ಸಾರಾಂಶ
ವಿದ್ಯಾರ್ಥಿಗಳು ಚನ್ನರಾಯಪಟ್ಟಣ ತಾಲೂಕು ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕೆ ಹೋಗಲು ಬೆಳಗಿನ ವೇಳೆಯಲ್ಲಿ ಬಸ್ ವ್ಯವಸ್ಥೆ ಇಲ್ಲದೆ ದಿನನಿತ್ಯ ಪರದಾಡುವ ಪರಿಸ್ಥಿತಿ ತಲೆದೋರಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆಎಸ್ಆರ್‌ಟಿಸಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನು ಪ್ರಯೋಜನವಾಗಿಲ್ಲ. ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 8:30ರವರೆಗೆ ಕೇವಲ 2ರಿಂದ 3 ಬಸ್ಸುಗಳು ಮಾತ್ರ ತಿಪಟೂರು ಹಾಗೂ ತುರುವೇಕೆರೆ ಹಾಗೂ ಸ್ಥಳೀಯ ಮಾರ್ಗದಿಂದ ಸಂಚರಿಸುವುದರಿಂದ ಹೋಬಳಿ ಕೇಂದ್ರಕ್ಕೆ ಬರುವ ಮೊದಲೇ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿಯಿಂದಾಗಿ ಎಲ್ಲಾ ಬಸ್ಸುಗಳು ಸಂಪೂರ್ಣ ಭರ್ತಿಯಾಗಿ ಬರುತ್ತವೆ.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿ ಕೇಂದ್ರದಿಂದ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಚನ್ನರಾಯಪಟ್ಟಣಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲು ಬೆಳಗಿನ ವೇಳೆಯಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೋಬಳಿ ಕೇಂದ್ರ ವ್ಯಾಪ್ತಿಯ ಅನೇಕ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಚನ್ನರಾಯಪಟ್ಟಣ ತಾಲೂಕು ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕೆ ಹೋಗಲು ಬೆಳಗಿನ ವೇಳೆಯಲ್ಲಿ ಬಸ್ ವ್ಯವಸ್ಥೆ ಇಲ್ಲದೆ ದಿನನಿತ್ಯ ಪರದಾಡುವ ಪರಿಸ್ಥಿತಿ ತಲೆದೋರಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆಎಸ್ಆರ್‌ಟಿಸಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನು ಪ್ರಯೋಜನವಾಗಿಲ್ಲ. ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 8:30ರವರೆಗೆ ಕೇವಲ 2ರಿಂದ 3 ಬಸ್ಸುಗಳು ಮಾತ್ರ ತಿಪಟೂರು ಹಾಗೂ ತುರುವೇಕೆರೆ ಹಾಗೂ ಸ್ಥಳೀಯ ಮಾರ್ಗದಿಂದ ಸಂಚರಿಸುವುದರಿಂದ ಹೋಬಳಿ ಕೇಂದ್ರಕ್ಕೆ ಬರುವ ಮೊದಲೇ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿಯಿಂದಾಗಿ ಎಲ್ಲಾ ಬಸ್ಸುಗಳು ಸಂಪೂರ್ಣ ಭರ್ತಿಯಾಗಿ ಬರುತ್ತವೆ. ಆದರೆ ದಿನನಿತ್ಯ ಇಲ್ಲಿನ ಬಸ್ ನಿಲ್ದಾಣದಲ್ಲಿ ಕಾಯುವ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರಾಣದ ಹಂಗನ್ನು ತೊರೆದು ಬಸನ್ ಫೂಟ್ ಬೋರ್ಡ್ ಮೇಲೆ ನಿಂತು ಚನ್ನರಾಯಪಟ್ಟಣಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಬೆಳಗಿನ ಈ ವೇಳೆಯಲ್ಲಿ ಚನ್ನರಾಯಪಟ್ಟಣ ಡಿಪೋದಿಂದ ಕನಿಷ್ಠ 2 ಬಸ್ ವ್ಯವಸ್ಥೆಗಳನ್ನು ಮಾಡುವಂತೆ ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್ ಅಧಿಕಾರಿಗಳನ್ನು ಒತ್ತಾಯಿಸಿದರು.ಹೋಬಳಿ ಕೇಂದ್ರದ ವ್ಯಾಪ್ತಿಯ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಶಾಲೆ ಕಾಲೇಜುಗಳಿಗೆ ತೆರಳಲು ಸಾಧ್ಯವಾಗದೆ ಕೆಲವು ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ತೊಂದರೆಯಾಗುತ್ತಿದೆ. ಆದಕಾರಣ ಶೀಘ್ರ ಬಸ್ ವ್ಯವಸ್ಥೆ ಕಲ್ಪಿಸುವಂತೆ ಧರ್ಮಸ್ಥಳ ಪಾದಯಾತ್ರೆ ಸಮಿತಿ ಅಧ್ಯಕ್ಷ ಹೋಟೆಲ್ ರಾಜಣ್ಣ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದರು.