ಸಾರಾಂಶ
ಚನ್ನಪಟ್ಟಣ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಗಳ ಸೇವೆ ಅನನ್ಯವೆಂದು ಹೆಚ್ಚವರಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ರಾಮಚಂದ್ರಯ್ಯ ಅಭಿಪ್ರಾಯಪಟ್ಟರು.
ಚನ್ನಪಟ್ಟಣದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ರಾಮನಗರ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಪರಾಧಗಳನ್ನು ತಡೆಗಟ್ಟಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರ ಕರ್ತವ್ಯ ಅಪಾರ. ಪೊಲೀಸ್ ಧ್ವಜದ ಗೌರವ ಎತ್ತಿ ಹಿಡಿಯುವುದು ಪ್ರತಿಯೊಬ್ಬ ಪೊಲೀಸರ ಕರ್ತವ್ಯವೆಂದು ತಿಳಿಸಿದರು.ಪ್ರತಿ ವರ್ಷ ಪೊಲೀಸ್ ಧ್ವಜ ದಿನಾಚರಣೆ ಆಯೋಜಿಸಲಾಗುತ್ತದೆ. ಪೊಲೀಸ್ ದ್ವಜ ಮಾರಾಟದಿಂದ ಬರುವ ಸಂಪನ್ಮೂಲದಲ್ಲಿ ಶೇ.೫೦ರಷ್ಟು ಭಾಗವನ್ನು ಕೇಂದ್ರ ಪೊಲೀಸರಕಲ್ಯಾಣ ನಿಧಿಗೆ ಹಾಗೂ ಶೇ.೫೦ರಷ್ಟು ಭಾಗವನ್ನು ನಿವೃತ್ತ ಪೊಲೀಸರಕಲ್ಯಾಣ ನಿಧಿಗೆ ನೀಡಲಾಗುವುದು, ಕಳೆದ ಬಾರಿಗಿಂತ ಈ ಬಾರಿ ಪೊಲೀಸ್‌ಧ್ವಜ ಮಾರಾಟವನ್ನು ದ್ವಿಗುಣಗೊಳಿಸಬೇಕು, ಮಾರಾಟದಿಂದ ಬಂದ ಹಣವನ್ನು ಸಂಪೂರ್ಣವಾಗಿ ಅವಶ್ಯಕತೆಯ ಅಭಿವೃದ್ದಿ ಕೆಲಸಗಳಿಗೆ ಬಳಸಲಾಗುವುದು ಎಂದರು.
ಪೊಲೀಸ್ ಧ್ವಜವಂದನೆ ಸ್ವೀಕರಿಸಿದ ನಿವೃತ್ತ ಸರ್ಕಲ್ ಇನ್ಸ್‌ಪೆಕ್ಟರ್ ನರಸಿಂಹಮರ್ತಿ ಮಾತನಾಡಿ, ಪೊಲೀಸ್ ವೃತ್ತಿ ಪುಣ್ಯದ ಕೆಲಸವಾಗಿದ್ದು, ಸಾರ್ವಜನಿಕರ ಆಸ್ತಿ, ಸಂಪತ್ತು, ಪ್ರಾಣ ರಕ್ಷಣೆಯ ಹೊಣೆಹೊತ್ತಿರುವ ಪೊಲೀಸರು ಸಮಾಜದ ರಕ್ಷಕರಾಗಿದ್ದೇವೆ ಎಂದರೆ ತಪ್ಪಾಗಲಾರದು. ಇಂತಹ ಆತ್ಮತೃಪ್ತಿ ಹೊಂದುವ ಮತ್ತೊಂದು ಕೆಲಸ ಇಲ್ಲ ಎಂದು ತಿಳಿಸಿದರು.ಹಿಂದಿನ ದಿನಗಳಲ್ಲಿ ತಂದೆ ತಾಯಿ ಮಾಡಿದ ಪಾಪವನ್ನು ಅವರ ಮಕ್ಕಳು ಅನುಭವಿಸುತ್ತಾರೆ ಎನ್ನುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ನಾನು ಮಾಡಿದ ಪಾಪಕ್ಕೆ ಅಲ್ಲೆ ಅನುಭವಿಸುವಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಎಚ್ಚರಿಕೆಯಿಂದ ಜನಮೆಚ್ಚುವಂತ ಕರ್ತವ್ಯ ನಿರ್ವಹಿಸಬೇಕೆಂದು ಪೊಲೀಸರಿಗೆ ಕಿವಿ ಮಾತು ಹೇಳಿದರು.
ಧ್ವಜ ದಿನಾಚರಣೆ ಪ್ರಯುಕ್ತ ಸೇವೆಯಿಂದ ನಿವೃತ್ತಿ ಹೊಂದಿದ ಹತ್ತು ಮಂದಿ ಪಿಎಸ್‌ಐ ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಡೆಸಿದ ಪೊಲೀಸರ ಆಕರ್ಷಕ ಪಥಸಂಚಲನ ನೋಡುಗರ ಕಣ್ಮನ ಸೆಳೆಯುತ್ತಿತ್ತು.ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಡಿವೈಎಸ್‌ಪಿ ಕೆ.ಸಿ.ಗಿರಿ, ರಾಮನಗರ ಡಿವೈಎಸ್‌ಪಿ ಶ್ರೀನಿವಾಸ್, ರಾಮನಗರ ಸೆನ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ಕೆಂಚೇಗೌಡ, ಮಾಗಡಿ ಡಿವೈಎಸ್ ಪಿ.ಪ್ರವೀಣ್ ಹಾಜರಿದ್ದರು.
ಪೋಟೊ೩ಸಿಪಿಟಿ೩: ಚನ್ನಪಟ್ಟಣದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ರಾಮನಗರ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸರನ್ನು ಸನ್ಮಾನಿಸಲಾಯಿತು. ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿಗಳಾದ ಕೆ.ಸಿ.ಗಿರಿ, ಶ್ರೀನಿವಾಸ್, ಪ್ರವೀಣ್, ಕೆಂಚೇಗೌಡ ಇತರರಿದ್ದರು.