ಕನ್ನಡಪ್ರಭ ವಾರ್ತೆ ಸಕಲೇಶಪುರ

ತ್ಯಾಜ್ಯವಿಲೇವಾರಿ ಘಟಕ ಆರಂಭದ ನಂತರ ಪಟ್ಟಣದಲ್ಲಿ ರಸ್ತೆಬದಿ ತ್ಯಾಜ್ಯದ ಹಾವಳಿ ಹೆಚ್ಚಾಗಿದೆ.

ತಾಲೂಕಿನ ಮಳಲಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ೨೦೦೮ರಲ್ಲಿ ಆರಂಭವಾಗಿತ್ತಾದರು ತ್ಯಾಜ್ಯವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಗ್ರಾಮಸ್ಥರು ನ್ಯಾಯಾಲಯದ ಮೊರೆಹೋದ ಪರಿಣಾಮ ಕೆಲವು ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ, ೨೦೧೬ರಲ್ಲಿ ಅದೇ ಪ್ರದೇಶದಲ್ಲಿ ಕಾಮಗಾರಿ ನಡೆಸುವಂತೆ ನ್ಯಾಯಾಲಯ ಪುರಸಭೆಗೆ ನಿರ್ದೇಶನ ನೀಡಿತ್ತು. ೨೦೧೯ರಲ್ಲಿ ವಿವಿಧ ಅನುದಾನ ಸೇರಿಸಿ ₹೨.೫ ಕೋಟಿ ಅನುದಾನದಲ್ಲಿ ಕಾಮಗಾರಿ ಮರು ಆರಂಭಕ್ಕೆ ಪುರಸಭೆ ಸಿದ್ದತೆ ನಡೆಸಿತ್ತು. ಟೆಂಡರ್‌ ಸಹ ಅಂತಿಮಗೊಂಡು ಕಾಮಗಾರಿ ಆರಂಭಿಸಬೇಕು ಎನ್ನುವ ಹಂತದಲ್ಲಿ ಅಂದಿನ ಶಾಸಕರು ಕಾಮಗಾರಿ ನಡೆಸದಿರುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ರಾಜಕೀಯ ಸ್ಥಿತ್ಯಂತರದ ನಂತರ ಶಾಸಕರಾಗಿ ಆಯ್ಕೆಯಾಗಿ ಬಂದ ಸಿಮೆಂಟ್ ಮಂಜು ಮತ್ತೆ ಟೆಂಡರ್ ಕರೆಯುವ ಮೂಲಕ ಕಾಮಗಾರಿ ಆರಂಭಿಸಿದ್ದಲ್ಲದೆ ಕಾಮಗಾರಿಗೆ ಗ್ರಾಮಸ್ಥರು ವಿರೋಧ ವಕ್ತವಾಗದಂತೆ ತಿಂಗಳು ಕಾಲ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ವೇಗವಾಗಿ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿ ಮುಕ್ತಾಯಕ್ಕೊ ಮುನ್ನ ಶಾಸಕರ ಅನುಪಸ್ಥಿತಿಯಲ್ಲಿ ಪುರಸಭೆ ಸದಸ್ಯರು ಕಾಮಗಾರಿ ಉದ್ಘಾಟಿಸಿದರು. ಕಾಮಗಾರಿ ಪೂರ್ಣಗೊಂಡ ನಂತರ ಶಾಸಕರು ಮತ್ತೊಮ್ಮೆ ಕಾಮಗಾರಿ ಉದ್ಘಾಟಿಸಿ ತ್ಯಾಜ್ಯವಿಲೇವಾರಿಗೆ ಅವಕಾಶ ನೀಡಿದ್ದರು. ತ್ಯಾಜ್ಯವಿಲೇವಾರಿ ಘಟಕ ಉದ್ಘಾಟನೆ ನಂತರ ಪಟ್ಟಣದಲ್ಲಿ ಹಸಿಕಸ ಹಾಗೂ ಒಣಕಸ ವಿಂಗಡಿಸುವ ಪ್ರಕ್ರೀಯೆಗೆ ಚಾಲನೆ ನೀಡಿದ ಪುರಸಭೆ ಅಧಿಕಾರಿಗಳು ಇದಕ್ಕಾಗಿ ನಿತ್ಯ ಆಟೋಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ, ಪುರಸಭೆಯ ನೈರ್ಮಲ್ಯದ ಪ್ರಯತ್ನಕ್ಕೆ ಸಾರ್ವಜನಿಕರು ಜಿದ್ದಿಗೆ ಬಿದ್ದವರಂತೆ ಅನೈರ್ಮಲ್ಯ ಹರಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.ಎಲ್ಲೆಲ್ಲೂ ತ್ಯಾಜ್ಯ

