ವಿಜೃಂಭಣೆಯ ದೊಡ್ಡಬಳ್ಳಾಪುರ ಸಪ್ತಮಾತೃಕೆ ಮಾರಿಯಮ್ಮ ದೇವಿ ಕರಗ ಸಂಪನ್ನ

| Published : May 13 2025, 11:45 PM IST

ಸಾರಾಂಶ

ದೊಡ್ಡಬಳ್ಳಾಪುರ ಕರಗದ ಅಂಗವಾಗಿ ಶ್ರೀಸಪ್ತಮಾತೃಕೆ ಮಾರಿಯಮ್ಮ ಹಾಗೂ ಪಿಳ್ಳೇಕಮ್ಮ ಹೂವಿನ ಪಲ್ಲಕ್ಕಿ ಉತ್ಸವ, ನೆಲದಾಂಜನೇಯಸ್ವಾಮಿ ಬೆಳ್ಳಿ ಪಲ್ಲಕ್ಕಿ, ಕಾಳಿಕಾ ಕಮಟೇಶ್ವರ ಸ್ವಾಮಿ ಸ್ವರ್ಣ ಪಲ್ಲಕ್ಕಿ ಹಾಗೂ ಅಭಯ ಚೌಡೇಶ್ವರಿ ಬೆಳ್ಳಿ ಪಲ್ಲಕ್ಕಿ ಸೇರಿದಂತೆ ವಿವಿಧ ದೇವತೆಗಳ ಉತ್ಸವ ನಡೆಯಿತು. ಅಭಯ ಚೌಡೇಶ್ವರಿ ಮೆರವಣಿಗೆಯಲ್ಲಿ ಆಂಧ್ರ ಪ್ರದೇಶದ ಪ್ರಖ್ಯಾತ ಜ್ಯೋತಿ ಉತ್ಸವ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಇಲ್ಲಿನ ಇತಿಹಾಸ ಪ್ರಸಿದ್ಧ ಸಪ್ತ ಮಾತೃಕೆ ಮಾರಿಯಮ್ಮ ದೇವಿ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಬುದ್ಧ ಪೂರ್ಣಿಮೆಯಂದು ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ದೇವಾಲಯದಿಂದ ಹೊರ ಬಂದ ಕರಗ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಂಗಳವಾರ ದೇವಾಲಯಕ್ಕೆ ಮರಳಿತು.

ಸರ್ವಾಭರಣಗಳಿಂದ ಅಲಂಕೃತವಾಗಿದ್ದ ಕರಗವನ್ನು ಹೊತ್ತ ಪೂಜಾರಿ ಮುನಿರತ್ನಂ ಬಾಲಾಜಿ, ನೃತ್ಯ ಮಾಡುತ್ತಾ ಸಂಚರಿಸಿದರು. ತಮಟೆ ಹಾಗೂ ನಾದಸ್ವರ ವಾದನದ ಸದ್ದಿಗೆ ಪೂರಕವಾಗಿ ಹೆಜ್ಜೆ ಹಾಕುತ್ತಾ ಭಕ್ತಾದಿಗಳ ಮನಸೂರೆಗೊಂಡರು. ವಹ್ನಿಗರ ಪೇಟೆಯಲ್ಲಿರುವ ಮಾರಿಯಮ್ಮ ದೇವಾಲಯದಿಂದ ಹೊರಟ ಕರಗ, ನಾಗರಕೆರೆ ಬಳಿಯ ನಾರಾಯಣ ದೇಗುಲ, ಏಳುಸುತ್ತಿನ ಕೋಟೆ, ಪಿಳ್ಳೇಕಮ್ಮ ದೇಗುಲ, ಶ್ರೀ ಧರ್ಮರಾಯಸ್ವಾಮಿ ದೇವಾಲಯ, ಶ್ರೀ ನೆಲದಾಂಜನೇಯಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ಬಸ್‌ ನಿಲ್ದಾಣ ಬಳಿ ಟಿ.ಸಿದ್ದಲಿಂಗಯ್ಯ ವೃತ್ತಕ್ಕೆ ಆಗಮಿಸಿತು.

ನೆರೆದಿದ್ದ ದೇವತಾ ಉತ್ಸವ ಪಲ್ಲಕ್ಕಿಗಳು ಹಾಗೂ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಎತ್ತರದ ವೇದಿಕೆಯಲ್ಲಿ ಸುಮಾರು ಅರ್ಧಗಂಟೆ ಕಾಲ ಆಕರ್ಷಕ ಕರಗ ನೃತ್ಯ ನಡೆಯಿತು. ನೆಲದಾಂಜನೇಯ ದೇವಾಲಯ, ರಂಗಪ್ಪ ವೃತ್ತ, ಮುತ್ಯಾಲಮ್ಮ ದೇವಾಲಯ ಸೇರಿದಂತೆ ವಿವಿಧ ದೇವಾಲಯ ಹಾಗೂ ವೃತ್ತಗಳಲ್ಲಿ ಕರಗ ನೃತ್ಯ ಗಮನ ಸೆಳೆಯಿತು.

