ಕನ್ನಡಪ್ರಭ ವಾರ್ತೆ ಬೆಳಗಾವಿ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಕೇವಲ ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಮಾತ್ರವಲ್ಲದೆ, ಸ್ಥಳೀಯ ಆರ್ಥಿಕ ಚಟುವಟಿಕೆಗಳ ಮೇಲೂ ತಟ್ಟಿದೆ. ಗ್ಯಾಸ್ ಸಿಲಿಂಡರ್ ಕೊರತೆ ನಡುವೆ ಇದೀಗ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮೇಲೂ ಪರಿಣಾಮ ಕಂಡುಬಂದಿದ್ದು, ತರಕಾರಿ ವ್ಯಾಪಾರ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೆಚ್ಚು ತರಕಾರಿ ಕೊಳ್ಳುವುದು ಹೋಟೆಲ್‌ಗಳನ್ನು ನಡೆಸುತ್ತಿದ್ದವರೇ. ಆದರೆ, ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧವಾಗುತ್ತಿರುವುದರಿಂದ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸಹಜವಾಗಿ ತರಕಾರಿ ಕೊಳ್ಳುವವರಿಲ್ಲದೆ, ಬೇರೆ ರಾಜ್ಯಗಳಿಗೂ ಹೋಗದೆ ಎಪಿಎಂಸಿಯಲ್ಲಿಯೇ ಕೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಕೂಡ ತೀವ್ರ ಚಿಂತೆಗೆ ಈಡಾಗಿದ್ದಾರೆ.ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಿಂದಲೇ ಪ್ರತಿದಿನ ತರಕಾರಿ ಪೂರೈಕೆಯಾಗುತ್ತದೆ. ಗಜ್ಜರಿ (ಕ್ಯಾರೆಟ್), ಟೊಮೆಟೊ, ಮೆಣಸಿನಕಾಯಿ, ಬೀನ್ಸ್, ಬದನೆಕಾಯಿ, ಬೀಟ್‌ರೂಟ್, ಈರುಳ್ಳಿ ಸೇರಿದಂತೆ ಹಲವು ತರಕಾರಿಗಳು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಆಗಮಿಸುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಖರೀದಿಗೆ ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಗಣನೀಯವಾಗಿ ಕುಸಿದಿವೆ.ಕುಸಿತಕ್ಕೆ ಏನು ಕಾರಣ?:
ಸಾಮಾನ್ಯವಾಗಿ ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಿಂದ ಪ್ರತಿದಿನ ಸುಮಾರು 100 ಲಾರಿಗಳಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಮಂಗಳೂರಿನ ಕಡೆ ತರಕಾರಿ ಪೂರೈಕೆಯಾಗುತ್ತದೆ. ಆದರೆ ಕಳೆದ ಎರಡು ದಿನಗಳಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತವಾಗಿದೆ. ಹೀಗಾಗಿ ಹೋಟೆಲ್ ಉದ್ಯಮಿಗಳು ತರಕಾರಿ ಖರೀದಿಗೆ ಮುಂದೆ ಬರುತ್ತಿಲ್ಲ. ಗೃಹ ಬಳಕೆಗೆ ಮಾತ್ರ ತರಕಾರಿ ಕೊಳ್ಳುವವರು ಇದ್ದಾರೆ. ಪರಿಣಾಮವಾಗಿ ಈಗ ಕೇವಲ ಶೇ.50ರಷ್ಟು ಮಾತ್ರ ತರಕಾರಿ ಸಾಗಾಟ ನಡೆಯುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿ ಆವಕ ಪ್ರಮಾಣ ಹೆಚ್ಚಳವಾಗಿದೆ, ಹೊರಗೆ ಹೋಗುತ್ತಿರುವ ಪ್ರಮಾಣ ಕಡಿಮೆಯಾಗಿರುವುದರಿಂದ ಸಹಜವಾಗಿ ತರಕಾರಿ ಬೆಲೆ ಪಾತಾಳಕ್ಕಿಳಿದಿದೆ.ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯಿಂದಾಗಿ ಜಾಗತಿಕ ವ್ಯಾಪಾರ ಚಟುವಟಿಕೆಗಳಲ್ಲಿ ಅನಿಶ್ಚಿತತೆ ಉಂಟಾಗಿದೆ. ಸಾರಿಗೆ ವೆಚ್ಚದ ಏರಿಕೆ ಹಾಗೂ ಸರಬರಾಜು ವ್ಯವಸ್ಥೆಯ ಅಡಚಣೆಗಳಿಂದ ಸ್ಥಳೀಯ ಮಾರುಕಟ್ಟೆಗಳ ಮೇಲೂ ಅದರ ಪರಿಣಾಮ ಕಂಡುಬರುತ್ತಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ದೂರದ ಗ್ರಾಮಗಳಿಂದ ತರಕಾರಿ ತಂದು ಮಾರುಕಟ್ಟೆಗೆ ಮಾರಾಟಕ್ಕೆ ಬಂದಿರುವ ರೈತರು ಸರಿಯಾದ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ತರಕಾರಿಗಳು ಉತ್ಪಾದನಾ ವೆಚ್ಚಕ್ಕೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದರಿಂದ ರೈತರು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಪರಿಸ್ಥಿತಿ ಮುಂದುವರಿದರೆ ರೈತರಿಗೆ ದೊಡ್ಡಮಟ್ಟದ ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಸರ್ಕಾರ ಮಧ್ಯಪ್ರವೇಶಿಸಿ ಸಿಲಿಂಡರ್ ಕೊರತೆಯನ್ನು ನಿವಾರಿಸುವುದರ ಜೊತೆಗೆ ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ತರಕಾರಿ ವ್ಯಾಪಾರ ಕುಂಠಿತ:
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಸಿಲಿಂಡರ್ ಸೇರಿದಂತೆ ಸ್ಥಳೀಯ ಮಾರುಕಟ್ಟೆಯಲ್ಲೂ ಸಮಸ್ಯೆಗಳು ಎದುರಾಗಿವೆ. ಹೋಟೆಲ್ ಉದ್ಯಮಗಳಿಗೆ ಸಿಲಿಂಡರ್ ಪೂರೈಕೆ ಆಗದ ಕಾರಣ ತರಕಾರಿ ವ್ಯಾಪಾರ ಕುಂಠಿತವಾಗಿದೆ. ಮೊದಲು ಗೋವಾ ಮತ್ತು ಮಹಾರಾಷ್ಟ್ರಕ್ಕೆ ದಿನಕ್ಕೆ ಸುಮಾರು 100 ಲಾರಿಗಳಲ್ಲಿ ತರಕಾರಿ ಸರಬರಾಜು ಆಗುತ್ತಿತ್ತು. ಈಗ ಕೇವಲ 50 ಲಾರಿಗಳು ಮಾತ್ರ ಹೋಗುತ್ತಿವೆ. ಇದರಿಂದಾಗಿ ವ್ಯಾಪಾರಿಗಳು ಮತ್ತು ರೈತರು ಇಬ್ಬರೂ ಸಂಕಷ್ಟ ಅನುಭವಿಸುವಂತಾಗಿದೆ ಎಂದು ವ್ಯಾಪಾರಿ ಸತೀಶ ಪಾಟೀಲ ತಿಳಿಸಿದ್ದಾರೆ.ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ತರಕಾರಿ ಬೆಲೆ ಕುಸಿತ ಕಂಡಿದೆ. ವ್ಯಾಪಾರ ಅರ್ಧಕ್ಕರ್ಧ ಇಳಿದಿದೆ. ಕೂಡಲೇ ಸಿಲಿಂಡರ್ ಕೊರತೆ ನೀಗಿಸಿ, ರೈತರಿಗೆ ಬೆಳೆದ ಬೆಳೆಗೆ ಸಮರ್ಪಕ ದರ ಸಿಗುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.