ಸಾರಾಂಶ
- ಹತ್ತೂರಿನ ಸರ್ಕಾರಿ ಶಾಲೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಂದಿಗುಡಿ ಶ್ರೀಗಳ ನುಡಿ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಒಂದೇ ಶಾಲೆಯಲ್ಲಿ ಕಲಿತವರಲ್ಲಿ ಕೆಲವರು ಉನ್ನತ ಹುದ್ದೆಗಳಿಗೇರಿ ಸುಖಿಗಳಾಗಿದ್ದರೆ, ಇನ್ನು ಕೆಲವರು ಉದ್ಯೋಗವಿಲ್ಲದೇ ಅತಂತ್ರ ಜೀವನ ನಡೆಸುವಂತಾಗುತ್ತಾರೆ. ಇದಕ್ಕೆ ಶಾಲೆಯ ದೋಷವಲ್ಲ, ಬದಲಿಗೆ ವ್ಯಕ್ತಿಯ ಕಲಿಕೆಯಲ್ಲಿನ ದೋಷವಾಗಿರುತ್ತದೆ ಎಂದು ವೃಷಭಪುರಿ ಮಹಾಸಂಸ್ಥಾನ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಹತ್ತೂರು ಗ್ರಾಮದಲ್ಲಿ 1925ರಲ್ಲಿ ಆರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 2025ಕ್ಕೆ ನೂರು ವರ್ಷ ಪೂರೈಸಿದ ಹಿನ್ನೆಲೆ ಶಾಲೆಯ ಶತಮಾನೋತ್ಸವ ಹಳೇ ವಿದ್ಯಾರ್ಥಿಗಳ ಒಕ್ಕೂಟ, ಶಿಕ್ಷಣ ಇಲಾಖೆ, ಶಾಲಾ ಮೇಲುಸ್ತುವಾರಿ ಸಮಿತಿ, ಗ್ರಾಮ ಪಂಚಾಯಿತಿ, ಗ್ರಾಮಸ್ಥರು ಹಾಗೂ ಶಿಕ್ಷಕರ ಸಹಯೋಗದಲ್ಲಿ ನಡೆದ ಶಾಲಾ ಶತಮಾನೋತ್ಸವದ ಎರಡು ದಿನಗಳ ಕಾರ್ಯಕ್ರಮ ಉದ್ಘಾಟಿಸಿ, ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು ಉಳಿವು ದುಸ್ತರವಾಗುತ್ತಿದೆ. ಇಂಥ ಸಂದರ್ಭ ಗ್ರಾಮದ ಕನ್ನಡ ಶಾಲೆ ಇಂದು ನೂರು ವಸಂತಗಳನ್ನು ಪೂರೈಸಿ, ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿ ಮುಂದುವರೆಯುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಇದಕ್ಕೆ ಈ ಗ್ರಾಮದ ಜನತೆ, ಶಿಕ್ಷಣ ಇಲಾಖೆ, ಶಿಕ್ಷಕರು, ಹಾಗೂ ವಿದ್ಯಾರ್ಥಿ ಸಮೂಹಗಳ ಶ್ರಮಗಳು ಕಾರಣವಾಗಿವೆ ಎಂದು ಹೇಳಿದರು.ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಹತ್ತೂರು ಮಾದೇನಹಳ್ಳಿ, ಜೀನಹಳ್ಳಿ ಸೇರಿದಂತೆ ಈ ಭಾಗದಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳನ್ನು ಪೋಷಿಸಿದವರು ಮುಖಂಡ ಜೆ.ರಾಮಪ್ಪ ಅವರು. ಅನಂತರದಲ್ಲಿ ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪನವರ ಕೊಡುಗೆ ಸ್ಮರಣೀಯವಾಗಿದೆ ಎಂದರು.
1994-99ರಲ್ಲಿ ಇಡೀ ದೇಶದಲ್ಲಿಯೇ ಅತ್ಯಂತ ಪಾರದರ್ಶಕ, ಸಂಪೂರ್ಣ ಪ್ರತಿಭೆ ಆಧಾರದ ಮೇಲೆ ರಾಜ್ಯದ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡ ಅವರು 1.10 ಲಕ್ಷ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇದರ ಫಲವಾಗಿ ಇಂದು ಸರ್ಕಾರಿ ಶಾಲೆಗಳಲ್ಲಿ ಅರ್ಹ ಪ್ರತಿಭಾವಂತ ಶಿಕ್ಷಕರಿದ್ದಾರೆ. ಪೋಷಕರು ಮಕ್ಕಳನ್ನು ಇಂತಹ ಶಿಕ್ಷಕರಿರುವ ಶಾಲೆಗಳಿಗೆ ಕಳುಹಿಸಿದರೆ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬಹುದು ಎಂದರು.ಮುಖ್ಯ ಅಥಿತಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಭಾರತ ಎಲ್ಲ ಕ್ಷೇತ್ರಗಳಿಗೆ ಇಂದು ಬಲಿಷ್ಠ ಸ್ಪರ್ಧೆ ನೀಡುತ್ತಿದ್ದರೆ ಅದಕ್ಕೆ ಶಿಕ್ಷಣ ವ್ಯವಸ್ಥೆ, ಸಂಸ್ಕೃತಿ- ಸಂಸ್ಕಾರಗಳು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ ಹೊನ್ನಾಳಿ ತಾಲೂಕಿನ ಅಂದಿನ ಮತ್ತು ಇಂದಿನ ಶಿಕ್ಷಣದ ಸ್ಥಿತಿಗತಿಗಳು ವಿಷಯ ಕುರಿತು ಮಾತನಾಡಿದರು. ಬಿಇಒ.ಕೆ.ಟಿ.ನಿಂಗಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಪಿ. ಮಂಜುಳಾ ಇತರರು ಮಾತನಾಡಿದರು.ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಾಲೆಯ ಹಳೇ ವಿದ್ಯಾರ್ಥಿಗಳಾಗಿ, ಪ್ರಸ್ತುತ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ಮಾಜಿ ಸೈನಿಕರು, ನಿವೃತ್ತ ಶಿಕ್ಷಕರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಶಾಲೆ ಮುಖ್ಯ ಶಿಕ್ಷಕ ಮೇಘರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಮೊದಲನೆ ದಿನದ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಡಿ.ವಿ., ಜಿಲ್ಲಾ ಶ್ರೇಷ್ಠ ಕೃಷಿ ಪ್ರಶಸ್ತಿ ವಿಜೇತರಾದ ದೊಡ್ಡಬಸಪ್ಪ, ನೇಮಿಚಂದ್ರಪ್ಪ, ಈಶ್ವರಪ್ಪ, ಜಯಪ್ಪ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರಪ್ಪ, ಗ್ರಾಮ ಮುಖಂಡರು, ಶಾಲಾ ಮಕ್ಕಳು, ಮಹಿಳಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಮುಖಂಡ ಎಚ್.ಎ.ಉಮಾಪತಿ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕಳಿಸಿದ್ದ ಸಂದೇಶವನ್ನು ವೇದಿಕೆಯಲ್ಲಿ ಓದಿದರು.- - - -8ಎಚ್.ಎಲ್.ಐ1.ಜೆಪಿಜಿ:
ಹತ್ತೂರು ಸರ್ಕಾರಿ ಶಾಲೆ ಶತಮಾನೋತ್ಸವ ಕಾರ್ಯಕ್ರಮವನ್ನು ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣಕಾಚಾರ್ಯ ಇನ್ನಿತರ ಗಣ್ಯರು ಇದ್ದರು.