ರೋಗಿಯ ಆರೈಕೆಯಲ್ಲಿ ದೇವರನ್ನು ಕಾಣಬೇಕು ಎಂದು ಮದರ್‌ ಥೆರೆಸಾ ಹೇಳಿದ್ದಾರೆ. ಅಂತೆಯೇ ರೋಗಿಗಳ ಸೇವೆಯಲ್ಲಿ ಆರೋಗ್ಯ ಶಿಕ್ಷಕರಾಗಿ, ಆಪ್ತ ಸಲಹೆಗಾರರಾಗಿ, ಸಮಾಲೋಚಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶುಶೂಷಕರ ಜೀವನ ನಿಜಕ್ಕೂ ಸಾರ್ಥಕವಾದುದು.

ಕನ್ನಡಪ್ರಭ ವಾರ್ತೆ ಮೈಸೂರು

ಔಷಧದಿಂದಷ್ಟೇ ರೋಗ ವಾಸಿಯಾಗುವುದಿಲ್ಲ. ಅದರ ಜತೆಗೆ ವೈದ್ಯರು ಮತ್ತು ನರ್ಸ್‌ ಗಳ ಆರೈಕೆಯು ಮುಖ್ಯವಾಗುತ್ತದೆ. ರೋಗಿಗಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಆತ್ಮಸ್ಥೆರ್ಯ ತುಂಬಿದಾಗ ರೋಗವಾಸಿ ಮಾಡುವುದು ಸುಲಭ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ ಹೇಳಿದರು.

ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಾಂಸ್ಕೃತಿಕ ಸಭಾ ಭವನದಲ್ಲಿ ಬಿಜಿಎಸ್ ಇಂಟರ್‌ ನ್ಯಾಷನಲ್ ಫೌಂಡೇಶನ್ ಫಾರ್ ಹೆಲ್ತ್ ಸೈನ್ಸ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ನರ್ಸಿಂಗ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶುಶೂಷಕಿಯರು ಆರೋಗ್ಯ ಸಂಸ್ಥೆಯ ಬೆನ್ನೆಲುಬು, ಅವರ ಸೇವೆ ಅಪಾರ. ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ ಎಲ್ಲ ಶುಶೂಷಕರ ಕೊಡುಗೆ ಅನನ್ಯ ಎಂದರು.

ರೋಗಿಯ ಆರೈಕೆಯಲ್ಲಿ ದೇವರನ್ನು ಕಾಣಬೇಕು ಎಂದು ಮದರ್‌ ಥೆರೆಸಾ ಹೇಳಿದ್ದಾರೆ. ಅಂತೆಯೇ ರೋಗಿಗಳ ಸೇವೆಯಲ್ಲಿ ಆರೋಗ್ಯ ಶಿಕ್ಷಕರಾಗಿ, ಆಪ್ತ ಸಲಹೆಗಾರರಾಗಿ, ಸಮಾಲೋಚಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶುಶೂಷಕರ ಜೀವನ ನಿಜಕ್ಕೂ ಸಾರ್ಥಕವಾದುದು. ರೋಗಿಗಳ ಮನಗೆಲ್ಲುವಲ್ಲಿ ಹಾಗೂ ವೃತ್ತಿಯ ಘನತೆ ಎತ್ತಿ ಹಿಡಿಯುವಲ್ಲಿ ಯುವ ಪೀಳಿಗೆಯು ಮುಂದಾಗಬೇಕು ಎಂದರು.

ಲೇಡಿ ವಿತ್ ದ ಲ್ಯಾಂಪ್ ಎಂದೇ ಖ್ಯಾತರಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಅಂಗವಾಗಿ ಅಂತಾರಾಷ್ಟ್ರೀಯ ಶುಶೂಷಕಿಯರ ದಿನ ಆಚರಿಸಲಾಗುತ್ತದೆ. ನರ್ಸ್‌ ಗಳು ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ. ಅವರು ರೋಗಿಗಳೊಂದಿಗೆ ಸಹಾನುಭೂತಿಯಿಂದ ವರ್ತಿಸಿ, ಧೈರ್ಯ ತುಂಬ ತುಂಬಿ, ಗುಣಮುಖರಾಗಲು ಪ್ರೇರಣೆ ನೀಡುತ್ತಾರೆ. ಅಂತಹ ಒಳ್ಳೆಯ ಆರೋಗ್ಯ ಸೇವೆ ನೀಡುವುದಕ್ಕಾಗಿ ನರ್ಸಿಂಗ್ ಕೋರ್ಸ್ ಆಯ್ಕೆ ಮಾಡಿಕೊಂಡಿರುವುದು ತುಂಬಾ ಒಳ್ಳೆಯ ಕೆಲಸ ಎಂದು ಹೇಳಿದರು.

ಸಾನ್ನಿಧ್ಯವಹಿಸಿದ್ದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಕಾರ್ಯ ಮಹತ್ವದ್ದು. ಎಂತಹದ್ದೇ ಸನ್ನಿವೇಶ ಬಂದರೂ ಇನ್ನೊಬ್ಬರಿಗಾಗಿ ಸೇವೆ ಸಲ್ಲಿಸುತ್ತಾರೆ. ಇವರ ನಗುಮುಖದ ಸೇವೆಯೇ ರೋಗಿಗಳ ಪಾಲಿಗೆ ದೊಡ್ಡ ಧೈರ್ಯ, ಚೈತನ್ಯ ತರುತ್ತದೆ. ಇವರ ಸಾಂತ್ವನದ ನುಡಿ ಬದುಕಿನ ಭರವಸೆಯನ್ನು ತರುತ್ತದೆ. ಹೀಗಾಗಿ, ಶುಕ್ರೂಷಕರಿಗೆ ಅವರದ್ದೇ ಆದ ಮಹತ್ವದ ಸ್ಥಾನವಿದೆ ಎಂದರು.

ಕಾರ್ಯಕ್ರಮದಲ್ಲಿ ನರ್ಸಿಂಗ್ ಕ್ಷೇತ್ರದ ಸಾಧಕರಾದ ಮನೋನಿಧಿ ಇನ್‌ ಸ್ಟಿಟ್ಯೂಟ್‌ ಆಫ್ ನರ್ಸಿಂಗ್‌ ನ ನಿವೃತ್ತ ಪ್ರಾಂಶುಪಾಲೆ ಡಾ. ಶೈಲಜಾ ಕೃಪಾನಿಧಿ, ಸೇಂಟ್ ಜೋಸೆಫ್ ನರ್ಸಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ವಿ.ಸಿ. ಗ್ರೇಸಿ, ಜೆಎಸ್ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಿ.ಎನ್. ರೇಣುಕಾದೇವಿ, ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆ ನರ್ಸಿಂಗ್ ಅಧೀಕ್ಷಕ ರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

ಬಿಜಿಎಸ್ ಅಪೊಲೋ ಆಸ್ಪತ್ರೆ ಆಪರೇಷನ್ ಮತ್ತು ಯೂನಿಟ್ ಮುಖ್ಯಸ್ಥ ಅಮನ್ ನಾಯಕ್ ಇದ್ದರು.