ಸಾರಾಂಶ
- ವಾಲ್ಮೀಕಿ ಭವನದಲ್ಲಿ ಡಾ.ರಾಧಾಕೃಷ್ಣನ್ ಜಯಂತಿ । ನಿವೃತ್ತ ಶಿಕ್ಷಕರಿಗೆ ಸನ್ಮಾನ - - -
ಕನ್ನಡಪ್ರಭ ವಾರ್ತೆ ಜಗಳೂರುಮಕ್ಕಳಿಗೆ ಗುರು ಬಿತ್ತಿದ ಅಕ್ಷರಬೀಜ, ರೈತರು ಭೂಮಿಗೆ ಹಾಕಿದ ಬೀಜ ಒಂದಲ್ಲ ಒಂದು ದಿನ ಫಲ ನೀಡುತ್ತದೆ. ಇಂತಹ ಶಕ್ತಿ ಸೃಷ್ಠಿಕರ್ತನ ತದ್ರೂಪಿಯಾದ ಗುರುವಿಗೆ ಇದೆ ಎಂದು ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ ಬಣ್ಣಿಸಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ದೇಶದ ಆದರ್ಶ ಶಿಕ್ಷಕ, ರಾಷ್ಟ್ರಪತಿ ಡಾ.ರಾಧಾಕೃಷ್ಣನ್ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರ ದಿನಾಚರಣೆ ಗುರು-ಶಿಷ್ಯರ ಸಂಗಮಕ್ಕೆ ಸಾಕ್ಷಿಯಾಗಬೇಕಿದೆ. ವ್ಯಕ್ತಿ ಯಾವುದೇ ಉತ್ತುಂಗದ ಸ್ಥಾನಕ್ಕೆ ಬೆಳೆದರೂ ಗುರುವಿಗೆ ಶಿಷ್ಯನು ಎಂಬುದನ್ನು ಮರೆಯಬಾರದು. ಇಂದಿನ ಮಕ್ಕಳಿಗೆ ಶಿಕ್ಷಕರು ಸಂಸ್ಕಾರಯುತ ಶಿಕ್ಷಣ ನೀಡಬೇಕಿದೆ. ಕ್ಷೇತ್ರದಲ್ಲಿ ಅಧಿಕಾರಿಗಳಿಂದ ಅಭಿವೃದ್ಧಿ ಕೆಲಸ ನಿರೀಕ್ಷಿಸುವೆ. ನಾನು ಭಯಪಡಿಸುವುದಿಲ್ಲ, ಅಧಿಕಾರಿಗಳಿಗೆ ರಕ್ಷಣೆಯಾಗಿರುವೆ. ಇದುವರೆಗೂ ತಾಲೂಕಿನಲ್ಲಿ ಒಂದೂ ಜಾತಿನಿಂದನೆ ಕೇಸ್ ದಾಖಲಾಗಿಲ್ಲ. ಅದಕ್ಕೆ ಅವಕಾಶ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಆದ್ಯತೆಯಾಗಿದೆ ಎಂದರು.
ಸಾಹಿತಿ, ಸಹಾಯಕ ಪ್ರಾಧ್ಯಾಪಕ ಅರುಣ್ ಜೋಳದಕೂಡ್ಲಿಗಿ ಅವರು ಪ್ರಸ್ತುತ ಶಿಕ್ಷಕರ ಮುಂದಿನ ಸವಾಲು ವಿಷಯ ಕುರಿತು ಉಪನ್ಯಾಸ ನೀಡಿದರು. ಶಿಕ್ಷಕರು ಬಸವಣ್ಣನ ನಡೆನುಡಿ, ಬುದ್ದನ ಅರಿವಿನ ಗುಣ ಅಳವಡಿಸಿಕೊಂಡು ಭಾರತ ಸಂವಿಧಾನದ ಕನಸುಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿದರೆ ಶಿಕ್ಷಣ ಕ್ರಾಂತಿ ಸಾಧ್ಯ. ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ ಸೇವೆ ಸಲ್ಲಿಸಿ ರಾಜ್ಯದಲ್ಲಿ 1000 ಶಾಲೆಗಳನ್ನು ಸ್ಥಾಪಿಸಿ, ಪ್ರತಿ ತಾಲೂಕುವಾರು ಮೂರು ಮಾಧ್ಯಮ ಶಾಲೆ ತೆರೆದು, ವಯಸ್ಕರ ಶಿಕ್ಷಣ ಜಾರಿಗೆ ತಂದ ಜಗಳೂರಿನ ಇಮಾಂ ಸಾಹೇಬರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.ನಿವೃತ್ತ ಶಿಕ್ಷಕ, ಉಪನ್ಯಾಸಕರನ್ನು, ಎಸ್.ಎಸ್.ಎಲ್.ಸಿ. ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ಯತ ಶ್ರೇಣಿಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ, ರಾಧಕೃಷ್ಣನ್, ಸಾವಿತ್ರಿ ಬಾಯಿ ಫುಲೆ, ಭಾವಚಿತ್ರದೊಂದಿಗೆ ಬೆಳ್ಳಿ ಸಾರೋಟು, ಉರಿಮೆ, ತಮಟೆ, ಕಹಳೆ, ವಿವಿಧ ವಾದ್ಯ ವೃಂದಗಳೊಂದಿಗೆ ಮಹಾತ್ಮಗಾಂಧಿ ವೃತ್ತದ ಮೂಲಕ ವೇದಿಕೆಗೆ ಆಗಮಿಸಿತು.ಶಾಸಕರ ಧರ್ಮಪತ್ನಿ ತಿಪ್ಪಮ್ಮ ಬಿ.ದೇವೇಂದ್ರಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ನವಚೇತನ ಶಾಲೆಯ ಡಾ. ಪಿ.ಎಸ್. ಅರವಿಂದನ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಷಂಷೀರ್ ಅಹಮ್ಮದ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಹಾಲಸ್ವಾಮಿ, ಡಿಡಿಪಿಐ ಕರಿಸಿದ್ದಪ್ಪ, ತಾಪಂ ಇಒ ಕೆಂಚಪ್ಪ, ಬಿಇಓ ಹಾಲಮೂರ್ತಿ, ಬಿಆರ್ ಸಿ ಡಿ.ಡಿ ಹಾಲಪ್ಪ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪ್ರಾ.ಶಾ. ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಪ್ರೌ.ಶಾ.ಶಿ. ಸಂಘದ ತಾಲೂಕು ಅಧ್ಯಕ್ಷ ಸಿ.ಮಹಾಂತೇಶ್, ಬಿ.ಮಹೇಶ್ವರಪ್ಪ, ಪ.ಪಂ. ಸದಸ್ಯರು, ನಿವೃತ್ತ ಶಿಕ್ಷಕರು, ಶಿಕ್ಷಕರ ಸಂಘದ ಪದಾಧಿಕಾರಿಗಳು, ನೌಕರರ ಸಂಘದ ಪದಾಧಿಕಾರಿಗಳು, ಸಿಆರ್‌ಪಿಗಳು ಇತರರು ಇದ್ದರು.
- - -(ಕೋಟ್)
ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿದ್ದ ನಾನು ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಶಿಕ್ಷಣ ಮತ್ತು ಮೀಸಲಾತಿ ಹಕ್ಕಿನಡಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಮಗ ಹಳ್ಳಿಯಿಂದ ದೆಹಲಿಗೆ ಅಧಿಕಾರಿಯಾಗಿ ಹೋಗಿದ್ದು, ನೂರಾರು ಜನರು ಐಎಎಸ್ ಅಧಿಕಾರಿಗಳಾಗಿ ಪ್ರತಿಭೆ ಮೆರೆಯಬೇಕು.
- ಬಿ.ದೇವೇಂದ್ರಪ್ಪ, ಶಾಸಕ.- - -
-05ಜೆ.ಜಿ.ಎಲ್.1.ಜೆಪಿಜಿ:ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಶುಕ್ರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರು, ಉಪನ್ಯಾಸಕರಿಗೆ ಶಾಸಕ ಬಿ.ದೇವೇಂದ್ರಪ್ಪ ಹಾಗೂ ಗಣ್ಯರು ಸನ್ಮಾನಿಸಿದರು.