ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೇರಳ ಗುಡ್ಡ ಕುಸಿತ ಪ್ರಕರಣದಲ್ಲಿ ಸಿಲುಕಿರುವ ಕನ್ನಡಿಗರ ಗುರುತು ಪತ್ತೆ ಮತ್ತು ರಕ್ಷಣಾ ಕಾರ್ಯವನ್ನು ತೀವ್ರವಾಗಿ ನಡೆಸಲಾಗುತ್ತಿದ್ದು ಆಸ್ಪತ್ರೆ ಮತ್ತು ಕಾಳಜಿ ಕೇಂದ್ರಗಳಿಗೆ ತಹಸೀಲ್ದಾರ್‌ಗಳ ತಂಡ ಭೇಟಿ ನೀಡುತ್ತಿದ್ದಾರೆ.ಚಾಮರಾಜನಗರ ತಹಸೀಲ್ದಾರ್ ಗಿರಿಜಮ್ಮ ಮತ್ತು ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ತಂಡಗಳು ಪ್ರತ್ಯೇಕವಾಗಿ ವೈತ್ರಿ ತಾಲೂಕು ಕೇಂದ್ರ ಮತ್ತು ಇತರೆ ಕಡೆ ತೆರೆದಿರುವ ಕಾಳಜಿ ಕೇಂದ್ರಗಳು, ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಚಾಮರಾಜನಗರ ಸೇರಿದಂತೆ ಕರ್ನಾಟಕದವರ ಗುರುತು ಪತ್ತೆ ಹಾಗೂ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರ ವಿಚಾರಣೆ ನಡೆಸುತ್ತಿದ್ದು ಬತ್ತೇರಿಯಲ್ಲಿ ಎರಡು ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಎಲ್ಲರನ್ನೂ ಒಟ್ಟು ಮಾಡಿ ಕರೆತರಲು ನಿರಂತರ ಮಳೆ ಅಡ್ಡಿಯಾಗಿದೆ.
ಭೂ ಕುಸಿತದಲ್ಲಿ ನಾಪತ್ತೆಯಾಗಿದ್ದ ರಾಜನ್ ಮತ್ತು ರಜಿನಿ ಮೃತಪಟ್ಟಿರುವ ಸಾಧ್ಯತೆ ಹೆಚ್ಚಿದ್ದು ಇವರ ಶವ ಪತ್ತೆಯಾಗಬೇಕಿದೆ. ಹಸುವಿನ ಚೀರಾಟದಿಂದ ಎಚ್ಚರಗೊಂಡು ಪಾರಾದ ಚಾಮರಾಜನಗರದ ವಿನೋದ್, ಗೌರಮ್ಮ ಕುಟುಂಬವು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ಇವರನ್ನು ತಹಸೀಲ್ದಾರ್‌ಗಳ ತಂಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ. ಮಹೇಶ್, ರತ್ನಮ್ಮ ಎಂಬವರು ಕೂಡ ಪಾರಾಗಿದ್ದು ಇವರನ್ನು ಅಧಿಕಾರಿಗಳ ತಂಡ ಭೇಟಿ ಮಾಡಿದೆ.ಕೇರಳ ಭೂ ಕುಸಿತದಲ್ಲಿ ಚಾಮರಾಜನಗರದ 4, ಮಂಡ್ಯದ ಮೂವರು ಸಾವು
ಕೇರಳದಲ್ಲಿ ಉಂಟಾಗಿರುವ ಭೂ ಕುಸಿತದಲ್ಲಿ ಒಟ್ಟು 7 ಮಂದಿ ಕನ್ನಡಿಗರು ಅಸುನೀಗಿದ್ದು ಐವರ ಶವ ಪತ್ತೆಯಾಗಿದೆ. ಚಾಮರಾಜನಗರದ ಮೂಲದ ನಾಲ್ವರು, ಮಂಡ್ಯ ಜಿಲ್ಲೆಯ ಮೂವರು ಸಾವನ್ನಪ್ಪಿರುವುದಾಗಿ ಗುಂಡ್ಲುಪೇಟೆ ತಹಸಿಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.
ಮಂಗಳವಾರಂದು ಚಾಮರಾಜನಗರದ ಪುಟ್ಟಸಿದ್ದಿ, ರಾಣಿ ಎಂಬವರ ಶವ ಪತ್ತೆಯಾಗಿತ್ತು ಬುಧವಾರ ಮಂಡ್ಯ ಮೂಲದ ಮೂವರ ಶವ ಪತ್ತೆಯಾಗಿದೆ.ನಾಪತ್ತೆಯಾಗಿದ್ದ ಮಳವಳ್ಳಿ ಮೂಲದ 9 ಮಂದಿಯಲ್ಲಿ ಸಾವಿತ್ರಿ ಎಂಬವರ ಮೊಮ್ಮಗ, ಸಬಿತಾ ಮಗ ಅಚ್ಚು ಹಾಗೂ ಶ್ರೀಕುಟ್ಟಿ ಎಂಬವರು ಮೃತಪಟ್ಟಿದ್ದು ವೈತ್ರಿ ಆಸ್ಪತ್ರೆಯಲ್ಲಿ ಇವರ ಶವ ಪತ್ತೆಯಾಗಿದೆ. ಇನ್ನು, ಚಾಮರಾಜನಗರ ತಾಲೂಕಿನ ಇರಸವಾಡಿ ಮೂಲದ ರಾಜನ್ ಮತ್ತು ರಜಿನಿ ದಂಪತಿ ಮೃತಪಟ್ಟಿದ್ದು ಶವ ಪತ್ತೆಯಾಗಬೇಕಿದೆ. ಒಟ್ಟಾರೆಯಾಗಿ 7 ಮಂದಿ ಕನ್ನಡಿಗರು ಕೇರಳ ಭೂ ಕುಸಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.