ಕರಗ ಇಲ್ಲಿನ ತೂಬಗೆರೆಪೇಟೆಯಲ್ಲಿ ಸಂಚರಿಸುತ್ತಿದ್ದ ವೇಳೆ ಮಧ್ಯರಾತ್ರಿ 2.45ರ ಸುಮಾರಿನಲ್ಲಿ ಭಾರೀ ಮಳೆ ಸುರಿಯಿತು. ಸುರಿವ ಮಳೆಯಲ್ಲೂ ಸಂಚರಿಸಿದ ಕರಗ ಭಕ್ತಾದಿಗಳ ಭಾವಪರವಶತೆಗೆ ಸಾಕ್ಷಿಯಾಯಿತು. ನಗರದ ಬಹುತೇಕ ಭಾಗಗಳಿಗೆ ಕರಗ ಮಂಗಳವಾರ ಬೆಳಗ್ಗೆ ಭೇಟಿ ನೀಡಿತ್ತು. ಮಧ್ಯಾಹ್ನ 3 ಗಂಟೆ ವೇಳೆಗೆ ಶಾಂತಿನಗರದ ಮುತ್ಯಾಲಮ್ಮ ದೇವಾಲಯಕ್ಕೆ ಭೇಟಿ ನೀಡಿತು.

ವಿವಿಧೆಡೆ ಅರವಂಟಿಕೆ:

ಕರಗದ ಅಂಗವಾಗಿ ಇಲ್ಲಿನ ಕೋಟೆ ರಸ್ತೆಯ ಗರಡಿ ಮನೆ, ಕೊಂಗಾಡಿಯಪ್ಪ ಮುಖ್ಯರಸ್ತೆಯ ಅಶ್ವತ್ಥಕಟ್ಟೆ ಮತ್ತಿತರ ಕಡೆಗಳಲ್ಲಿ ಕರಗ ಮಾದರಿಯನ್ನು ಮಾಡಿ ಪೂಜಿಸಲಾಗಿತ್ತು. ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ ಮಾಲೀಕರು, ಏಜೆಂಟರು ಹಾಗೂ ಚಾಲಕರ ಸಂಘ, ಇತರೆ ಸಂಘಟನೆಗಳ ಸಹಯೋಗದಲ್ಲಿ ದಿನಪೂರ್ತಿ ಅನ್ನ ಸಂತರ್ಪಣೆ ನಡೆಯಿತು.

ದೇವತಾ ಉತ್ಸವ:

ದೊಡ್ಡಬಳ್ಳಾಪುರ ಕರಗದ ಅಂಗವಾಗಿ ಶ್ರೀಸಪ್ತಮಾತೃಕೆ ಮಾರಿಯಮ್ಮ ಹಾಗೂ ಪಿಳ್ಳೇಕಮ್ಮ ಹೂವಿನ ಪಲ್ಲಕ್ಕಿ ಉತ್ಸವ, ನೆಲದಾಂಜನೇಯಸ್ವಾಮಿ ಬೆಳ್ಳಿ ಪಲ್ಲಕ್ಕಿ, ಕಾಳಿಕಾ ಕಮಟೇಶ್ವರ ಸ್ವಾಮಿ ಸ್ವರ್ಣ ಪಲ್ಲಕ್ಕಿ ಹಾಗೂ ಅಭಯ ಚೌಡೇಶ್ವರಿ ಬೆಳ್ಳಿ ಪಲ್ಲಕ್ಕಿ ಸೇರಿದಂತೆ ವಿವಿಧ ದೇವತೆಗಳ ಉತ್ಸವ ನಡೆಯಿತು. ಅಭಯ ಚೌಡೇಶ್ವರಿ ಮೆರವಣಿಗೆಯಲ್ಲಿ ಆಂಧ್ರ ಪ್ರದೇಶದ ಪ್ರಖ್ಯಾತ ಜ್ಯೋತಿ ಉತ್ಸವ ಗಮನ ಸೆಳೆಯಿತು.

ವಿಶೇಷ ಅಲಂಕಾರ:

ಕರಗದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ವಿದ್ಯುತ್‌ ದೀಪಗಳಿಂದ ರೂಪಿಸಲ್ಪಟ್ಟ ಬೃಹತ್‌ ದೇವಾನು ದೇವತೆಗಳ ಮಾದರಿಗಳು ಗಮನ ಸೆಳೆದವು. ಮಾರಿಯಮ್ಮ ದೇವಾಲಯಲ್ಲಿ ಮಲ್ಲಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು.