ಸಾರಾಂಶ
ಪತ್ರಿಕೆಯಲ್ಲಿಯ ಸುದ್ದಿ ಮುಟ್ಟಿಸುವಲ್ಲಿ ಪತ್ರಿಕಾ ವಿತರಕರ ಸೇವೆ ಮಾದರಿಯಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಪತ್ರಿಕೆಯಲ್ಲಿಯ ಸುದ್ದಿ ಮುಟ್ಟಿಸುವಲ್ಲಿ ಪತ್ರಿಕಾ ವಿತರಕರ ಸೇವೆ ಮಾದರಿಯಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಹೇಳಿದರು.ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ವಿತರಕರನ್ನು ಸನ್ಮಾನಿಸಿ ಮಾತನಾಡಿ, ಪ್ರತಿನಿತ್ಯ ಮಳೆ, ಚಳಿ, ಗಾಳಿ ಲೆಕ್ಕಿಸದೇ ಮನೆ, ಮನೆಗೆ ಪತ್ರಿಕೆಗಳನ್ನು ಮುಟ್ಟಿಸುವಲ್ಲಿ ಶ್ರಮ ಪಡುತ್ತಿರುವ ಪತ್ರಿಕಾ ವಿತರಕರ ಪಾತ್ರ ಬಹುದೊಡ್ಡದಾಗಿದೆ. ನಾವು ಬರೆದಿರುವ ಸುದ್ದಿಗಳನ್ನು ವಿತಕರಕರು ಓದುಗರಿಗೆ ಮುಟ್ಟಿಸದೇ ಇದ್ದರೆ, ನಾವು ಬರೆದ ಸುದ್ದಿ ವ್ಯರ್ಥವಾಗುತ್ತದೆ. ಆದರೆ ಯಾವುದೇ ಕಷ್ಟಗಳಿಗೂ ಲೆಕ್ಕಿಸದೇ ಸೂರ್ಯೋದಯಕ್ಕೂ ಮುನ್ನ ಮನೆಮನೆಗೆ ಸುದ್ದಿ ಮುಟ್ಟಿಸುವ ವಿತರಕರ ಸೇವೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಕಾರ್ಯದರ್ಶಿ ಗಣಪತಿ ಬೋಚರೆ, ಖಜಾಂಚಿ ಸಂತೋಷ ಬಿಜಿ ಪಾಟೀಲ ಪತ್ರಿಕಾ ವಿತರಕರ ಕಾರ್ಯದ ಬಗ್ಗೆ ಮಾತನಾಡಿದರು. ಇದೇ ವೇಳೆ ಪತ್ರಿಕಾ ವಿತರಕರಾದ ರಾಜಗುರು ಮಾಗಾವೆ, ಫಯಾಜ್ ಪಟೇಲ, ಮಂಜುನಾಥ ಹೊನ್ನಾಳೆ, ರಿಯಾಜಮಿಯ್ಯಾ ಪಟೇಲ, ಖಾನಸಾಬ್ ನೂರಸಾಬ್, ಮಹಾರಾಷ್ಟ್ರ ಉದಯಗಿರಿಯ ಕನ್ನಡ ಪತ್ರಿಕೆ ವಿತರಕ ಮನಿಯಾರ್ ಏಜಾಜ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸತ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸ್ವಾಮಿ ಭದ್ರೇಶ ಗುರಯ್ಯಾ, ದೀಪಕ ಥಮಕೆ, ಪರಶುರಾಮ ಕರ್ಣಂ, ನರೇಂದ್ರ ಸೋಮಶೆಟ್ಟಿ, ಸಂತೋಷ ಹಡಪದ, ಸಂತೋಷ ನಾಟೇಕರ ಉಪಸ್ಥಿತರಿದ್ದರು.