ಅಭಿವೃದ್ಧಿ ಯೋಜನೆಗಳು ಕೇವಲ ಸರ್ಕಾರದ ಕಾರ್ಯಕ್ರಮಗಳಾಗಿ ಉಳಿಯದೆ, ಜನರ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆಯಿಂದ ರೂಪುಗೊಳ್ಳುವ ಜನರ ಯೋಜನೆಗಳಾಗಬೇಕು.
ಕನ್ನಡಪ್ರಭ ವಾರ್ತೆ ಗದಗ
ಅಭಿವೃದ್ಧಿ ಯೋಜನೆಗಳು ಕೇವಲ ಸರ್ಕಾರದ ಕಾರ್ಯಕ್ರಮಗಳಾಗಿ ಉಳಿಯದೆ, ಜನರ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆಯಿಂದ ರೂಪುಗೊಳ್ಳುವ ಜನರ ಯೋಜನೆಗಳಾಗಬೇಕು. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಜನರ ಸಹಭಾಗಿತ್ವವೇ ಪ್ರಮುಖವಾಗಿದ್ದು, ಈ ಉದ್ದೇಶದಿಂದ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ಮುಂದಾಗಿದೆ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದ ಆದರ್ಶ ಗ್ರಾಮವಸತಿ ಸಭೆಯಲ್ಲಿ ಮಾತನಾಡಿದರು. ಗ್ರಾಮಸ್ಥರ ಆಶಯದಂತೆ ಗ್ರಾಮಾಭಿವೃದ್ಧಿ ಯೋಜನೆ ರೂಪಿಸುವುದು ಜನವಸತಿ ಸಭೆಗಳ ಮುಖ್ಯ ಉದ್ದೇಶವಾಗಿದೆ. ಯೋಜನೆಗಳ ರೂಪಿಸುವಿಕೆ ಮತ್ತು ಅನುಷ್ಠಾನದಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳ ಮೊದಲ ಸಭೆಯಲ್ಲಿಯೇ ಸೂಚನೆ ನೀಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಜನವಸತಿ ಸಭೆ, ವಾರ್ಡ್ ಸಭೆ, ಗ್ರಾಮಸಭೆ ಹಾಗೂ ಗ್ರಾಮ ಪಂಚಾಯಿತಿ ಸಭೆಗಳ ಮೂಲಕ ಅಭಿವೃದ್ಧಿಯ ಆದ್ಯತೆಗಳನ್ನು ನಿರ್ಧರಿಸಲಾಗುತ್ತದೆ. ಜನರ ಅಭಿಪ್ರಾಯದ ಆಧಾರದಲ್ಲಿಯೇ ಯೋಜನೆಗಳು ರೂಪುಗೊಳ್ಳಲಿದ್ದು, ಫಲಾನುಭವಿಗಳ ಆಯ್ಕೆಯೂ ಗ್ರಾಮಸಭೆಯ ನಿರ್ಧಾರದಂತೆ ನಡೆಯಲಿದೆ. ಇದರಿಂದ ಗ್ರಾಮಗಳ ನೈಜ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಬಿಂಕದಕಟ್ಟಿ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ರೂಪಿಸಲು ಜನರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ. ಬಡತನಮುಕ್ತ, ಸುಧಾರಿತ ಜೀವನಮಟ್ಟ ಹೊಂದಿರುವ, ಮಕ್ಕಳ ಸ್ನೇಹಿ, ಸಮೃದ್ಧ, ಸ್ವಚ್ಛ ಹಾಗೂ ಹಸಿರು ಗ್ರಾಮ ಪಂಚಾಯಿತಿ ನಿರ್ಮಾಣದ ಜತೆಗೆ ನ್ಯಾಯಯುತ ಮತ್ತು ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಗ್ರಾಮದಲ್ಲಿ ಸಮೃದ್ಧ ನೀರಿನ ಸಂಪನ್ಮೂಲವಿದ್ದು, ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಭಾಗಗಳಿಗೆ ತುಂಗಭದ್ರಾ ನೀರು ಪೂರೈಕೆಯಾಗುತ್ತಿದೆ. ಈ ನೀರನ್ನು ಬಿಂಕದಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೂ ಸಮರ್ಪಕವಾಗಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಕುಡಿಯುವ ನೀರಿನ ಗುಣಮಟ್ಟ ರಾಷ್ಟ್ರೀಯ ಮಾನದಂಡಗಳಿಗೆ ಸಮಾನವಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.ಮಕ್ಕಳು ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದಷ್ಟೇ ಅಲ್ಲದೆ, ಆಟವಾಡಲು ವಿಶಾಲವಾದ ಮೈದಾನ ಹಾಗೂ ಅಗತ್ಯ ಸೌಲಭ್ಯಗಳನ್ನು ಹೊಂದಿರಬೇಕು. ಮಕ್ಕಳಿಗೆ ಓದಲು ಪ್ರತ್ಯೇಕ ಕೊಠಡಿಗಳು ಮತ್ತು ಉತ್ತಮ ವಾತಾವರಣ ಕಲ್ಪಿಸಿದಾಗ ಅವರ ಜೀವನ ಉತ್ತಮವಾಗಿ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದ ಅವರು,
ಬಿಂಕದಕಟ್ಟಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ಕುರಿತು ಜನರಲ್ಲಿ ಇದ್ದ ಆತಂಕವನ್ನು ನಿವಾರಿಸುವ ಪ್ರಯತ್ನ ಮಾಡಲಾಗಿದೆ. ಅರಣ್ಯ ಜಾಗದ ಹೆಸರಿನಲ್ಲಿ ಮನೆಗಳನ್ನು ತೆರವುಗೊಳಿಸಲಾಗುತ್ತದೆ ಎಂಬ ಭಯದ ವಾತಾವರಣವಿತ್ತು. ಜನರ ಆತಂಕ ದೂರವಾಗುವಂತೆ ಕ್ರಮ ಕೈಗೊಂಡಿದ್ದು, ಅರಣ್ಯ ಇಲಾಖೆ ವಶದಲ್ಲಿದ್ದ ಜಾಗವನ್ನು ಮರಳಿ ನೀಡಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರವಿ ಮೂಲಿಮನಿ, ಜಿ.ಕೆ. ಜಮಾದಾರ, ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.