ಬೀಜ, ಗೊಬ್ಬರ ಕಂಪನಿಗೆ ಪಂಗನಾಮವಿಟ್ಟ ಪರಾರಿ!

| Published : Jun 07 2024, 12:31 AM IST

ಸಾರಾಂಶ

ದಾವಣಗೆರೆ, ನಕಲಿ ದಾಖಲೆಗಳನ್ನು ನೀಡಿ 20ಕ್ಕೂ ಹೆಚ್ಚು ಕಂಪನಿಗಳಿಗೆ ಕೋಟ್ಯಂತರ ರು. ವಂಚಿಸಿ ವ್ಯಕ್ತಿಯೊಬ್ಬ ಕುಟುಂಬ ಸಮೇತ ರಾತ್ರೋರಾತ್ರಿ ನಾಪತ್ತೆಯಾಗಿರುವ ಘಟನೆ ಜಗಳೂರು ಪಟ್ಟಣದಲ್ಲಿ ನಡೆದಿದೆ.

-ಜಗಳೂರಿನ ಇಬ್ಬರು ಅಮಾಯಕರ ಹೆಸರಲ್ಲಿ ಎರಡು ಅಂಗಡಿ ಸ್ಥಾಪಿಸಿದ್ದ ವಂಚಕ-ಅನ್ಯ ರಾಜ್ಯದ ಮೂಲದ ವಂಚಕನ ಸನ್ನಡತೆ ವ್ಯವಹಾರದ ಬಲೆಗೆ ಬಿದ್ದ ವಿತರಕರು,-ಕಂಪನಿಗಳಿಗೆ ಕೋಟ್ಯಂತರ ರು. ಪಂಗನಾಮ, ಪೊಲೀಸ್ ಠಾಣೆಯಲ್ಲಿ ದೂರು

ಕನ್ನಡಪ್ರಭ ವಾರ್ತೆ, ದಾವಣಗೆರೆನಕಲಿ ದಾಖಲೆಗಳನ್ನು ನೀಡಿ 20ಕ್ಕೂ ಹೆಚ್ಚು ಕಂಪನಿಗಳಿಗೆ ಕೋಟ್ಯಂತರ ರು. ವಂಚಿಸಿ ವ್ಯಕ್ತಿಯೊಬ್ಬ ಕುಟುಂಬ ಸಮೇತ ರಾತ್ರೋರಾತ್ರಿ ನಾಪತ್ತೆಯಾಗಿರುವ ಘಟನೆ ಜಗಳೂರು ಪಟ್ಟಣದಲ್ಲಿ ನಡೆದಿದೆ.ಜಗಳೂರಿನ ಮರೇನಹಳ್ಳಿ ರಸ್ತೆಯಲ್ಲಿ ರೈತ ಆಗ್ರೋ ಫರ್ಟಿಲೈಸರ್ಸ್‌ ಹೆಸರಿನಲ್ಲಿ ಬೀಜ, ಗೊಬ್ಬರ ದಂಗಡಿ ನಡೆಸುತ್ತಿದ್ದ ಕುಮಾರಗೌಡ ಅಲಿಯಾಸ್ ವೀರೇಶಗೌಡ ಎಂಬ ವ್ಯಕ್ತಿಯಿಂದ ಕಂಪನಿ ಗಳಿಗಷ್ಟೇ ಅಲ್ಲ, ವಿತರಕರಿಗೂ ವಂಚನೆಯಾಗಿದೆ. ಬೀಜ, ಗೊಬ್ಬರದಂಗಡಿ ನಡೆಸುತ್ತಿದ್ದ ಕುಮಾರಗೌಡ ನಕಲಿ ದಾಖಲೆಗಳನ್ನು ನೀಡಿ, ಸುಮಾರು 20ಕ್ಕೂ ಹೆಚ್ಚು ಕಂಪನಿಗಳು, ವಿತರಕರಿಗೆ ಕೋಟ್ಯಂತರ ರು. ವಂಚನೆ ಬಗ್ಗೆ ದೂರು ದಾಖಲಾಗಿದೆ.