ಪಟ್ಟಣದಲ್ಲಿ ನಿತ್ಯ ಆಟೋಗಳಲ್ಲಿ ತ್ಯಾಜ್ಯ ಸಂಗ್ರಹ ಮಾಡುತ್ತಿರುವುದಲ್ಲದೆ ಹಸಿ ಹಾಗೂ ಒಣಕಸ ವಿಂಗಡಿಸಿ ಆಟೋಗಳಿಗೆ ನೀಡುವಂತೆ ವಿನಂತಿ ಮಾಡಲಾಗುತ್ತಿದೆ. ಆದರೂ ಪಟ್ಟಣದ ಹಲವೆಡೆ ರಸ್ತೆಬದಿ ಕಸ ಎಸೆಯುವವರ ಸಂಖ್ಯೆ ನಿತ್ಯ ಏರಿಕೆಯಾಗುತ್ತಿದ್ದು ರಸ್ತೆ ಬದಿ ಎಸೆದ ಕಸವನ್ನು ಬೀದಿನಾಯಿಗಳು ರಸ್ತೆಗೆ ಎಳೆದು ತಂದು ಹಾಕುತ್ತಿರುವುದರಿಂದ ಅನೈರ್ಮಲ್ಯ ತಾಂಡವವಾಡುತ್ತಿರುವುದರಿಂದ ಜನರು ಸಂಚರಿಸುವುದು ದುಸ್ತರವಾಗಿದೆ.ಉತ್ತರಭಾರತೀಯರಿಂದ ಅನೈರ್ಮಲ್ಯ:

ಪಟ್ಟಣದಲ್ಲಿ ಮನೆಮನೆ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದ್ದರು ಪಟ್ಟಣದಲ್ಲಿ ಹೆಚ್ಚುವಾಸವಾಗಿರುವ ಉತ್ತರ ಭಾರತೀಯರು ತ್ಯಾಜ್ಯ ನಿಯಮ ಪಾಲಿಸುತ್ತಿಲ್ಲ ಎಂಬುದು ಬಹಿರಂಗ ಸತ್ಯವಾಗಿದೆ. ರೈಲ್ವೆ ಇಲಾಖೆ ಹಾಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸಾಕಷ್ಟು ಉತ್ತರ ಭಾರತದ ಕುಟುಂಬಗಳು ಪಟ್ಟಣದಲ್ಲಿ ನೆಲೆಸಿದ್ದು ಸಮಯವಲ್ಲದ ಸಮಯದಲ್ಲಿ ಇವರು ಕೆಲಸಕ್ಕೆ ತೆರಳುವುದರಿಂದ ತ್ಯಾಜ್ಯ ಸಂಗ್ರಹಿಸುವ ಆಟೋಗಳು ಆಗಮಿಸುವ ವೇಳೆ ಇವರು ಮನೆಯಲ್ಲಿ ಇರುವುದಿಲ್ಲ. ಇದ್ದರೂ ತ್ಯಾಜ್ಯವಿಗಂಡಿಸಿ ಆಟೋಗಳಿಗೆ ನೀಡುವ ಪರಿಪಾಠ ಇವರಲ್ಲಿ ನೆಲೆಸಿಲ್ಲ. ಇದರಿಂದಾಗಿ ಈ ಜನರಲ್ಲಿ ತಮ್ಮ ಮನೆಯ ತ್ಯಾಜ್ಯವನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿ ರಸ್ತೆಬದಿಗೆ ಎಸೆಯುವಂತಹ ಪ್ರವೃತ್ತಿ ಇವರಲ್ಲಿ ನೆಲಸಿರುವುದರಿಂದ ಪುರಸಭೆ ಅಧಿಕಾರಿಗಳ ನೈರ್ಮಲ್ಯ ಪಟ್ಟಣ ಮಾಡುವ ಗುರಿಗೆ ಇವರು ದೊಡ್ಡ ತೊಡಕಾಗಿ ಪರಿಣಮಿಸಿದ್ದಾರೆ. ಜಾಗೃತಿಗೆ ಇಲ್ಲ ಬೆಲೆ:


ಆಟೋಗಳ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಜನರು ಇದರಿಂದ ಯಾವುದೇ ಪಾಠವನ್ನು ಕಲಿತವರಂತೆ ಗೋಚರಿಸುತ್ತಿಲ್ಲ. ಕದ್ದುಮುಚ್ಚಿ ತಂದು ರಸ್ತೆಗೆ ತ್ಯಾಜ್ಯ ಎಸೆಯುವ ಪ್ರದೇಶವನ್ನು ಪುರಸಭೆ ಸಿಬ್ಬಂದಿ ಸಿಂಗರಿಸಿ ಪ್ಲಾಸ್ಟಿಕ್ ಬಾಟಲ್‌ಗಳಿಗೆ ಬಣ್ಣ ಹಚ್ಚಿ ಪ್ರದೇಶವನ್ನು ಶುಚಿಯಾಗಿಟ್ಟರೂ ಶುಚಿ ಮಾಡಿದ ಪ್ರದೇಶ ಒಂದೇರಡು ದಿನಗಳಲ್ಲಿ ತ್ಯಾಜ್ಯದ ರಾಶಿಯಿಂದ ರಾರಾಜಿಸುತ್ತಿದೆ.ಕಸಕ್ಕೆ ಬೆಂಕಿ:

