ಸಾರಾಂಶ
ಕನ್ನಡಪ್ರಭ ವಾರ್ತೆ ಕುಕನೂರು
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ್ ಯಲಬುರ್ಗಾ ಕ್ಷೇತ್ರದಲ್ಲಿ ಬದ್ಧ ರಾಜಕೀಯ ಎದುರಾಳಿಗಳು. ಆದರೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಜರುಗಿದ ಸಹಕಾರ ಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ್ ಅವರು ಇವರ ಸ್ನೇಹದ ಗುಟ್ಟು ರಟ್ಟುಮಾಡಿದರು.1999ರಲ್ಲಿ ನಾನು ಸಚಿವನಾದ ಕೂಡಲೇ ನನ್ನ ಮುಂದೆ ಆರ್‌ಡಿಸಿಸಿ ಬ್ಯಾಂಕ್ ಮುಚ್ಚುವ ಫೈಲ್‌ಗೆ ಸಹಿ ಹಾಕುವ ಸಂದರ್ಭ ಬಂತು. ಇದೇ ನನ್ನ ಮೊದಲ ಫೈಲ್ ಆಗಿತ್ತು. ಆಗ ನಾನು ಬ್ಯಾಂಕ್ ಮುಚ್ಚಬಾರದು ಎಂದು ರಾಯರಡ್ಡಿ ಅವರನ್ನು ಕರೆಯಿಸಿಕೊಂಡೆ. ಬ್ಯಾಂಕ್ ಮುಚ್ಚಬಾರದು ಎಂದು ಆಗಿನ ಆರ್ಥಿಕ ಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕೋರಿಕೆ ಮಾಡಿಕೊಂಡೆವು. ನಾವು ಎಲ್ಲರೂ ಸೇರಿಕೊಂಡು ಒಂದು ಕೋಟಿ ರು. ಬಾಕಿ ಇದ್ದ ಸಾಲವನ್ನು ಬ್ಯಾಂಕಿನ ಷೇರು ಹಣವನ್ನಾಗಿ ವರ್ಗಾವಣೆ ಮಾಡಿದೆವು. ಇದೇ ವೇಳೆ ಬ್ಯಾಂಕಿಗೆ ಅಧ್ಯಕ್ಷರನ್ನಾಗಿ ಮಾಡಲು ರಾಯರಡ್ಡಿ ಹಾಲಪ್ಪ ಆಚಾರ್ ಅವರ ಹೆಸರು ಪ್ರಸ್ತಾಪಿಸಿದರು. ಹಲವರ ಬೆಂಬಲದಿಂದ ಹಾಲಪ್ಪ ಆಚಾರ್ ಅಧ್ಯಕ್ಷರಾದರು. ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕಿನ ಅಭಿವೃದ್ಧಿ ಮಾಡಿದರು ಎಂದರು.
ಬಳಿಕ ಮಾತನಾಡಿದ ರಾಯರಡ್ಡಿ, ಸಹಕಾರಿ ರಂಗದಲ್ಲಿ ನನಗೆ ಆಸಕ್ತಿ ಇರಲಿಲ್ಲ. ಆದರೆ ರಂಗಕ್ಕೆ ಪ್ರೋತ್ಸಾಹ ನೀಡಿದ್ದೇನೆ. ಆರ್‌ಡಿಸಿಸಿ ಬ್ಯಾಂಕ್ ಉಳಿಸಲು, ಹಾಲಪ್ಪ ಅವರನ್ನು ಬ್ಯಾಂಕಿಗೆ ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನಿಸಿದ್ದೇನೆ. ಅವರು ಸಹ ಬ್ಯಾಂಕಿನ ಸುಧಾರಣೆ ಮಾಡಿದರು. ಆ ಹಳೆಯ ಕಾರ್ಯಗಳನ್ನು ಎಸ್.ಎಸ್. ಪಾಟೀಲ ಅವರು ನೆನಪಿಸಿದರು. ಅಲ್ಲದೆ ಸಹಕಾರಿ ರಂಗದಲ್ಲಿ ಬೆಂಬಲವಾಗಿ ನಿಂತಿದ್ದ ಎಸ್.ಎಸ್. ಪಾಟೀಲ ಅವರನ್ನು ಸಮಾವೇಶಕ್ಕೆ ಕರೆದು ಸನ್ಮಾನಿಸಲಾಗಿದೆ ಎಂದರು.ನನ್ನನ್ನು ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಡಲು ರಾಯರಡ್ಡಿ ಅವರ ಶ್ರಮ ಶೂನ್ಯ. ಎಷ್ಟೋ ಸಲ ಅವರಿಂದ ನನಗೆ ಹಿನ್ನಡೆ ಸಹ ಆಗಿದೆ. ಭಾಷಣದಲ್ಲಿ ನನ್ನಿಂದ ಎಂದು ಮಾತನಾಡಿರುವುದು ಎಷ್ಟು ಸರಿ? ಸಮಯ ಬಂದಾಗ ಉತ್ತರ ನೀಡುತ್ತೇನೆ. ಸಹಕಾರ ರಂಗದಲ್ಲಿ ಪ್ರಾಮಾಣಿಕ ಸೇವೆ, ಕರ್ತವ್ಯನಿಷ್ಠೆ ಫಲವಾಗಿ ಇಂದು ಆರ್‌ಡಿಸಿಸಿ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ತಿಳಿಸಿದ್ದಾರೆ.