ಬೀದರ್ ನಗರದ ಎಸ್ಆರ್ ಎಸ್ ಫಂಕ್ಷನ್ ಹಾಲ್‌ನಲ್ಲಿ ಸನಾತನ ಕಲಾ ಮತ್ತು ಸಾಂಸ್ಕೃತಿಕ ವಿಪ್ರ ಸಂಗೀತ ಬಳಗದಿಂದ ಶನಿವಾರ ಸಂಜೆ ಆಯೋಜಿಸಿದ್ದ ‘ಸ್ವರ ವೈಭವ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಬೀದರ್
ನಮ್ಮ ಶ್ರೇಷ್ಠ ಸನಾತನ ಧರ್ಮದ ಮೌಲ್ಯ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಆಧ್ಯಾತ್ಮಿಕತೆ ಉಳಿಸಿ ಬೆಳೆಸುವುದು ಇಂದಿನ ತೀರ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಬ್ರಾಹ್ಮಣ ಸಮಾಜ ಸಲ್ಲಿಸುತ್ತಿರುವ ಸೇವೆ ಅಪಾರವಾಗಿದೆ ಎಂದು ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.ಅವರು ನಗರದ ಎಸ್ಆರ್ ಎಸ್ ಫಂಕ್ಷನ್ ಹಾಲ್‌ನಲ್ಲಿ ಸನಾತನ ಕಲಾ ಮತ್ತು ಸಾಂಸ್ಕೃತಿಕ ವಿಪ್ರ ಸಂಗೀತ ಬಳಗದಿಂದ ಶನಿವಾರ ಸಂಜೆ ಆಯೋಜಿಸಿದ್ದ ‘ಸ್ವರ ವೈಭವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಬ್ರಾಹ್ಮಣ ಸಮಾಜ ಸದಾ ಶ್ರಮಿಸುತ್ತಿದೆ. ಯಾವಾಗಲೂ ರಾಷ್ಟ್ರಹಿತ, ಧರ್ಮಪರ, ಸಮಾಜಪರವಾಗಿ ಇನ್ನೊಬ್ಬರಿಗೆ ಒಳ್ಳೆಯ ಮಾರ್ಗದರ್ಶನ ಮಾಡುವ ಸಮಾಜ ಇದಾಗಿದೆ. ಇಲ್ಲಿ ಸನಾತನ ಹೆಸರಿನಲ್ಲಿ ವಿಪ್ರ ಸಂಗೀತ ಬಳಗ ಕಟ್ಟಿ ವಿವಿಧ ಚಟುವಟಿಕೆಗಳು ನಡೆಸಲು ಮುಂದಾಗಿರುವುದು ಮಾದರಿಯಾಗಿದೆ ಎಂದು ಬಣ್ಣಿಸಿದರು.
ಇಂದು ನಾವು ಎಷ್ಟೇ ಉನ್ನತ ಶಿಕ್ಷಣ ಪಡೆದರೂ, ಯಾವುದೇ ಹುದ್ದೆಯಲ್ಲಿದ್ದರೂ ಸಂಸ್ಕೃತಿ, ಸಂಸ್ಕಾರ, ಚಾರಿತ್ರ್ಯ, ನೈತಿಕತೆ, ಮಾನವೀಯತೆ ಹೊಂದಿರದಿದ್ದರೆ ಅದು ವ್ಯರ್ಥವಾಗಲಿದೆ. ಇಂದಿನ ಯಾಂತ್ರಿಕ, ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ವೇಗದಲ್ಲಿ ಸಾಗುತ್ತಿದ್ದಾರೆ. ಒತ್ತಡ ಹೆಚ್ಚಾಗಿದೆ. ಇಂಥದ್ದರಲ್ಲಿ ನಿತ್ಯ ಕನಿಷ್ಠ ಅರ್ಧ ಗಂಟೆ ಸಂಗೀತ ಆಲಿಸಿದರೆ ಶಾಂತಿ, ನೆಮ್ಮದಿ ಪಡೆಯಬಹುದು ಎಂದರು.ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಜ್ಯೋತಿರ್ಮಯಾನಂದ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮನೆಯಲ್ಲಿನ ಕಲಾವಿದರಿಗೆ ವಿಪ್ರ ಸಂಗೀತ ಬಳಗ ಸಾರ್ವಜನಿಕ ವೇದಿಕೆ ಒದಗಿಸಿದ್ದು ವಿಶೇಷ. ಎಲ್ಲರಲ್ಲೂ ಪ್ರತಿಭೆ ಅಡಗಿದೆ. ಅದಕ್ಕೆ ಗುರುತಿಸಿ, ಹೊರಗೆ ತರುವುದು ಮಹತ್ಕಾರ್ಯ ಎಂದರು.
