ಗೆಜ್ಜಲಗೆರೆ ಗ್ರಾಪಂ ಅನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ವಿರೋಧಿಸಿ ಗ್ರಾಮಸ್ಥರು ರೈತರು, ಮಹಿಳಾ ಸಂಘಟನೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಬೆಂಬಲದೊಂದಿಗೆ ಗ್ರಾಪಂ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 14ನೇ ದಿನವೂ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಗೆಜ್ಜಲಗೆರೆ ಗ್ರಾಪಂ ಅನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ವಿರೋಧಿಸಿ ಗ್ರಾಮಸ್ಥರು ರೈತರು, ಮಹಿಳಾ ಸಂಘಟನೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಬೆಂಬಲದೊಂದಿಗೆ ಗ್ರಾಪಂ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 14ನೇ ದಿನವೂ ಮುಂದುವರೆದಿದೆ.

ಕ್ಷೇತ್ರದ ಶಾಸಕರ ವಿರುದ್ಧ ಚಳವಳಿ ತೀವ್ರಗೊಳಿಸಲು ಧರಣಿ ನಿರತರು ನಿರ್ಧರಿಸಿದ್ದು, ಹೋರಾಟದ ಮೊದಲ ಹಂತವಾಗಿ ಗೆಜ್ಜಲಗೆರೆ ಗ್ರಾಮ ಸೇರಿದಂತೆ ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದನ್ನು ಕೈ ಬಿಡುವಂತೆ ಒತ್ತಾಯಿಸಿಶಾಸಕ ಕೆ.ಎಂ. ಉದಯ್ ವಿರುದ್ಧ ಪತ್ರ ಚಳವಳಿಗೆ ಹೋರಾಟಗಾರರು ಭಾನುವಾರ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಧರಣಿಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಹಸ್ತಾಕ್ಷರದೊಂದಿಗೆ ಶಾಸಕರ ನಿಲುವನ್ನು ವಿರೋಧಿಸಿ ಪತ್ರ ಬರೆದು ಅಂಚೆ ಮೂಲಕ ಮದ್ದೂರು ತಾಲೂಕು ಕಚೇರಿ ಆವರಣದ ಶಾಸಕರ ಕಚೇರಿಗೆ ರವಾನಿಸಲು ತೀರ್ಮಾನ ಕೈಗೊಂಡಿದ್ದಾರೆ.

ರೈತ ಪರ ಹೋರಾಟಗಾರ್ತಿ ಸುನಂದ ಜಯರಾಮ ಸೇರಿದಂತೆ ಅನೇಕ ಮುಖಂಡರು ಮಾತನಾಡಿ, ಶಾಸಕರ ಬೆಂಬಲಿಗರಾದ ಕಾಂಗ್ರೆಸ್ ನ ಮಾಜಿ ನಗರಸಭಾಧ್ಯಕ್ಷ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ಸದಸ್ಯರು ಸಹಮತ ವ್ಯಕ್ತಪಡಿಸಿರುವುದನ್ನು ತೀವ್ರವಾಗಿ ವಿರೋಧಿಸಿದರು. ಶಾಸಕರಿಗೆ ಇಚ್ಛಾಶಕ್ತಿ ಇದ್ದರೆ ತಮ್ಮ ಮತ್ತು ಸರ್ಕಾರದ ದೊರಕುವ ಅನುದಾನದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂದು ಬುದ್ಧಿವಾದ ಹೇಳಿದರು.

ನಗರಸಭಾ ಮಾಜಿ ಸದಸ್ಯರುಗಳು ಶಾಸಕರನ್ನು ಮೆಚ್ಚಿಸಲು ಬಕೆಟ್ ಹಿಡಿಯುವ ಕೆಲಸ ಒಂದು ಮೊದಲು ಬಿಡಬೇಕು. ಇಲ್ಲವಾದಲ್ಲಿ ಹೋರಾಟಗಾರರು ಈ ಎಲ್ಲರನ್ನೂ ನಗರಸಭಾ ಕಚೇರಿ ಬಳಿ ಕರೆಸಿ ಛೀಮಾರಿ ಹಾಕಿ ಘೇರಾವ್ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ರಾಧಾ, ಸದಸ್ಯರು, ಗೆಜ್ಜಲಗೆರೆ ಗ್ರಾಮ ಘಟಕದ ರೈತ ಸಂಘದ ಅಧ್ಯಕ್ಷ ಜಿ.ಎಸ್.ರಾಮಲಿಂಗಯ್ಯ, ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ಎ.ಶಂಕರ್, ತಾಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಮುಖಂಡರಾದ ಜಿ.ಟಿ.ಚಂದ್ರಶೇಖರ್, ಜಿ.ಎಚ್.ವೀರಪ್ಪ, ಜಿ.ಕೆ.ಗುರುಮೂರ್ತಿ ಸೇರಿದಂತೆ ರೈತ ಮಹಿಳೆಯರು ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.