ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ನಗರದಲ್ಲಿ ಪ್ರತಿ ಗುರುವಾರ ನಡೆಯುವ ನಾಟಿ ಕೋಳಿ ಸಂತೆ ಖ್ಯಾತಿ ಗಳಿಸುತ್ತಿದೆ. ಆದರೆ, ಕಳೆದ ಕೆಲವು ದಿನಗಳಿಂದ ಅಧಿಕ ಉಷ್ಣಾಂಶ, ಬಿಸಿಲ ತಾಪದ ಪರಿಣಾಮ ನಾಟಿ ಕೋಳಿ ಖರೀದಿಯಲ್ಲಿ ಗಣನೀಯ ಕುಸಿತ ಕಂಡಿದೆ. ಸಾವಿರಾರು ನಾಟಿ ಕೋಳಿ ವ್ಯಾಪಾರವಾಗುತ್ತಿದ್ದ ಸಂತೆಯಲ್ಲಿ ಈಗ ನೂರಾರು ಕೋಳಿ ಖರೀದಿಯೂ ಕಷ್ಟಕರವಾಗಿದೆ.

ನಗರದ ಹುಕ್ಕೇರಿಮಠ ಕಮಾನ್‌ ಪಕ್ಕದಿಂದ ಎಲ್‌ಬಿಎಸ್‌ ಮಾರುಕಟ್ಟೆಗೆ ಹೋಗುವ ರಸ್ತೆಯಲ್ಲಿ ಪ್ರತಿ ಗುರುವಾರ ನಾಟಿ ಕೋಳಿ ಸಂತೆ ನಡೆಯುತ್ತದೆ. ಸುತ್ತಮುತ್ತಲಿನ ಗ್ರಾಮಗಳಿಂದ, ನಗರಗಳಿಂದ ನಾಟಿ ಕೋಳಿ ಬೆಳೆದವರು ಇಲ್ಲಿಗೆ ತಂದು ಕೋಳಿ ಮಾರಾಟ ಮಾಡುತ್ತಾರೆ. ಕಳೆದ ಹಲವು ವರ್ಷಗಳಿಂದ ನಡೆಯುತ್ತ ಬಂದಿರುವ ಈ ಸಂತೆ ಇತ್ತೀಚೆಗೆ ನಾಟಿ ಕೋಳಿ ಪ್ರಿಯರನ್ನು ಆಕರ್ಷಿಸುತ್ತಿದೆ. ವಾರದಿಂದ ವಾರಕ್ಕೆ ವ್ಯಾಪಾರ ವಹಿವಾಟು ಹೆಚ್ಚುತ್ತಲೇ ಬಂದಿದೆ. ಆದರೆ, ಈ ಸಲದ ಬಿರು ಬೇಸಿಗೆಯ ತಾಪ ನಾಟಿ ಕೋಳಿ ಸಂತೆ ಮೇಲೆ ಬಿದ್ದಿದೆ. ಇದರಿಂದ ನಾಟಿ ಕೋಳಿ ಸಾಕಣೆದಾರರು ವ್ಯಾಪಾರವಿಲ್ಲದೇ ಮರಳುವಂತಾಗಿದೆ.

ಇಳಿಕೆಯಾದ ನಾಟಿ ಕೋಳಿ ಬೇಡಿಕೆ: ಪ್ರತಿ ಗುರುವಾರ ನಡೆಯುವ ತರಕಾರಿ ಸಂತೆ ಪಕ್ಕದಲ್ಲೇ ನಾಟಿ ಕೋಳಿ ಸಂತೆಯೂ ನಡೆಯುವುದರಿಂದ ಸುತ್ತಮುತ್ತನ ಹಳ್ಳಿಯವರು, ನಗರದ ಜನತೆ ಇಲ್ಲಿಗೆ ಬಂದು ಸಂತೆ ವ್ಯಾಪಾರ ಮಾಡಿ ಹೋಗುತ್ತಾರೆ. ಒಂದೊಂದು ನಾಟಿ ಕೋಳಿಗೆ ಗಾತ್ರದ ಆಧಾರದ ಮೇಲೆ ದರ ನಿಗದಿ ಮಾಡುತ್ತಾರೆ. ಸಾಮಾನ್ಯವಾಗಿ ಒಂದು ನಾಟಿ ಕೋಳಿ ₹500ರಿಂದ ₹800, ಒಂದು ಸಾವಿರ ರು. ವರೆಗೂ ಮಾರಾಟವಾಗುತ್ತದೆ. ಇದರೊಂದಿಗೆ ನಾಟಿ ಕೋಳಿ ಮೊಟ್ಟೆ, ಬಾತುಕೋಳಿ, ಗಿರಿರಾಜ ಕೋಳಿ, ಮೊಲ ಕೂಡ ಮಾರಾಟಕ್ಕೆ ಬರುತ್ತವೆ. ಬೆಳಗ್ಗೆ 6 ಗಂಟೆಗೆ ಆರಂಭವಾಗುವ ನಾಟಿ ಕೋಳಿ ಸಂತೆ ಮಧ್ಯಾಹ್ನದೊಳಗೆ ಮುಗಿಯುತ್ತದೆ. ಆದ್ದರಿಂದ ಬೆಳಗ್ಗೆಯೇ ಇಲ್ಲಿಗೆ ಬಂದು ಕೋಳಿ ಖರೀದಿ ಮಾಡುತ್ತಾರೆ. ಪ್ರತಿ ವಾರ ಸಾವಿರಾರು ಕೋಳಿವರೆಗೂ ಮಾರಾಟವಾಗುತ್ತಿತ್ತು. ಆದರೆ, ಕಳೆದ ಮಾರ್ಚ್‌ನಿಂದ ಏಪ್ರಿಲ್‌ ವರೆಗೆ ವಾರದಿಂದ ವಾರಕ್ಕೆ ವ್ಯಾಪಾರ ಕಡಿಮೆಯಾಗಿದೆ. ಬಿಸಿಲು ಇರುವುದರಿಂದ ಕೋಳಿ ಅಡುಗೆ ಮಾಡುವವರು ಕಡಿಮೆಯಾಗಿದ್ದರಿಂದ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಮಾರಾಟಕ್ಕೆ ತಂದ ಕೋಳಿಯನ್ನು ವಾಪಸ್‌ ಒಯ್ಯುತ್ತಿದ್ದೇನೆ ಎಂದು ದೇವಗಿರಿಯಿಂದ ಕೋಳಿ ತಂದಿದ್ದ ಅಬ್ದುಲ್‌ ರಜಾಕ್‌ ಹೇಳಿದರು.


