ತುಂಗಭದ್ರಾ ಜಲಾಶಯದ ಹೂಳಿಗೆ ಸಿಗುವುದೇ ಮುಕ್ತಿ!

| Published : Feb 13 2024, 12:51 AM IST

ಸಾರಾಂಶ

ಮಳೆಗಾಲದಲ್ಲಿ ವ್ಯರ್ಥವಾಗಿ ನದಿ ಸೇರುವ ನೀರಿನಲ್ಲಿ 40 ಟಿಎಂಸಿಯಷ್ಟು ನೀರನ್ನು ಸರ್ಕಾರ ಉಳಿಸಿದಂತಾಗಲಿದೆ. ಇದರಿಂದ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ರೈತರಿಗೂ ಅನುಕೂಲ ಆಗಲಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿರುವುದರಿಂದ; ಪರ್ಯಾಯ ಜಲಾಶಯ ನಿರ್ಮಾಣದ ಕೂಗು ಈ ಭಾಗದ ರೈತರಲ್ಲಿದೆ. ಪ್ರತಿ ಬಾರಿ ಬಜೆಟ್‌ನಲ್ಲಿ ಪ್ರಸ್ತಾವನೆಯಾದರೂ ಪ್ರಗತಿ ಮಾತ್ರ ಶೂನ್ಯವಾಗಿದೆ. ಹಾಗಾಗಿ ಈ ಬಾರಿ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಲಾಶಯದ ಹೂಳಿನ ಗೋಳಿಗೆ ಮುಕ್ತಿ ಕಲ್ಪಿಸಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಪರ್ಯಾಯ ಜಲಾಶಯ ನಿರ್ಮಾಣಕ್ಕೆ ಅಸ್ತು ಎನ್ನುವರೇ ಎಂಬ ಆಶಯ ರೈತರಲ್ಲಿ ಮೊಳೆತಿದೆ.

ತುಂಗಭದ್ರಾ ಜಲಾಶಯದ ನಿರ್ಮಾಣ ಕಾಲಕ್ಕೆ 133 ಟಿಎಂಸಿಯಷ್ಟು ನೀರು ಸಿಗುತ್ತಿತ್ತು. ಈಗ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿಯಷ್ಟಿದ್ದು, ಈಗ ಸರ್ವೆ ಮಾಡಿದರೆ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 100 ಟಿಎಂಸಿಗೆ ಇಳಿಯಲಿದೆ. ಹಾಗಾಗಿ 33 ಟಿಎಂಸಿಯಷ್ಟು ಜಲಾಶಯದಲ್ಲಿ ಹೂಳು ತುಂಬಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ಈ ಹಿಂದೆ ರೈತರು ನಡೆಸಿದ ಹೋರಾಟದ ಫಲವಾಗಿ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ, ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ, ಯಡಿಯೂರಪ್ಪ ಸರ್ಕಾರ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರಗಳು ಪರ್ಯಾಯ ಜಲಾಶಯದತ್ತ ಮುಖ ಮಾಡಿವೆ. ಕೊಪ್ಪಳದ ನವಲಿ ಬಳಿ 40 ಟಿಎಂಸಿಯಷ್ಟು ನೀರು ಉಳಿಸಲು ಪರ್ಯಾಯ ಜಲಾಶಯದ ನಿರ್ಮಾಣದತ್ತ ಸರ್ಕಾರಗಳು ಮನಸ್ಸು ಮಾಡಿವೆ. ಹಿಂದಿನ ಬಜೆಟ್‌ನಲ್ಲೂ ಈ ಬಗ್ಗೆ ಸಿದ್ದರಾಮಯ್ಯನವರು ಪ್ರಸ್ತಾಪ ಮಾಡಿದ್ದರು. ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳ ಮನವೊಲಿಸಿ, ಕೇಂದ್ರದೊಂದಿಗೆ ಚರ್ಚಿಸಿ ಪರ್ಯಾಯ ಜಲಾಶಯ ನಿರ್ಮಾಣ ಮಾಡಬೇಕಿದೆ. ಇದರಿಂದ ತುಂಗಭದ್ರಾ ಜಲಾಶಯದ ಮೇಲಿನ ಒತ್ತಡವೂ ಕಡಿಮೆ ಆಗಲಿದೆ. ಈ ಮೂಲಕ ರೈತರಿಗೆ ಎರಡು ಬೆಳೆಗಳಿಗೂ ನೀರು ಸಿಗಲಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ನದಿ ಸೇರುವ ನೀರಿನಲ್ಲಿ 40 ಟಿಎಂಸಿಯಷ್ಟು ನೀರನ್ನು ಸರ್ಕಾರ ಉಳಿಸಿದಂತಾಗಲಿದೆ. ಇದರಿಂದ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ರೈತರಿಗೂ ಅನುಕೂಲ ಆಗಲಿದೆ.

ಕೆರೆಗಳ ತುಂಬಿಸಲಿ: ವಿಜಯನಗರ ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶವೇ ಹೆಚ್ಚಿದೆ. ಹಾಗಾಗಿ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಹಾಗೂ ಏತ ನೀರಾವರಿ ಯೋಜನೆಗೆ ಸರ್ಕಾರ ಅಸ್ತು ಎನ್ನಲಿದೆಯೇ ಎಂಬುದನ್ನು ರೈತರು ಎದುರು ನೋಡುತ್ತಿದ್ದಾರೆ. ಹರಿಹರ ಭಾಗದಲ್ಲಿ ಒಂದು ಬಾಂದಾರ್ ನಿರ್ಮಿಸಿ ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕುಗಳಿಗೆ ನೀರನ್ನು ಸರ್ಕಾರ ಒದಗಿಸಲಿದೆಯೇ ಎಂಬುದನ್ನು ಜಿಲ್ಲೆಯ ರೈತರು ಸಿದ್ದರಾಮಯ್ಯ ಸರ್ಕಾರದ ಬಜೆಟ್‌ನಲ್ಲಿ ನಿರೀಕ್ಷೆ ಇಟ್ಟಿದ್ದಾರೆ.

ಸಕ್ಕರೆ ಕಾರ್ಖಾನೆಯತ್ತ ಚಿತ್ತ: ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಹಂಪಿ ಶುಗರ್ಸ್‌ ಎಂಬ ಖಾಸಗಿ ಕಂಪನಿ ಆರಂಭಿಸಲು ಅಸ್ತು ಎನ್ನಲಾಗಿತ್ತು. ಆದರೆ, ಸರ್ಕಾರಿ ಜಮೀನು ಖಾಸಗಿಯವರಿಗೆ ನೀಡಲಾಗಿದೆ ಎಂದು ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಈ ಕಾರ್ಖಾನೆ ಆರಂಭಗೊಂಡಿಲ್ಲ. ಈಗ ಹೊಸಪೇಟೆಯ ನಾಗೇನಹಳ್ಳಿ ಭಾಗದಲ್ಲಿ ಸರ್ಕಾರಿ ಜಮೀನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಸರ್ಕಾರಿ, ಸಹಕಾರಿ ಇಲ್ಲವೇ ಖಾಸಗಿ ಸಕ್ಕರೆ ಆರಂಭವಾಗಲಿದೆಯೇ ಎಂಬುದನ್ನು ರೈತರು ಎದುರು ನೋಡುತ್ತಿದ್ದಾರೆ. ಹೊಸಪೇಟೆ, ಕಮಲಾಪುರ ಭಾಗದಲ್ಲಿ 4 ಲಕ್ಷಕ್ಕೂ ಅಧಿಕ ಟನ್‌ ಕಬ್ಬು ಉತ್ಪಾದನೆಯಾಗುತ್ತಿದೆ. ಕಬ್ಬು ಬೆಳೆಯುವ ರೈತರು ಸರ್ಕಾರದ ನಿರ್ಧಾರ ಎದುರು ನೋಡುತ್ತಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ, ಕೃಷಿ ಕಾಲೇಜು: ವಿಜಯನಗರ ಜಿಲ್ಲೆಯ ರೈತರ ನೆರವಿಗಾಗಿ ಈ ಭಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ನಿರ್ಮಿಸಬೇಕಿದೆ. ಜಿಲ್ಲೆಗೊಂದು ಕೃಷಿ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶವೂ ಆಗಿದೆ. ಆದರೆ, ಜಿಲ್ಲೆಯಾಗಿ ಮೂರು ವರ್ಷ ಕಳೆದರೂ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಕಾಲೇಜು ಆರಂಭಗೊಂಡಿಲ್ಲ. ಹಾಗಾಗಿ ರೈತರು ಕೃಷಿ ಕಾಲೇಜು ಹಾಗೂ ಕೆವಿಕೆ ಆರಂಭಕ್ಕೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಲಿದೆಯೇ ಎಂಬುದನ್ನು ಎದುರು ನೋಡುತ್ತಿದ್ದಾರೆ.ಹಸಿರು ನಿಶಾನೆ: ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಜಲಾಶಯ ನಿರ್ಮಾಣ ಕಾರ್ಯ ಆಗಬೇಕಿದೆ. ಜತೆಗೆ ಹೂಳು ಕೂಡ ತೆಗೆಸಬೇಕು. ಕೃಷಿ ವಿಜ್ಞಾನ ಕೇಂದ್ರ, ಕೃಷಿ ಕಾಲೇಜು ಆರಂಭಿಸಬೇಕು. ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿ ಈ ಭಾಗದ ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಕಲ್ಪಿಸಬೇಕು. ಜಿಲ್ಲೆಯ ಒಣಭೂಮಿ ಪ್ರದೇಶಕ್ಕೆ ನೀರಾವರಿ ಪ್ರದೇಶವನ್ನಾಗಿಸಲು ಬಾಂದಾರ್‌ ನಿರ್ಮಾಣ, ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ ಯೋಜನೆಗಳಿಗೆ ಸರ್ಕಾರ ಹಸಿರು ನಿಶಾನೆ ತೋರಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ತಿಳಿಸಿದರು.