ಪಯೋನಿಯರ್, ಕಾವೇರಿ, ರಾಶಿ, ಡಿಕೆಶಿ, ಅಡ್ವಾಂಟ್‌, ಲಕ್ಷ್ಮೀ ಸೀಡ್ಸ್‌, ವಿಎನ್ಆರ್ ಸೇರಿದಂತೆ 20ಕ್ಕೂ ಹೆಚ್ಚು ಬೀಜ-ಗೊಬ್ಬರ ಕಂಪನಿಗಳು, ಡೀಲರ್‌ಗಳಿಗೆ ಕೋಟ್ಂತರ ರು.ಗೆ ಕುಮಾರ ಗೌಡ ಪಂಗನಾಮ ಹಾಕಿದ್ದಾನೆ. ಜಗಳೂರು ತಾ. ಉದಗಟ್ಟಿ ಗ್ರಾಮದ ರುದ್ರೇಶ ಎಂಬುವರ ಹೆಸರಿನಲ್ಲಿ ಬೀಜ ಮಾರಾಟಕ್ಕೆ ಲೈಸೆನ್ಸ್ ಪಡೆದಿದ್ದು, ಆಂಧ್ರ ಪ್ರದೇಶದಲ್ಲೂ ಸಹ ಇದೇ ರೀತಿ ಅನೇಕ ಕಂಪನಿಗಳಿಗೆ ಕುಮಾರ ಗೌಡ ವಂಚಿಸಿರುವ ಆರೋಪ ಕೇಳಿ ಬರುತ್ತಿವೆ.

ಜಗಳೂರು ಪೊಲೀಸ್ ಠಾಣೆಗೆ 17 ಕಂಪನಿಗಳ ಅಧಿಕೃತ ವಿತರಕರು ಈತನ ವಿರುದ್ದ ದೂರು ದಾಖಲಿಸಿದ್ದಾರೆ. ಬೀಜ ಕಂಪನಿಗಳಿಗೆ ಸ್ವಲ್ಪ ಮುಂಗಡ ಹಣ ಕೊಟ್ಟು, ಕೋಟ್ಯಂತರ ಮೌಲ್ಯದ ಬಿತ್ತನೆ ಬೀಜ, ಗೊಬ್ಬರ ಪಡೆದಿದ್ದ ಆರೋಪಿ ಕಂಪನಿಗಳ ವಿತರಕರಿಗೆ ದೊಡ್ಡ ತಲೆನೋವಾಗಿದೆ. ಅದೃಷ್ಟಕ್ಕೆ ಕುಮಾರಗೌಡನಿಂದ ಯಾವುದೇ ರೈತರಿಗೆ ವಂಚನೆಯಾಗಿಲ್ಲ.

....ಏನಿದು ಘಟನೆ ಹಿನ್ನೆಲೆ..ಸಹಾಯಕರನ್ನೇ ಮಾಲೀಕನಾಗಿ ಮಾಡಿದ್ದ ವಂಚಕ!ಮರೇನಹಳ್ಳಿ ರಸ್ತೆಯ ಕಲ್ಲೇಶ್ವರ ಲಾಡ್ಜ್ ಎದುರು ಕಿಸಾನ್ ಆಗ್ರೋ ಮಳಿಗೆಯನ್ನು ಜಯಪ್ಪ ಹಾಗೂ ರೈತ ಆಗ್ರೋ ಕೇಂದ್ರದ ಬೀಜ, ರಸಗೊಬ್ಬರ ಮಾರಾಟ ಮಳಿಗೆಯನ್ನು ಉದ್ಧಘಟ್ಟ ಗ್ರಾಮದ ರುದ್ರೇಶ ಎಂಬುವರ ಹೆಸರಿನಲ್ಲಿ ವಂಚಕ ಆರಂಭಿಸಿದ್ದನು. ಅಂಗಡಿಗಳ ಮಾಲೀಕರ ಹೆಸರು ಇದ್ದುದೇ ಬೇರೆ, ಎರಡೂ ಅಂಗಡಿಗಳನ್ನು ನಡೆಸುತ್ತಿದ್ದವರೇ ಬೇರೆ. ಯಾಗಿತ್ತು. ಈಗ್ಗೆ 9 ತಿಂಗಳ ಹಿಂದೆ ಹೈಟೆಕ್ ಮಾದರಿಯಲ್ಲಿ ಈ ಅಂಗಡಿಯನ್ನು ಕುಮಾರ ಗೌಡ ಅಲಿಯಾಸ್ ವೀರೇಶ ಗೌಡ ಆರಂಭಿಸಿದ್ದನು. ಬೀಜ, ಗೊಬ್ಬರದ ಅಂಗಡಿಗೆ ಪರವಾನಿಗೆ, ಜಿಎಸ್‌ಟಿಯಲ್ಲೂ ಪೋರ್ಜರಿ, ವ್ಯಾಪಾರ ಆರಂಭಿಸಲು ನಕಲಿ ದಾಖಲೆ ನೀಡಿದ್ದು, ಕಂಪನಿಗಳಿಗೆ ವಂಚಿಸಿರುವುದು ಸೇರಿದಂತೆ ಒಂದೊಂದಾಗಿ ಮೊಸ ಬೆಳಕಿಗೆ ಬರುತ್ತಿವೆ.

ಕಳೆದ 2 ವರ್ಷಗಳಿಂದ ಪಟ್ಟಣದಲ್ಲಿ ಬೀಜ, ಗೊಬ್ಬರದ ವ್ಯಾಪಾರ ನಡೆಸುತ್ತಿದ್ದ ಕುಮಾರಗೌಡ ಅಲಿಯಾಸ್ ವೀರೇಶ ಗೌಡ ತನ್ನ ಅಂಗಡಿಗಳಿಗೆ ಬೀಜ, ಗೊಬ್ಬರವನ್ನು ಜಯಪ್ಪ ಹಾಗೂ ಉದ್ಧಘಟ್ಟ ಗ್ರಾಮದ ರುದ್ರೇಶ ಹೆಸರಿನಲ್ಲಿ ದಾವಣಗೆರೆಯ ವಿವಿಧ ಬೀಜದ ಕಂಪನಿಗಳು, ಗೊಬ್ಬರ ಕಂಪನಿಗಳ ಡೀಲರ್ ಗಳಿಂದ ತರಿಸಿಕೊಳ್ಳುತ್ತಿದ್ದ. ಮೊದ ಮೊದಲು ಎಲ್ಲರ ವಿಶ್ವಾಸಗಳಿಸಿ, ಮುಂಗಡ ಹಣ ಹಾಕಿ, ಬಿತ್ತನೆ ಬೀಜ ತರಿಸಿ ಕೊಳ್ಳುತ್ತಿದ್ದರಿಂದ ಈತನ ಪಾರದರ್ಶಕ ವ್ಯವಹಾರ ನಂಬಿ ಬಿತ್ತನೆ ಬೀಜಗಳ ಲಾಟ್‌ ಗಳನ್ನೇ ರುದ್ರೇಶ ಎಂಬುವರ ಹೆಸರಿಗೆ ಕಂಪನಿಯವರು ಕಳಿಸ ತೊಡಗಿದರು.

ಕುಮಾರಗೌಡ ಸಹ ಅದೇ ಹೆಸರಿನಲ್ಲಿ ಚೆಕ್ ಮೂಲಕ ವ್ಯವಹರಿಸುತ್ತಿದ್ದ. ತನ್ನ ಅಂಗಡಿಯಲ್ಲಿ ಅಮಾಯಕ ರುದ್ರೇಶನನ್ನು ಸಹಾಯಕನಾಗಿ ಕೆಲಸಕ್ಕೆ ಇಟ್ಟುಕೊಂಡು, ಆತನಿಗೆ ಸಂಕಷ್ಟದಲ್ಲಿ ಸಿಲುಕಿಸಿ, ಪರಾರಿ ಯಾಗಿದ್ದಾನೆ. ರಾಜ್ಯದ ಹಲವಾರು ಕಡೆ ಇದೇ ರೀತಿ ಕೋಟಿ ಕೋಟಿ ರು.ಗೆ ನಾಮ ಎಳೆದು, ಕುಮಾರ ಗೌಡ ಊರು ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.

