ಸಾರಾಂಶ
ಮಂಗಳೂರು : ನನ್ನನ್ನು ಕ್ಷೇತ್ರದಲ್ಲಿ ಮತದಾರರು ನಿರ್ಲಕ್ಷ್ಯ ಮಾಡಿಲ್ಲ. ಒಂದು ಚುನಾವಣೆಯನ್ನೂ ಸೋತಿಲ್ಲ. ಕಾರ್ಯಕರ್ತರು ನನ್ನನ್ನು ವಿರೋಧಿಸಿ ಗೋ ಬ್ಯಾಕ್ ಅಂದಿಲ್ಲ. ನಮ್ಮಲ್ಲಿ ಗೋಬ್ಯಾಕ್ ಅಂದವರಿಗೇ ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ನನಗೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.
‘ಕೆಲವರಿಗೆ ಅಧಿಕಾರ ಇಲ್ಲದೆ ಇರಲು ಆಗದು’ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಇತ್ತೀಚೆಗೆ ಉಡುಪಿಯಲ್ಲಿ ನೀಡಿದ ಹೇಳಿಕೆ ಕುರಿತಂತೆ ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ರಘುಪತಿ ಭಟ್ ಈ ಪ್ರತಿಕ್ರಿಯೆ ನೀಡಿದರು.
ಅವರು ಈ ಮಾತನ್ನು ಎಲ್ಲರನ್ನೂ ಉದ್ದೇಶಿಸಿ ಹೇಳಿರಬಹುದು. 70 ವರ್ಷ ಮೇಲ್ಪಟ್ಟವರು, ಸೋತವರನ್ನೂ ಲೋಕಸಭೆಗೆ ನಿಲ್ಲಿಸಲಾಗಿದೆ. ನಾನು ಈ ಸ್ಪರ್ಧೆ ಮಾಡಲು ಕಾರಣ ನಾನು ಸಕ್ರಿಯವಾಗಿ ಜನಪ್ರತಿನಿಧಿಯಾಗಿದ್ದವನು. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ವಯಸ್ಸು ನನ್ನದಲ್ಲ. ವಿಧಾನಸಭೆಗೆ ಇನ್ನು ನಾಲ್ಕು ವರ್ಷ ಕಾಯುವುದಾದರೆ ಅಲ್ಲಿ ನಾನೇ ಗೆಲ್ಲಿಸಿದ ಶಾಸಕರಿದ್ದು, ಮತ್ತೆ ಸ್ಪರ್ಧಿಸಲು ಆಗದು ಎಂದರು.
ಪದವೀಧರ ನೋಂದಣಿ ಬದಲಾವಣೆ: ಒಮ್ಮೆ ಪದವಿ ದೊರಕಿದ ಬಳಿಕ ಶಾಶ್ವವಾಗಿರುತ್ತದೆ. ಹಾಗಿರುವಾಗ ಆರು ವರ್ಷಗಳಿಗೊಮ್ಮೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಅನಗತ್ಯ. ಇಂತಹ ವ್ಯವಸ್ಥೆಗಳಿಂದಾಗಿ ಸೀಮಿತ ಮತದಾರರ ನಡುವೆ ಮಾತ್ರವೇ ಸ್ಪರ್ಧೆಗೆ ಸಾಧ್ಯವಾಗುತ್ತಿದ್ದು, ಈ ವ್ಯವಸ್ಥೆಯನ್ನು ಬದಲಿಸಲು ಮುಂದಾಗುತ್ತೇನೆ ಎಂದು ಅವರು ಹೇಳಿದರು.ಸಹವರ್ತಿಗಳಾದ ಅಶ್ವಿನ್ ಕುಮಾರ್, ನವೀನ್‌ಚಂದ್ರ, ಸೂರಜ್, ರಾಘವೇಂದ್ರ, ಕೃಷ್ಣ ಶೆಣೈ, ಸಂತೋಷ್ ರಾವ್ ಇದ್ದರು.