ಸಾರಾಂಶ
ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾದ ಮೂವರ ಶವ ಶೋಧಕ್ಕೆ ಡ್ರೆಜಿಂಗ್ ಯಂತ್ರ ಗೋವಾದಿಂದ ಆಗಮಿಸಿದ್ದು, ಶೀಘ್ರದಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ.ಗಂಗಾವಳಿ ನದಿಯಲ್ಲಿ ನೀರಿನ ಹರಿವಿನ ವೇಗ ಎಷ್ಟಿದೆ ಎಂದು ನೌಕಾಪಡೆ ತಜ್ಞರು ಗುರುವಾರ ಪರಿಶೀಲಿಸಲಿದ್ದಾರೆ. ಡ್ರೆಜಿಂಗ್‌ಗೆ ಅನುಕೂಲಕರವಾಗಿದ್ದಲ್ಲಿ ಶುಕ್ರವಾರ ಶೋಧ ಕಾರ್ಯ ಶುರುವಾಗಲಿದೆ.ಜು. 16ರಂದು ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತ ದುರಂತವಾಗಿ 11 ಜನರು ಕಣ್ಮರೆಯಾಗಿದ್ದರು. ಅವರಲ್ಲಿ 8 ಜನರ ಮೃತದೇಹ ಪತ್ತೆಯಾಗಿತ್ತು. ಇನ್ನೂ ಮೂವರ ಶವ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಭಾರಿ ಮಳೆ ಹಾಗೂ ಗಂಗಾವಳಿ ನದಿಯಲ್ಲಿ ನೀರಿನ ಹರಿವು ವೇಗವಾಗಿದ್ದರಿಂದ ಜು. 28ರಂದು ಶೋಧ ಕಾರ್ಯಾಚರಣೆ ಸ್ಥಗಿತವಾಗಿತ್ತು. ಗುಡ್ಡದಿಂದ ಜಾರಿದ ಮಣ್ಣು ಗಂಗಾವಳಿ ನದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದು, ಆ ಮಣ್ಣಿನಡಿಯಲ್ಲಿ ಶಿರೂರಿನ ಜಗನ್ನಾಥ, ಗಂಗೆಕೊಳ್ಳದ ಲೋಕೇಶ ನಾಯ್ಕ ಹಾಗೂ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್ ಶವ ಇರಬಹುದೆಂದು ಅಲ್ಲಿನ ಮಣ್ಣುಗಳನ್ನು ಡ್ರೆಜಿಂಗ್ ಯಂತ್ರದ ಮೂಲಕ ತೆರವುಗೊಳಿಸಲು ಉದ್ದೇಶಿಸಲಾಗಿದೆ. ನೌಕಾನೆಲೆ ಸಿಬ್ಬಂದಿಯಿಂದ ಮೀನುಗಾರರ ಮೇಲೆ ದೌರ್ಜನ್ಯ: ಆರೋಪ
ಕಾರವಾರ: ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ನಲ್ಲಿದ್ದ ಬಲೆಗಳನ್ನು ಕತ್ತರಿಸಿ ನೌಕಾನೆಲೆ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ.ತಾಲೂಕಿನ ಅರಗಾ ಬಳಿ ಅರಬ್ಬೀ ಸಮುದ್ರದಲ್ಲಿ ದಾಮೋದರ ತಾಂಡೇಲ ಅವರಿಗೆ ಸೇರಿದ ವೀರ ಗಣಪತಿ ಹೆಸರಿನ ಬೋಟು ಮುದಗಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ನೌಕಾನೆಲೆ ಬಳಿ ಮೀನುಗಾರಿಕೆ ನಡೆಸಿದ್ದಕ್ಕೆ ನೌಕಾನೆಲೆ ಸಿಬ್ಬಂದಿ ಬಲೆ ಕತ್ತರಿಸಿ ಲಕ್ಷಾಂತರ ರು. ಹಾನಿ ಮಾಡಿರುವುದಾಗಿ ಮೀನುಗಾರರು ನೌಕಾನೆಲೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಗಾಗ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಮೀನುಗಾರರ ಸಮಸ್ಯೆಯನ್ನು ಯಾರೂ ಪರಿಹರಿಸುತ್ತಿಲ್ಲ ಎಂದು ಮೀನುಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.