ಅಂಗಡಿಯಲ್ಲಿ ಕೆಲಸಕ್ಕಿದ್ದ ರುದ್ರೇಶನ ಆಧಾರ್ ಕಾರ್ಡ್‌, ಜಿಎಸ್‌ಟಿ ನಂಬರ್ ಪಡೆದು, ಚೆಕ್ ಲೀವ್ಸ್‌(ಖಾಲಿ ಚೆಕ್ ಬುಕ್‌) ಗಳಿಗೆ ಸಹಿ ಮಾಡಿಸಿಕೊಂಡು, ಮೆಕ್ಕೆಜೋಳ, ತೊಗರಿ, ಅವರೆ, ಕುಂಬಳ, ಈರುಳ್ಳಿ ಸೇರಿದಂತೆ ರೈತರು ಬಿತ್ತನೆ ಮಾಡುವ ಎಲ್ಲಾ ಬೀಜಗಳ ಡೀಲರ್ಸ್‌ಗಳಿಂದ ಒಮ್ಮೆಲೆ ಕೋಟಿ ಕೋಟಿ ವ್ಯವಹಾರ ಮಾಡಿದ್ದಾನೆ.

ಕುಮಾರಗೌಡನ ಬಳಿ ಕೆಲಸಕ್ಕಿದ್ದ ಅಮಾಯಕ ರುದ್ರೇಶನ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಬ್ ಇನ್ಸಪೆಕ್ಟರ್‌ ಎಸ್.ಡಿ.ಸಾಗರ್ ನೇತೃತ್ವದಲ್ಲಿ ಪೊಲೀಸರು ರೈತ ಆಗ್ರೋ ಮುಟ್ಟುಗೋಲು ಹಾಕಿಕೊಂಡು, ಸಾಲ ಕೊಟ್ಟ ಡೀಲರ್ ಗಳಿಗೆ ಇದ್ದ ಬದ್ದ ಬಿತ್ತನೆ ಬೀಜಗಳನ್ನು ಅರ್ಧದಷ್ಟು ವಾಪಾಸ್ ಕೊಡಿಸುವ ಕೆಲಸ ಮಾಡುತ್ತಿದ್ದಾರೆ.

ಪೊಲೀಸ್‌ ಇನ್ಸ್‌ಪೆಕ್ಟರ್ ಡಿ.ಶ್ರೀನಿವಾಸ ರಾವ್ ಮಾರ್ಗದರ್ಶನಂತೆ ಬುಧವಾರ ತಡರಾತ್ರಿವರೆಗೂ ಮರಳಿಸುವ ಕೆಲಸದಲ್ಲಿ ಪೊಲೀಸರು ತೊಡಗಿದ್ದರು. 3 ತಿಂಗಳ ಹಿಂದಷ್ಟೇ ಕೃಷಿ ಇಲಾಖೆ ಜಾರಿದಳದ ಅಧಿಕಾರಿಗಳಾದ ಜನಾರ್ದನ, ಬಿ.ವಿ.ಶ್ರೀನಿವಾಸಲು ಕಿಸಾನ್ ಆಗ್ರೋ ಮಳಿಗೆ ಮೇಲೆ ದಾಳಿ ಮಾಡಿ, ಪರವಾನಿಗೆ ಇಲ್ಲದ ಕೀಟನಾಶಕ ಮತ್ತು ರಸಗೊಬ್ಬರಗಳನ್ನು ವಶಕ್ಕೆ ಪಡೆದಿದ್ದರು. ಆಗಲೂ ಸಹ ಕುಮಾರಗೌಡ ದಾಖಲೆಯಲ್ಲಿ ಸೃಷ್ಟಿಸಿದ್ದ ಮಾಲೀಕ ಜಯಪ್ಪನ ವಿರುದ್ಧ ಕೇಸ್ ದಾಖಲಾಗಿತ್ತು.

......(ಫೋಟೋ ಬರಲಿವೆ)