ಸಾರಾಂಶ
ಶಿವಾನಂದ ಮಲ್ಲನಗೌಡ್ರ
ಕನ್ನಡಪ್ರಭ ವಾರ್ತೆ ಬ್ಯಾಡಗಿಕಳೆದ 2014-15ರಲ್ಲಿ ಚಾಲನೆ ಸಿಕ್ಕಿದ್ದ ಶಿಕ್ಷಕರ ಮಹತ್ವಾಕಾಂಕ್ಷಿ ಗುರುಭವನ ನಿರ್ಮಾಣ ಯೋಜನೆ ಸ್ಥಗಿತಗೊಂಡಿದ್ದು, ನಿರ್ವಹಣೆ ಇಲ್ಲದೇ ಅರ್ಧ ಎಕರೆಯಷ್ಟು ಖಾಲಿ ನಿವೇಶನ ಪಾಳು ಬಿದ್ದಿದೆ.
ಗುರುಭವನ ನಿರ್ಮಾಣಕ್ಕಾಗಿ ಒಟ್ಟು 24 ಗುಂಟೆ ನಿವೇಶನ (ಮೊದಲು 14 ಗುಂಟೆ ಬಳಿಕ 10 ಗುಂಟೆ) ವನ್ನು ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ಪುರಸಭೆ ವತಿಯಿಂದ ಕಡಿಮೆ ದರದಲ್ಲಿ ಪಡೆದುಕೊಂಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ₹ 2.5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಿತ್ತು. 2014 ರಲ್ಲಿ ಭೂಮಿಪೂಜೆ ಕೂಡ ನೆರವೇರಿಸಿದ್ದರೂ ಕಟ್ಟಡ ಮಾತ್ರ ತಲೆ ಎತ್ತಿಲ್ಲ.ಶಿಕ್ಷಕರ ಸಂಘ ಪಡೆದುಕೊಂಡಿರುವ ಕೋಟ್ಯಂತರ ಮೌಲ್ಯದ ಆಸ್ತಿಯೊಂದು ಇದೀಗ ಇದ್ದೂ ಇಲ್ಲದಂತಾಗಿದೆ. ಸದರಿ ನಿವೇಶನದಲ್ಲಿನ ಗುಂಡಿಗಳಲ್ಲಿ ನೀರು ತುಂಬಿದ್ದು ಡೆಂಘೀ ಸೇರಿದಂತೆ ಇನ್ನಿತರ ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತಿದೆ. ನಿರ್ವಹಣೆ ಇಲ್ಲದೇ ಮುಳ್ಳಿನ ಗಿಡಗಂಟಿಗಳು ಬೆಳೆದು ನಿಂತಿದ್ದು ವಿಷಜಂತುಗಳು ಮನೆ ಮಾಡಿಕೊಂಡಿವೆ.
ಶಿಕ್ಷಕರ ಸಂಘಟನೆ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂಥದೊಂದು ಅವಾಂತರ ಆಗಿದೆ.ನೋಟಿಸ್ ಜಾರಿ
ಖಾಲಿ ನಿವೇಶನಗಳಲ್ಲಿ ಮಳೆನೀರು ಸಂಗ್ರಹಗೊಂಡಲ್ಲಿ, ಕಸಕಡ್ಡಿ ಸಂಗ್ರಹದಿಂದ ದುರ್ವಾಸನೆಯಾದಲ್ಲಿ, ಮುಳ್ಳು ಗಿಡಗಂಟಿಗಳು ಬೆಳೆದು ಸ್ವಚ್ಛಗೊಳಿಸದಿದ್ದಲ್ಲಿ ಆರೋಗ್ಯ ಸೇರಿದಂತೆ ಇನ್ನಿತರ ಸುರಕ್ಷತಾ ಕಾರಣಗಳಿಗೆ ನಿವೇಶನ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಅಷ್ಟಕ್ಕೂ ಕ್ರಮಕೈಗೊಳ್ಳದಿದ್ದಲ್ಲಿ ಪುರಸಭೆ ಹಣದಿಂದ ಸ್ವಚ್ಛಗೊಳಿಸಿ ಸದರಿ ನಿವೇಶನದ ಮೇಲೆ ಭೋಜಾ ಕೂಡ್ರಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೇಳಿದರು.ಸಂಪನ್ಮೂಲ ಕೊರತೆಯಿಂದ ಗುರುಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ. ಈಗಿರುವ ಹಣದಲ್ಲಿ ಕಟ್ಟಡ ನಿರ್ಮಾಣ ಅಸಾಧ್ಯ, ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಿರ್ಮಾಣಗೊಂಡಿರುವ ಗುರುಭವನದ ನಕ್ಷೆ ಹಾಗೂ ವೆಚ್ಚದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಹೇಳಿದರು.ಪ್ರಾಥಮಿಕ ಶಾಲಾ ಶಿಕ್ಷಕರು ₹ 3 ಸಾವಿರ, ಪ್ರೌಢಶಾಲೆ ಶಿಕ್ಷಕರು ₹ 5 ಹಾಗೂ ಕಾಲೇಜು ಶಿಕ್ಷಕರು ₹10 ಸಾವಿರ ಸೇರಿದಂತೆ ಸಾರ್ವಜನಿಕ ವಂತಿಗೆಯೊಂದಿಗೆ ಗುರುಭವನ ನಿರ್ಮಾಣಕ್ಕೆ ಮುಂದಾಗಿದ್ದೆವು. ಆದರೆ ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿಲ್ಲ ಬ್ಯಾಡಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಂದ್ರು ಸಣ್ಣಗೌಡ್ರ ಹೇಳಿದರು.