ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಂತ್ರಜ್ಞಾನದ ಪ್ರಯೋಜನಗಳ ಜತೆಗೆ ವಿನೂತನ ಅವಿಷ್ಕಾರಗಳು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ರೈತಾಪಿ ವರ್ಗದ ಗ್ರಾಮೀಣ ಜನರ ಬದುಕಿನಲ್ಲಿ ಅಗತ್ಯ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ತೊಂದರೆಯಾಗದಂತೆ ಅವರ ಸಮಸ್ಯೆಗೆ ಸ್ಪಂದಿಸುವ ಕಾರ್ಯದಲ್ಲಿ ವೈದ್ಯರ ನಿಸ್ವಾರ್ಥ ಸೇವೆ ಅಗತ್ಯವಾಗಿದೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಸಲಹೆ ನೀಡಿದರು.ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಾಸನ ಜಿಲ್ಲಾ ಪ್ರಸೂತಿ ತಜ್ಞರ ಸಂಘ ಹಾಗೂ ಸ್ತ್ರೀರೋಗ ಶಾಸ್ತ್ರ ವಿಭಾಗದವರ ಸಹಕಾರದಲ್ಲಿ ರಾಷ್ಟ್ರೀಯ ಮೂತ್ರಶಾಸ್ತ್ರ (ಯೂರೊಗೈನಕಾಲಜಿ) ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳಿಗೆ ಇತ್ತೀಚಿನ ವರ್ಷಗಳಲ್ಲಿ ಖುತುಚಕ್ರ, ಗರ್ಭಕೋಶ ಹಾಗೂ ಇತರೆ ಸಮಸ್ಯೆಗಳು ಹೆಚ್ಚು ಕಾಡುತ್ತಿದ್ದು, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ನುರಿತ ವೈದ್ಯರು ತಿಳಿಸಿಕೊಡುವ ನೂತನ ಶಸ್ತ್ರಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನೀವುಗಳು ಅಪ್ಡೇಟ್ ಆಗಬೇಕೆಂದು ಸಲಹೆ ನೀಡಿದರು. ಯೂರೋ ಗೈನಾಕಲಿಜಿಯ ತಜ್ಞ ಶಸ್ತ್ರಚಿಕಿತ್ಸಕರ ತಂಡ ಆಗಮಿಸಿ ಸ್ತ್ರೀರೋಗಗಳ ಶಸ್ತ್ರಚಿಕಿತ್ಸೆಗಳನ್ನು ಆಧುನಿಕ ಪದ್ಧತಿಯನ್ನು ಶಸ್ತ್ರಚಿಕಿತ್ಸೆಯ ನೇರ ಪ್ರಸಾರ ಮಾಡುತ್ತಾ ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ವಿವರಿಸಿದ್ದಾರೆ. ಇತ್ತೀಚಿನ ಆಧುನಿಕ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸದೇ ಲ್ಯಾಪ್ರೋಸ್ಕೋಪಿ ಚಿಕಿತ್ಸಾ ವಿಧಾನದ ರೀತಿಯಲ್ಲಿ ಸಮಸ್ಯೆ ಪರಿಹರಿಸುವ ವಿಧಾನದ ಬಗ್ಗೆ ಹಾಗೂ ಇನ್ನೂ ಕೆಲವು ಸಮಸ್ಯೆಗಳನ್ನು ಶಸ್ತ್ರಚಿಕಿತ್ಸೆ ನಡೆಸದೇ ಚಿಕಿತ್ಸೆ ನೀಡುವ ಮೂಲಕ ಸರಿಪಡಿಸುವ ವಿಧಾನಗಳನ್ನು ಪ್ರಾಯೋಗಿಕವಾಗಿ ಕಲಿಸಿದ್ದಾರೆ ಎಂಬ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ನಡೆದಾಗ ವಿಷಯವನ್ನು ಅರಿತು ಮುನ್ನಡೆಯಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನದಲ್ಲಿ ಡಾ. ಚಂದ್ರಶೇಖರ್ ಮೂರ್ತಿ ವೈ.ಎಂ, ಡಾ. ಲಕ್ಷ್ಮಿಕಾಂತ್, ಡಾ. ಕಿರಣ್ ಅಶೋಕ್, ಡಾ. ಭಾರತಿ ರಾಜಶೇಖರ್, ಡಾ. ವೆಂಕಟೇಶ್, ಡಾ. ರಂಗಲಕ್ಷ್ಮೀ, ಡಾ. ಸುಶೀಲಾರಾಣಿ, ಡಾ. ಅನಿಲ್ ಎಚ್., ಡಾ. ಸುಧಾ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್, ಸ್ತ್ರೀ ರೋಗ ತಜ್ಞ ಡಾ. ಲೋಕೇಶ್, ಡಾ. ರಮೇಶ್, ಡಾ. ಚಿಂತನಾ ಉಪಸ್ಥಿತರಿದ್ದರು.