ಹೆಚ್ಚಿದ ತಾಪ: ಜಿಲ್ಲೆಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ರಣಬಿಸಿಲ ತಾಪ ತೀವ್ರಗೊಂಡಿದೆ. ಫ್ಯಾನ್‌ ತಳದಲ್ಲೇ ಕೂತರೂ ಬೆವರು ಇಳಿಯುತ್ತಿದೆ. ಬೆಳಗ್ಗೆ 10 ಗಂಟೆಯಾಯಿತೆಂದರೆ ಹೊರಬೀಳುವುದೇ ಕಷ್ಟಕರವಾಗುತ್ತಿದೆ. ಮಧ್ಯಾಹ್ನದ ಹೊತ್ತಿನಲ್ಲಂತೂ ನೆತ್ತಿ ಸುಡುವ ಬಿಸಿಲು ಜನರನ್ನು ಕಂಗಾಲಾಗಿಸಿದೆ. ಸಂಜೆಯಾದರೆ ಬಿಸಿ ಗಾಳಿ ಬೀಸುತ್ತಿದೆ. ಇದರಿಂದ ಹಗಲು ರಾತ್ರಿಯೆನ್ನದೇ ಸೆಕೆಯಿಂದ ಜನರು ಕಂಗಾಲಾಗಿದ್ದಾರೆ. ಅಧಿಕ ಉಷ್ಣಾಂಶವಿರುವುದರಿಂದ ಬಹುತೇಕರು ಸಸ್ಯಾಹಾರ, ದೇಹಕ್ಕೆ ತಂಪಾದ ಆಹಾರವನ್ನೇ ಬಳಸುವವರ ಸಂಖ್ಯೆ ಹೆಚ್ಚಿದೆ. ಇದು ಕೋಳಿ ಸೇರಿದಂತೆ ಕುಕ್ಕುಟೋದ್ಯಮದ ಮೇಲೆಯೇ ಪರಿಣಾಮ ಬೀರಿದೆ.

ಹಾವೇರಿ ನಗರದಲ್ಲಿ ಪ್ರತಿ ಗುರುವಾರ ನಡೆಯುವ ನಾಟಿ ಕೋಳಿ ಸಂತೆಗೆ ದೂರದ ರಾಣಿಬೆನ್ನೂರು, ಶಿಗ್ಗಾಂವಿ ಕಡೆಯಿಂದಲೂ ಬಂದು ಖರೀದಿಸುತ್ತಾರೆ. ಆದರೆ, ಬೇಸಿಗೆ ಸೆಕೆ, ಭಾರಿ ಬಿಸಿಲು ಇರುವುದರಿಂದ ಕೋಳಿ ಖರೀದಿ ಪ್ರಮಾಣ ಅರ್ಧಕ್ಕಿಂತ ಹೆಚ್ಚು ಕುಸಿದಿದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ವ್ಯಾಪಾರ ಜೋರಾಗಿರುತ್ತದೆ. ಇದೇ ರೀತಿ ಬಿಸಿಲಿದ್ದರೆ ವ್ಯಾಪಾರ ಇನ್ನಷ್ಟು ಕುಸಿಯುವ ಆತಂಕವಿದೆ ಎಂದು ನಾಟಿ ಕೋಳಿ ವ್ಯಾಪಾರಿ ಬಸವರಾಜ ಹೊಂಗಲ ಹೇಳಿದರು.