ವಿಪ್ರ ಸಂಗೀತ ಬಳಗದ ಅಧ್ಯಕ್ಷ ರಮೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದವರು ವಾರಕ್ಕೊಮ್ಮೆಯಾದರೂ ಒಂದೆಡೆ ಸೇರಿ ಬಾಂಧವ್ಯ ಗಟ್ಟಿ ಗೊಳಿಸುವುದಕ್ಕೆ ಬಳಗ ಕಟ್ಟಲಾಗಿದೆ. ಮನಸಲ್ಲೇ, ಮನೆಯಲ್ಲೇ ಹಾಡುವವರಿಗೆ ಇಲ್ಲಿ ವೇದಿಕೆ ನೀಡಲಾಗಿದೆ. ಇಲ್ಲಿ ಎಲ್ಲರೂ ದಿ ಬೆಸ್ಟ್ ಹಾಡಿ ಸಂಗೀತಾಸಕ್ತರಿಗೆ ರಂಜಿಸಿದ್ದಾರೆ. ಮೊದಲ ಕಾರ್ಯಕ್ರಮ ಅತೀ ಯಶಸ್ವಿ ನಡೆದಿದೆ. ಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳು ನಡೆಸುವ ಯೋಜನೆಗಳಿವೆ ಎಂದರು.ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿದರು. ದೇವಿದಾಸ ಜೋಶಿ ಸ್ವಾಗತಿಸಿದರು. ಸುಧಾ ಜಿ., ನಿರೂಪಿಸಿದರೆ. ಗಣ್ಯರಿಂದ ಸರಸ್ವತಿ ಮಾತೆ, ಶ್ರೀ ಪರುಷರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಪ್ರೇಕ್ಷಕರಿಗೆ ರಂಜಿಸಿದ ಗಾನಲಹರಿವಿಪ್ರ ಸಂಗೀತ ಬಳಗದ ಕಲಾವಿದರಾದ ಮಹೇಶ ಮೈಲೂರಕರ್, ಶಶಿಕಾಂತ ಜೋಶಿ, ರೇಖಾ ಮಕರಂದ ಕುಲಕರ್ಣಿ, ಗಿರೀಶ್ ಮೈಲೂರಕರ್, ರಮೇಶ ಕುಲಕರ್ಣಿ, ಸಂತೋಷಿ ಜೋಶಿ, ಕವಿತಾ ಉಪಾಧ್ಯೆ, ದೇವಿದಾಸ ಜೋಶಿ, ದಿಗಂಬರ ಜೋಶಿ, ವೀಣಾ ಜೋಶಿ, ಕಲ್ಯಾಣರಾವ ಕುಲಕರ್ಣಿ ಅವರು ಸುಮಾರು ಮೂರು ಗಂಟೆ ಕನ್ನಡ ಚಿತ್ರಗೀತೆಗಳ ಗಾನಲಹರಿ ಹರಿಸಿದರು. ಇಡೀ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಕಲಾವಿದರು ಮಸ್ತ್ ಹಾಡಿ ಪ್ರೇಕ್ಷಕರಿಗೆ ಸಂಗೀತದ ರಸದೌತಣವೇ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಸಹ ಎರಡು ಹಾಡುಗಳನ್ನು ಬೆಸ್ಟ್ ಹಾಡಿ ಕಲಾವಿದರಿಗೆ ಪ್ರೇರಣೆ ತುಂಬಿದರು.