥೆಗಳು ಹಾಗೂ ರಾಜ್ಯಾದ್ಯಂತದ ಶಿಷ್ಯಭಕ್ತರಿಂದ ಸಮರ್ಪಿತವಾದ ಧಾನ್ಯಲಕ್ಷ್ಮಿಗೆ ಜು.೨೬ರಂದು ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೂಜೆ ಸಲ್ಲಿಸಿದರು. ಈ ಸಂದರ್ಭ ಕುಮಟಾದ ಶಾಸಕ ದಿನಕರ ಶೆಟ್ಟಿ ಮುಂತಾದವರಿದ್ದರು.ಚಾತುರ್ಮಾಸ್ಯದ ವಿಶೇಷಚಾತುರ್ಮಾಸ್ಯ ವ್ರತ ಗುರುಗಳಿಗಾದರೆ, ಶಿಷ್ಯಭಕ್ತರಿಗೆ ಇದು ಹಬ್ಬ ಎಂಬ ಪರಿಕಲ್ಪನೆಯಲ್ಲಿ ಪ್ರತಿವರ್ಷದ ಚಾತುರ್ಮಾಸ್ಯವನ್ನು ಸಮೂಹದ ಒಳಿತಿಗೆ ಪೂರಕವಾಗಿ ಯೋಜಿಸುತ್ತಾ ಬಂದಿದ್ದು, ಪ್ರತಿವರ್ಷ ಒಂದೊಂದು ವಿಷಯಾಧಾರಿತವಾಗಿ ಚಾತುರ್ಮಾಸ್ಯದಲ್ಲಿ ಸಮಾಜ ಜಾಗೃತಿ ಮೂಡಿಸುತ್ತಿರುವುದು ಶ್ರೀರಾಮಚಂದ್ರಾಪುರ ಮಠದಾಗಿದ್ದು, ಈ ಚಾತುರ್ಮಾಸ್ಯದ ಸಮಯದಲ್ಲಿ ಆಹಾರದ ಕುರಿತಾಗಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳು ಇರಲಿದ್ದು, ಪ್ರತಿದಿನ ಸ್ವತಃ ಶ್ರೀಗಳಿಂದ ಭೋಜನವೆಂಬ ತಪಸ್ಸು, ಆಹಾರ ಯಾವಾಗ ಸ್ವೀಕರಿಸಿದರೆ ಹಿತ? ಜಲಪಾನದ ನಿಯಮಗಳು, ಆಹಾರದ ಉದ್ದೇಶ, ಉಪವಾಸ, ಭೋಜನದ ಬಳಿಕ ಪಾಲಿಸಬೇಕಾದ ನಿಯಮಗಳು, ಭೋಜನ ಪಾತ್ರೆಗಳು ಸೇರಿದಂತೆ ಅನೇಕ ವಿಶಿಷ್ಟ ಪ್ರವಚನಗಳು ನಡೆಯಲಿವೆ. ಜ್ಞಾನೋದ್ದೀಪನದ ಜೊತೆಗೆ ಪ್ರಾಚೀನ ವಿಧಾನದ ಆಹಾರವೂ ಈ ಚಾತುರ್ಮಾಸ್ಯದಲ್ಲಿ ವಿಶೇಷತೆಯಾಗಿರಲಿದೆ.