ಸಾರಾಂಶ
ಪೌರಕಾರ್ಮಿಕರು ಸಮಾಜದ ಸೇನಾನಿಯಾಗಿದ್ದು, ಅವರ ಸೇವೆ ಶ್ಲಾಘನೀಯ ಎಂದು ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ ಹೇಳಿದರು.
ಹೊಳೆಹೊನ್ನೂರು: ಪೌರಕಾರ್ಮಿಕರು ಸಮಾಜದ ಸೇನಾನಿಯಾಗಿದ್ದು, ಅವರ ಸೇವೆ ಶ್ಲಾಘನೀಯ ಎಂದು ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಹೊಳೆಹೊನ್ನೂರು ಘಟಕದಿಂದ ಶುಕ್ರವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿನಿತ್ಯ ಪೌರ ಕಾರ್ಮಿಕರು ಜನರಿಂದ ನಿಂದನೆಗೆ ಒಳಗಾಗುತ್ತಾರೆ. ಆದರೆ ಅವರ ಪರಿಶ್ರಮ ಅಪ್ರತೀಮವಾಗಿದೆ. ಪರಿಸರ ಹಾಗೂ ಸಮಾಜ ಸ್ವಾಸ್ಥ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಮಹತ್ವದ ಪಾತ್ರ ವಹಿಸುತ್ತಾರೆ. ಆದರೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲಕ್ಷಿಸದೆ ಶ್ರಮಿಸುತ್ತಿದ್ದಾರೆ ಎಂದ ಅವರು, ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಆ್ಯಪ್ ಮೂಲಕ ತ್ಯಾಜ್ಯ ವಿಲೇವಾರಿ ಮಾಡುವ ಕಾಲ ಸನ್ನಿಹಿತವಾಗಿದೆ ಎಂದರು.ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹೇಮಂತ್ ಕುಮಾರ್, ನೀರುಗಂಟಿ ಜಗದೀಶ, ಪ್ರವೀಣ ಮಾತನಾಡಿದರು. ಪೌರಕಾರ್ಮಿಕರಾದ ಉಮೇಶ್, ಧನಲಕ್ಷ್ಮೀ ಅವರು ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ, ಹೊಳೆಹೊನ್ನೂರು ಘಟಕದ ಶಾಖಾ ಅಧ್ಯಕ್ಷ ಕೆ.ರಂಗಪ್ಪ, ಜಿಲ್ಲಾ ನಗರಾಭಿವೃದ್ದಿ ಕೋಶ ವಸತಿ ವಿಭಾಗದ ಮುಖ್ಯಸ್ಥ ಸ್ವಾಮಿ, ಪೌರಸೇವಾ ನೌಕರರ ಸಂಘದ ಉಪಾಧ್ಯಕ್ಷ ಎ.ಹನುಮಂತಪ್ಪ, ವಿವಿಧ ವಿಭಾಗದ ನೌಕರರು ಹಾಗೂ ಅವರ ಕುಟುಂಬದವರು ಹಾಜರಿದ್ದರು. ಇದಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಯ ಜಾಥಾ ಸಂಚರಿಸಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪೌರ ನೌಕರರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ನಂತರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆಸಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.ದ್ವಿತೀಯ ದರ್ಜೆ ಸಹಾಯಕ ಅಣ್ಣಪ್ಪಸ್ವಾಮಿ ಸ್ವಾಗತಿಸಿದರು. ಲೆಕ್ಕಿಗ ಎಸ್.ಪ್ರದೀಪ್ ವಂದಿಸಿದರು.