ಪಟ್ಟಣದ ಕೈಗಾರಿಕಾ ಪ್ರದೇಶ ಸೇರಿದಂತೆ ಪಟ್ಟಣದ ಹಲವೇಡೆ ರಸ್ತೆಬದಿ ಹಾಕುವ ತ್ಯಾಜ್ಯವನ್ನು ಎತ್ತಲು ಪುರಸಭೆ ಅದಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ವಾರಗಳ ಕಾಲ ಕೊಳೆಯುವ ತ್ಯಾಜ್ಯವನ್ನು ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ತ್ಯಾಜ್ಯವನ್ನು ಒಂದೇಡೆ ರಾಶಿ ಮಾಡಿ ಬೆಂಕಿ ಹಾಕುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ವಾರಗಳ ಕಾಲ ಉರಿಯುವ ಬೆಂಕಿ ಹಾಗು ಹೊಗೆಯಿಂದ ಜನರು ಮೂಗು ಹಿಡಿದು ಸಂಚರಿಸುವಂತಾಗಿದೆ.ವರ್ಷಗಳಿಂದ ಉರಿಯುತ್ತಿದೆ ಬೆಂಕಿ:

ತ್ಯಾಜ್ಯ ವಿಲೇವಾರಿ ಘಟಕ ಆರಂಭವಾದ ನಂತರ ಪಟ್ಟಣದ ಸುಭಾಷ್ ಮೈದಾನ ಸಮೀಪದ ಹಳೇ ಸಂತೆ ಮೈದಾನದಲ್ಲಿ ತ್ಯಾಜ್ಯ ವಿಲೇವಾರಿ ನಿಲುಗಡೆಯಾಗಿದೆ. ಕಳೆದ ಎರಡು ವರ್ಷಗಳ ಸಂತೆ ಮೈದಾನದಲ್ಲಿ ಹಾಕಲಾಗಿದ್ದ ತ್ಯಾಜ್ಯ ಬೆಟ್ಟದಂತಾಗಿದೆ. ಈ ಬೆಟ್ಟದಂತ ತ್ಯಾಜ್ಯ ವಿಲೇವಾರಿಗೆ ಖಾಸಗಿ ಕಂಪನಿ ಟೆಂಡರ್‌ ಸಹ ಪಡೆದಿದೆ. ಆದರೆ ಈ ಮದ್ಯೆ ಕಿಡಿಗೇಡಿಗಳು ತ್ಯಾಜ್ಯದ ಬೆಟ್ಟಕ್ಕೆ ಬೆಂಕಿ ಹಾಕಿದ್ದು ಬೆಂಕಿ ಕೆಲದಿನಗಳ ಕಾಲ ಧಗಧಗಿಸುತ್ತಿತ್ತು. ಬೆಂಕಿ ನಂದಿಸಲು ಪುರಸಭೆ ಹಲವು ಪ್ರಯತ್ನ ನಡೆಸಿತ್ತಾದರೂ ಇಂದಿಗೂ ಬೆಂಕಿ ಹೊಗೆಯಾಡುತ್ತಿದೆ. ಇದರಿಂದಾಗಿ ಸಂತೆ ಮೈದಾನದಲ್ಲಿದ್ದ ಹತ್ತಕ್ಕೂ ಅಧಿಕ ಮರಗಳು ಬೆಂಕಿ ಶಾಖಕ್ಕೆ ಸಿಲುಕಿ ಒಣಗಿ ಹೋಗಿವೆ.

----- *ಹೇಳಿಕೆ1

ರಸ್ತೆ ಬದಿ ತ್ಯಾಜ್ಯ ಹಾಕದಂತೆ ಬಹಳಷ್ಟು ಜಾಗೃತಿ ಮೂಡಿಸಲಾಗುತಿದ್ದರು. ಜನರಲ್ಲಿ ಜಾಗೃತಿ ಮೂಡದಾಗಿದೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ರಸ್ತೆಗೆ ಎಸೆಯುವವರಿಗೆ ಭಾರಿ ಮೊತ್ತದ ದಂಡ ವಿಧಿಸುವ ಬಗ್ಗೆ ಚಿಂತಿಸಲಾಗುತ್ತಿದೆ.

ಮಹೇಶ್ವರಪ್ಪ, ಮುಖ್ಯಾಧಿಕಾರಿ ಪುರಸಭೆ,ಸಕಲೇಶಪುರ (17ಎಚ್ಎಸ್ಎನ್6ಎ)*ಹೇಳಿಕೆ2

ಉತ್ತರ ಭಾರತದ ಜನರಲ್ಲಿ ನೈರ್ಮಲ್ಯದ ಕಲ್ಪನೆ ಇಲ್ಲದಾಗಿದ್ದು ಎಲ್ಲೆಂದರಲ್ಲಿ ತ್ಯಾಜ್ಯ ಹಾಕುತ್ತಿರುವುದರಿಂದ ಜನರು ತ್ಯಾಜ್ಯದ ರಾಶಿಯ ಮದ್ಯೆ ಸಂಚರಿಸ ಬೇಕಿದೆ.

ಯೋಗೇಶ್, ಚಾಮುಂಡೇಶ್ವರಿ ಬಡಾವಣೆ ನಿವಾಸಿ (17ಎಚ್ಎನ್‌6ಬಿ: