ಸಾರಾಂಶ
ಹಾವೇರಿ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಶ್ರಮ ಸಂಸ್ಕೃತಿ, ಕಾಯಕ ನಿಷ್ಠೆ, ತ್ಯಾಗ ಮನೋಭಾವ, ಸರಳ ಬದುಕು ಇಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗಿದೆ ಎಂದು ಹೊಸಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.ನಗರದ ಹೊಸಮಠದಲ್ಲಿ ಏರ್ಪಡಿಸಿದ್ದ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬದುಕಿನಲ್ಲಿ ಹೆಜ್ಜೆ ಗುರುತನ್ನು ಉಳಿಸಿ ಹೋಗುವುದು ನಡಿಗೆಯಿಂದಲ್ಲ, ನಡತೆಯಿಂದ. ಜ್ಞಾನ ಮತ್ತು ಸಂಸ್ಕಾರ ಜೀವನದ ಶಕ್ತಿ.ಬಸವಾದಿ ಶರಣರ ವಚನ ಪಠಣ ಮತ್ತು ಸತ್ಸಂಗದ ಸಾಮೀಪ್ಯದಿಂದ ಮನುಷ್ಯ ಸುಖಿಯಾಗಿರಬಹುದು ಎಂದರು. ಆಧುನಿಕತೆಯ ಭರಾಟೆಯಲ್ಲಿ ಮನುಷ್ಯ ವಿಚಲಿತನಾಗಿದ್ದಾನೆ. ಸರಳತೆಯ ಬದುಕಿಗೆ ಬೆಳಕಾಗಿರುವ ಶರಣರ ಚಿಂತನೆಗಳು ಸನ್ಮಾರ್ಗ ತೋರಬಲ್ಲವು. ಬದುಕಿನ ಸಂಕಟಗಳನ್ನು ಮೀರಿ ಮುನ್ನಡೆಯಲು ಸಹಕಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಶರಣ ಸಂಗಮ ಕಾರ್ಯಕ್ರಮ ಅರ್ಥಪೂರ್ಣ ವೇದಿಕೆಯಾಗಿದೆ ಎಂದರು.ಸಮಾಜ ಸೇವಕ ನಬೀಸಾಬ ಮೆಳ್ಳೆಗಟ್ಟಿ ಮಾತನಾಡಿ, ಮನುಷ್ಯ ಬದುಕಿನಲ್ಲಿ ಆಸೆ ಮತ್ತು ಆಮಿಷಗಳನ್ನು ಮೀರಿ ಸಾಗಬೇಕಿದೆ. ದೇವರು ನಮಗೆ ಕೊಟ್ಟ ಅವಕಾಶವನ್ನು ಬಳಸಿಕೊಳ್ಳಬೇಕು. ಜೊತೆಗೆ ಜೀವನದಲ್ಲಿ ಗಳಿಸಿದ ಸಂಪತ್ತಿನ ಪ್ರಮಾಣದಲ್ಲಿ ಸ್ಪಲ್ಪ ಸಮಾಜಕ್ಕೂ ವಿನಿಯೋಗಿಸಬೇಕು. ಆಗ ಮಾತ್ರ ಸಂತೃಪ್ತ ಬದುಕು ನಮ್ಮದಾಗಬಲ್ಲದು ಎಂದರು.ಶ್ರೀ ಮೌನೇಶ್ವರ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಈರಣ್ಣ ಬೆಳವಡಿ ಮಾತನಾಡಿ, ಮಠ ಪರಂಪರೆಯಲ್ಲಿ ಬೆಳೆದಿರುವ ನನಗೆ ಗುರುವಿನ ಮಾರ್ಗದರ್ಶನ ಸಿಕ್ಕಿತ್ತು.ಅದೇ ಕಾರಣಕ್ಕೆ ನಾನು ಅರಿವಿನ ಬದುಕು ಸವೆಸಿದೆ. ಅದಕ್ಕಾಗಿ ನನಗೆ ಹೆಮ್ಮೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಿವೃತ್ತ ಶಿಕ್ಷಕಿ ಉಚ್ಚಂಗೆಮ್ಮ ಬೈರಮ್ಮನವರ ಹಾಗೂ ಮಾತೆ ಸಾವಿತ್ರಿಬಾಯಿ ಪುಲೇ ಸಂಘದ ತಾಲೂಕಾಧ್ಯಕ್ಷೆ ಅಕ್ಕಮಹಾದೇವಿ ಕಬ್ಬಿಣಕಂತಿಮಠ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾರಕೇಶ ಮಠದ ಅವರನ್ನು ಶ್ರೀಮಠದಿಂದ ಸನ್ಮಾನಿಸಿ, ಗೌರವಿಸಲಾಯಿತು.ಬಳಿಕ ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು. ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಅಕ್ಕನ ಬಳಗದ ಮಹಿಳೆಯರು ಇದ್ದರು.